ಕರಾವಳಿ

ಪಂಜರ ಕೃಷಿ ಮೀನುಗಳ ಸಾವು ಪ್ರಕರಣ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ

Pinterest LinkedIn Tumblr

ಕುಂದಾಪುರ: ಕಳೆದೊಂದು ವಾರದಿಂದ ಪಂಜರ ಮೀನುಗಾರಿಕಾ ಕೃಷಿ ಮೀನುಗಳು ನಿಗೂಢವಾಗಿ ಸಾಯುತ್ತಿದೆ. ಕುಂದಾಪುರ ಭಾಗದಲ್ಲಿ ೧೧೫ ಕುಟುಂಬಗಳು ಪಂಜರ ಮೀನುಗಾರಿಕೆಯನ್ನು ನಡೆಸುತ್ತಿದ್ದು, ಮೀನುಗಳು ಸಾಯುತ್ತಿರುವುದರಿಂದ ಅಪಾರ ನಷ್ಟ ಅನುಭವಿಸಿದ್ದಾರೆ ಎಂದು ಮೀನುಗಾರಿಕ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರು ಹೇಳಿದರು‌

ಭಾನುವಾರ ಪಂಜರ ಮೀನುಗಾರಿಕ ಕೃಷಿಯಲ್ಲಿ ಉಂಟಾದ ಸಮಸ್ಯೆಯನ್ನು ಅವಲೋಕಿಸಲು ಮೀನುಗಾರಿಕ ಇಲಾಖಾ ವಿಜ್ಞಾನಿಗಳ ತಂಡದೊಂದಿಗೆ ಭೇಟಿ ನೀಡಿದರು.

ಅತಂತ್ರ ಸ್ಥಿತಿಯಲ್ಲಿ ಮೀನುಗಾರರು ಹಾಗೂ ಮೀನುಗಾರಿಕ ಇಲಾಖೆ ಸಿಕ್ಕಿ ಬಿದ್ದಿದೆ‌‌. ಯಾವ ಕಾರಣಕ್ಕೆ ಪಂಜರ ಕೃ಼ಷಿಯ ಮೀನುಗಳು ಸಾಯುತ್ತಿದೆ ಎಂಬುದು ಪತ್ತೆಯಾಗಿಲ್ಲ. ವಿಜ್ಞಾನಿಗಳು ನೀರಿನ ಮಾದರಿಯನ್ನು ಪಡೆದು ಪರೀಕ್ಷೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಮೂರು ಕಾರಣಗಳು ಎಂದು ಊಹಿಸಲಾಗಿದೆ.

ನೀರಿನಲ್ಲಿರುವ ಲವಣಾಂಶ ಮತ್ತು ಪಂಜರದೊಳಗಿರುವ ಮೀನಿಗೆ ಉಸಿರಾಟದ ಸಮಸ್ಯೆ, ಪಂಜರ ಮೀನು ಕೃಷಿ ನಡೆಸುವ ಭಾಗಕ್ಕೆ ಕೊಳಚೆ ನೀರು ಬಂದು ಸೇರುತ್ತಿರುವುದು ಹಾಗೂ ಇತ್ತೀಚೆಗೆ ಸಮುದ್ರ ನೀಲಿ ಬಣ್ಣಕ್ಕೆ ತಿರುಗಿದ್ದು ಕೂಡ ಕಾರಣವೇ ಎಂಬುದು ಸ್ಪಷ್ಟವಾಗಿಲ್ಲ. ವಿಜ್ಞಾನಿಗಳ ವರದಿಯನ್ನು ಎದುರು ನೋಡುತ್ತಿದ್ದೇವೆ. ಈ ಸಮಸ್ಯೆಗೆ ಸೂಕ್ತ ಪರಿಹಾರ ನೀಡಿ ನಷ್ಟ ಅನುಭವಿಸಿದ ಮೀನುಗಾರರಿಗೆ ನಿಯಮವನ್ನು ನೋಡಿಕೊಂಡು ಪರಿಹಾರ ನೀಡಲು ಚರ್ಚಿಸಲಾಗುವುದು ಎಂದು ನುಡಿದರು.

ಈ ಸಂದರ್ಭದಲ್ಲಿ ಮೀನುಗಾರಿಕಾ ಇಲಾಖೆಯ ನಿರ್ದೇಶಕರಾದ ತಿಪ್ಪೇಸ್ವಾಮಿ, ಉಪನಿರ್ದೇಶಕ ಗಣೇಶ್, ಮೀನುಗಾರಿಕಾ ಇಲಾಖಾ ಅಧಿಕಾರಿಗಳಾದ ಶಿವಕುಮಾರ್ ಮತ್ತು ಸುಮಲತಾ ಉಪಸ್ಥಿತರಿದ್ದರು.

ಪರೀಕ್ಷೆಗೆಂದು ಈ ಭಾಗದ ನೀರನ್ನು ಮಂಗಳೂರಿನ ಮೀನುಗಾರಿಕಾ ಕಾಲೇಜ್ ನವರು ತೆಗೆದುಕೊಂಡು ಹೋಗಿದ್ದು, ಮೀನನ್ನು ವಿಜ್ಞಾನಿಗಳು ಪಡೆದುಕೊಂಡಿದ್ದು ಸೋಮವಾರ ಅಧಿಕೃತ ವರದಿ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments are closed.