
ಮುಂಬೈ: ಪ್ರತಿಷ್ಠಿತ ಗ್ಲೋಬಲ್ ಟೀಚರ್ ಪ್ರೈಜ್ಗೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪ್ರಾಥಮಿಕ ಶಾಲೆಯೊಂದರ ಅಧ್ಯಾಪಕ ರಂಜಿತ್ ಸಿಂಹ ದಿಸಾಳೆ ಪಾತ್ರರಾಗಿದ್ದಾರೆ.
ಸೊಲ್ಲಾಪುರದ ಪರಿತೆವಾಡಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿರುವ ಇವರು, ಅಲ್ಲಿನ ಕನ್ನಡ ಮಾಧ್ಯಮದ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಪಠ್ಯ ಪುಸ್ತಕಗಳನ್ನು ಮರು ವಿನ್ಯಾಸ ಮಾಡುವ ಮೂಲಕ ಗುರುತಿಸಿ ಕೊಂಡಿದ್ದಾರೆ. ಗ್ಲೋಬಲ್ ಟೀಚರ್ ಪ್ರೈಜ್ ಅನ್ನು ಲಂಡನ್ನಿನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿ ವರ್ಚುವಲ್ ಆಗಿ ಘೋಷಣೆ ಮಾಡಲಾಗಿದೆ.
ಈ ಪ್ರಶಸ್ತಿಯನ್ನು ವರ್ಕಿ ಫೌಂಡೇಶನ್ ನೀಡುತ್ತಿದ್ದು, ಇದು ಪ್ರಶಸ್ತಿಯ ಜೊತೆಗೆ 7.37 ಕೋಟಿ ರೂ. ನಗದು ಮೊತ್ತವನ್ನು ಸಹ ಒಳಗೊಂಡಿದೆ. ಈ ಮೊತ್ತದ ಅರ್ಧ ಭಾಗವನ್ನು ಅಂತಿಮ ಸುತ್ತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹಂಚುವುದಾಗಿಯೂ ಅವರು ತಿಳಿಸಿದ್ದಾರೆ. ಈ ಪ್ರಶಸ್ತಿ ಪಡೆಯಲು 140 ದೇಶಗಳ 12 ಸಾವಿರಗಳಷ್ಟು ಶಿಕ್ಷಕರು ಅರ್ಜಿ ಸಲ್ಲಿಸಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.
ಕರ್ನಾಟಕದ ಗಡಿ ಭಾಗದ ವಿದ್ಯಾರ್ಥಿಗಳಿಗೆ ಕನ್ನಡದ ಹೊರತಾಗಿ ಬೇರೆ ಭಾಷೆ ತಿಳಿಯುತ್ತಿರಲಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಆ ವಿದ್ಯಾರ್ಥಿಗಳ ಕಲಿಕೆಗೆ ಪಠ್ಯ ಮರುವಿನ್ಯಾಸ ಮಾಡುವ ಮೂಲಕ ದಿಸಾಳೆ ನೆರವಾಗಿದ್ದರು. ಇವರಿಗೆ ಇದೀಗ ಈ ಪ್ರಶಸ್ತಿ ದೊರೆತಿರುವುದು ಸರ್ಕಾರಿ ಶಾಲಾ ವ್ಯವಸ್ಥೆ ಮತ್ತು ಅಲ್ಲಿ ಕೆಲಸ ಮಾಡುವ ಶಿಕ್ಷಕರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದೇ ಹೇಳಬಹುದಾಗಿದೆ.
ಮಾಹಿತಿ : ದಿನೇಶ್ ಕುಲಾಲ್, ಮುಂಬೈ
Comments are closed.