ಕರಾವಳಿ

ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ ವಾರ್ಷಿಕ ಸಮಾವೇಶ ಮತ್ತು ಸಾಧಕರ ಸಮ್ಮಾನ

Pinterest LinkedIn Tumblr

ಮಂಗಳೂರು, ಡಿಸೆಂಬರ್. 14: ಕಲಿಕೆ ಕೇವಲ ಉದ್ಯೋಗಕ್ಕೆ ಮಾತ್ರ ಸೀಮಿತವಾಗದೆ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಗೆ ಪೂರಕ ಆಗ ಬೇಕು ಹಾಗೂ ಸಮಾಜದ ಎಲ್ಲ ರಂಗಗಳಲ್ಲಿಯೂ ಪ್ರವೇಶ ಪಡೆದು ಸಾಧನೆ ಮಾಡ ಬೇಕೆಂದು ಮಂಗಳೂರು ಧರ್ಮ ಪ್ರಾಂತದ ಬಿಷಪ್ ಅತಿ ವಂ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಕ್ರೈಸ್ತ ಯುವಜನರಿಗೆ ಕರೆ ನೀಡಿದರು.

ಅವರು ರವಿವಾರ ಕೊಡಿಯಾಲ್‌ಬೈಲ್‌ನ ಬಿಷಪ್ಸ್ ಹೌಸ್ ಸಭಾಂಗಣದಲ್ಲಿ ನಡೆದ ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್ ಇದರ ವಾರ್ಷಿಕ ಸಮಾವೇಶ ಮತ್ತು ಸಾಧಕರ ಸಮ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆಗಳ ಜತೆಗೆ ಜರ್ಮನ್, ಫ್ರೆಂಚ್ ಮತ್ತಿತರ ಅಂತಾರಾಷ್ಟ್ರೀಯ ಭಾಷೆಗಳನ್ನು ಕಲಿಯ ಬೇಕು. ವಿವಿಧ ಜಾಗತಿಕ ಭಾಷೆಗಳಲ್ಲಿರುವ ಲೇಖನ ಮತ್ತು ಪುಸ್ತಕಗಳನ್ನು ಓದಿ ವೈಜ್ಞಾನಿಕ ಸಂಶೋಧನೆಯನ್ನು ನಡೆಸಲು ಕೆಥೋಲಿಕ್ ಸಭಾ ಸಂಘಟನೆ ಪ್ರೇರಣೆ ನೀಡ ಬೇಕೆಂದು ಅವರು ಸಲಹೆ ಮಾಡಿದರು.

ಸಾಧಕರಿಗೆ ಸಮ್ಮಾನ:

ಕೆಥೋಲಿಕ್ ಸಮಾಜದ ಸಾಧಕರಾದ ವಾಲ್ಟರ್ ನಂದಳಿಕೆ, ಡಾ| ಸಿಪ್ರಿಯನ್ ಮೊಂತೇರೊ, ಫ್ರಾನ್ಸಿಸ್ ಮಾಕ್ಸಿಂ ಮೊರಾಸ್, ರಫ್ತು ಉತ್ತೇಜನಾ ಮಂಡಳಿಯ ಮಾಜಿ ಅಧ್ಯಕ ವಾಲ್ಟರ್ ಡಿ’ ಸೋಜಾ, ರಾಜ್ಯ ಸರಕಾರದ ಯೋಜನಾ ಆಯೋಗದ ಸದಸ್ಯ ಮಾರ್ಸೆಲ್ ಮೊಂತೇರೊ, ಉಪ್ಪಿನಂಗಡಿಯ ಪ್ರಗತಿಪರ ರೈತ ವಿಲಿಯಂ ಲೋಬೊ, ರಿಕ್ಷಾ ಚಾಲಕ ಮೊಂತು ಲೋಬೊ, ರೈತ ಸಂಘದ ಮುಖಂಡ ಆಲ್ವಿನ್ ಮಿನೇಜಸ್ ಅವರನ್ನು ಸಮ್ಮಾನಿಸಲಾಯಿತು.

ವಾಲ್ಟರ್ ಡಿ’ ಸೋಜಾ ಮಾತನಾಡಿ ಕೆಥೋಲಿಕ್ ಸಮುದಾಯ ಭವನವೊಂದನ್ನು ನಿರ್ಮಾಣ ಮಾಡುವ ಆವಶ್ಯಕತೆ ಇದ್ದು, ಈ ಯೋಜನೆಗೆ ಬಿಷಪ್ ಸಹಿತ ಎಲ್ಲರ ಸಹಕಾರ ಬೇಕೆಂದರು.

ಸಮಾಜದ ಮೂವರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಮುಖ್ಯ ಅತಿಥಿಯಾಗಿದ್ದ ಐ‌ಎಫ್‌ಎಸ್ ಅಽಕಾರಿ ಆಂಟನಿ ಮರಿಯಪ್ಪ ಅವರು ವಿತರಿಸಿದರು.

ಕೆಥೋಲಿಕ್ ಸಭಾ ಸಂಘಟನೆಗೆ ಅತ್ಯಧಿಕ ಸಂಖ್ಯೆಯಲ್ಲಿ ಸದಸ್ಯರನ್ನು ನೇಮಕ ಮಾಡಿದ ವಲಯಗಳ ಅಧ್ಯಕ್ಷರನ್ನು ಕ್ರೈಸ್ತ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜೊಯ್ಲಸ್ ಡಿ’ಸೋಜಾ ಸಮ್ಮಾನಿಸಿದರು.

ಸಂಘಟನೆಯ ಆರೋಗ್ಯ ನಿಧಿಯಿಂದ ಇಬ್ಬರಿಗೆ ಆರ್ಥಿಕ ನೆರವನ್ನು ಎ‌ಐಸಿಯು ರಾಷ್ಟ್ರೀಯ ಅಧ್ಯಕ್ಷ ಲ್ಯಾನ್ಸಿ ಡಿ’ಕುನ್ಹಾ ವಿತರಿಸಿದರು. ಹೊಸತಾಗಿ ಆರಂಭವಾದ 7 ಘಟಕಗಳ ಮುಖ್ಯಸ್ಥರನ್ನು ಆಧ್ಯಾತಿಕ ನಿರ್ದೇಶಕ ವಂ| ಮ್ಯಾಥ್ಯೂ ವಾಸ್ ಗೌರವಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೆಥೊಲಿಕ್ ಸಭಾ ಅಧ್ಯಕ್ಷ ಪಾವ್ಲ್ ರೋಲಿ ಡಿ’ ಕೋಸ್ತಾ ಅವರು ಬದಲಾಗುತ್ತಿರುವ ಸಾಮಾಜಿಕ, ರಾಜಕೀಯ ಪರಿಸ್ಥಿತಿಯಲ್ಲಿ ಹೊಸ ಸವಾಲುಗಳನ್ನು ಎದುರಿಸಲು ಸಂಘಟನೆಯು ಕಂಕಣ ಬದ್ಧವಾಗ ಬೇಕು ಎಂದರು.

ಉಪಾಧ್ಯಕ್ಷ ಹೆರಿ ರೇಗೊ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನವೀನ್ ಬ್ರಾಗ್ಸ್ ವಾರ್ಷಿಕ ವರದಿ ಮಂಡಿಸಿದರು. ಸಹ ಕಾರ್ಯದರ್ಶಿ ಅಜಯ್ ಪಾಯ್ಸ್ ವಂದಿಸಿದರು. ವಿಕ್ಟರ್ ಕೊರೆಯಾ ಮತ್ತು ಗ್ರೆಟ್ಟಾ ಫೆರ್ನಾಂಡಿಸ್ ಕಾರ್ಯಕ್ರಮ ನಿರ್ವಹಿಸಿದರು.

Comments are closed.