ಕುಂದಾಪುರ : ಸಮಾಜದಲ್ಲಿ ಆಗುವ ಸಮಸ್ಯೆಗಳನ್ನು ತಮ್ಮ ಕುಂಚದ ಮೂಲಕ ತೋರಿಸುವ ವ್ಯಂಗ್ಯಚಿತ್ರಕಾರರ ಕಲ್ಪನೆಗಳಿಗೆ ಸಮಾಜದ ಆಗು–ಹೋಗುಗಳನ್ನು ತಿದ್ದುವ ಶಕ್ತಿ ಇದೆ ಎಂದು ಮಂಗಳೂರು ನಗರದ ಡಿಸಿಪಿ ಹರಿರಾಂಶಂಕರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಸರ್ಕಾರಿ ಜ್ಯೂನಿಯರ್ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಭಾನುವಾರ ನಡೆದ ಕಾರ್ಟೂನ್ ಹಬ್ಬ–2020 ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೊರೊನಾ ಸಂಕಷ್ಟ ಎದುರಿಸಿದ ಸಂದರ್ಭದಲ್ಲಿ ಕುಂದಾಪುರದ ಎಲ್ಲ ವರ್ಗದ ಜನರು ಒಂದೇ ಮನಸ್ಸಿನಲ್ಲಿ ಇದನ್ನು ಎದುರಿಸಲು ನಿರ್ಧಾರ ಮಾಡಿರುವುದರಿಂದ ಕೊರೊನಾ ನಿಯಂತ್ರಣ ನಿರೀಕ್ಷೆಯಂತೆ ಆಗಿದೆ. ಕುಂದಾಪುರ ಪರಿಸರದಲ್ಲಿ ಸಾಕಷ್ಟು ಮಂದಿ ಅಂತರಾಷ್ಟ್ರೀಯ ಮನ್ನಣೆ ಗಳಿಸಿದ ಪ್ರತಿಭಾನ್ವೀತರಿದ್ದಾರೆ. ಕಾರ್ಟೂನ್ ಹಬ್ಬದಂತಹ ಕಾರ್ಯಕ್ರಮಗಳು ನಡೆದಾಗ ಇಂತಹ ಪ್ರತಿಭೆಗಳು ಅನಾವರಣಗೊಳ್ಳುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಪ್ರಸಿದ್ಧ ವ್ಯಂಗ್ಯ ಚಿತ್ರಕಾರ ಸತೀಶ್ ಆಚಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ನಾನು ಕೇರಳದವನಾಗಿದ್ದರೂ, ಕುಂದಾಪುರದಲ್ಲಿ ಕಳೆದ ಒಂದೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಳಿಕ ಇಲ್ಲಿಯವನೇ ಆಗಿದ್ದೇನೆ, ಈ ನಂಟು ಶಾಶ್ವತವಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಸಿದ್ಧ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ ಅವರು, ಕುಂದಾಪುರದ ನೀರಿಗೆ ಕಾರ್ಟೂನಿಷ್ಟ್‌ಗಳನ್ನು ಬೆಳೆಸುವ ಶಕ್ತಿ ಇದೆ. ವ್ಯಂಗ್ಯ ಚಿತ್ರಗಳು ಯೋಚನೆಯ ಮೂಲಕವೇ ಮೂಡುವುದು. ವ್ಯಂಗ್ಯ ಚಿತ್ರಕಾರರು ನೇರವಾಗಿ ಸತ್ಯವನ್ನು ಹೇಳುವ ಧೈರ್ಯವನ್ನು ತೋರುತ್ತಿದ್ದಾರೆ ಎಂದರು.
ಮಂಗಳೂರಿನ ವೈದ್ಯ ಹಾಗೂ ಚಿಂತಕ ಡಾ.ಶ್ರೀನಿವಾಸ ಕಕ್ಕಿಲಾಯ. ಬೆಂಗಳೂರಿನ ಟಿಪ್ ಸಂಸ್ಥೆಯ ಸಿಇಓ ದಿವ್ಯಾ ಹೆಗ್ಡೆ ಅತಿಥಿಗಳಾಗಿದ್ದರು.
ಕಾರ್ಟೂನ್ ಹಬ್ಬದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಕೊರೊನಾ ಯೋಧರಾದ ನಾಗರಾಜ್ ಕೋಟ, ರಾಜೇಶ್ ವಡೇರಹೋಬಳಿ, ಮನೀಷ್ ಕರ್ವಾಲೋ, ಇಮ್ತಿಯಾಜ್ ಬಸ್ರೂರು, ವಿಠ್ಠಲ್ ಕುಂದರ್, ಮೊಮಿನ್ ಸಮೀರ್ ಗಂಗೊಳ್ಳಿ, ಸಾಯಿನಾಥ್ ಶೇಟ್, ವಿಶ್ವನಾಥ. ಕುಂದಾಪುರ ಕೋವಿಡ್ ಆಸ್ಪತ್ರೆಯ ಮಂಜುಳಾ ಟಿ, ಆಶಾ ಸುವರ್ಣ, ನಯನಾ, ತಾರಾ, ಜ್ಯೋತಿ ಆರ್, ಮಮತಾ ನಾಯ್ಕ್, ಜ್ಯೋತಿ ಡಿ ನಾಯ್ಕ್, ಶಾಂಭವಿ, ಲೊಲಿಟಾ, ಮಂಜುಳಾ, ಸವಿತಾ, ಶಾಂತಾ, ದೀಪಕ್, ಮಹಂತೇಶ್ ಹಾಗೂ ರಾಜೇಶ್ ಕುಮಾರ್ ಅವರನ್ನು ಗೌರವಿಸಲಾಯಿತು.
ಕಾರ್ಟೂನ್ ಹಬ್ಬದ ಸಂಘಟಕ ಸತೀಶ್ ಆಚಾರ್ಯ ಅತಿಥಿಗಳನ್ನು ಗೌರವಿಸಿದರು. ಅವಿನಾಶ್ ಕಾಮತ್ ನಿರೂಪಿಸಿದರು.
Comments are closed.