ಕರಾವಳಿ

ಮಂಗಳೂರು ಹಿಂಸಾಚಾರ, ಗೋಲಿಬಾರ್ ಪ್ರಕರಣದ 50 ಪುಟಗಳ ಅಂತಿಮ ವರದಿ ಸರಕಾರಕ್ಕೆ ಸಲ್ಲಿಕೆ

Pinterest LinkedIn Tumblr

ಮಂಗಳೂರು, ಡಿಸೆಂಬರ್.04: ಕಳೆದ ಡಿ.19 ರಂದು ನಡೆದ ಮಂಗಳೂರು ಹಿಂಸಾಚಾರ ಮತ್ತು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದ ಮ್ಯಾಜಿಸ್ಟೀರಿಯಲ್ ತನಿಖೆಯ ಅಂತಿಮ ವರದಿಯನ್ನು ರಾಜ್ಯ ಗೃಹ ಇಲಾಖೆಗೆ ಸಲ್ಲಿಸಲಾಗಿದೆ ಎಂದು ತನಿಖಾಧಿಕಾರಿ ಹಾಗೂ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

50 ಪುಟಗಳ ವರದಿ ಮತ್ತು ಸುಮಾರು 2500 ದಾಖಲೆಗಳನ್ನು ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಕೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಂದು ನಡೆದ ಮೊದಲನೆ ಘಟನೆಯ ವಿವರ:

ನಗರದಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಇದ್ದರೂ..ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿಷೇಧಾಜ್ಞೆ ಉಲ್ಲಂಘಿಸಿ ನಗರದ ಸ್ಟೇಟ್ ಬ್ಯಾಂಕ್ ಬಳಿಯಿರುವ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆಯಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಅಶ್ರುವಾಯು ಸಿಡಿಸಿ ಹಲವರನ್ನುಬಂಧಿಸಿರುವ ಘಟನೆ 2019ರ ಡಿಸೆಂಬರ್ 19ರಂದು ಗುರುವಾರ ನಡೆದಿತ್ತು.

ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯುವ ಬಗ್ಗೆ ಮುನ್ಶೂಚನೆ ಲಭಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಈ ನಡುವೆ ಎಸ್ಕೆಎಸ್ಸೆಸ್ಸೆಫ್ ಸಂಘಟನೆಯು ಪ್ರತಿಭಟನೆ ನಡೆಸುವ ಸುಳಿವು ಪೊಲೀಸರಿಗೆ ದೊರಕಿತ್ತು. ಈ ಹಿನ್ನಲೆಯಲ್ಲಿ ಪೊಲೀಸರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬಂದೋಬಸ್ತ್ ಕಲ್ಪಿಸಿದ್ದರು

ಆದರೆ ಸ್ಟೇಟ್ ಬ್ಯಾಂಕ್ ಬಳಿಯ ಸಿಟಿ ಬಸ್ ನಿಲ್ದಾಣದ ಸಮೀಪ ಕೆಲವರು ಗುಂಪು ಜಮಾಯಿಸಿ ಘೋಷಣೆ ಕೂಗತೊಡಗಿದರು. ಬಳಿಕ ಜೋರಾಗಿ ಘೋಷಣೆ ಕೂಗಿಕೊಂಡು ಜಿಲ್ಲಾಧಿಕಾರಿ ಕಚೇರಿ ಬಳಿ ಬರಲು ಯತ್ನಿಸುತ್ತಿದ್ದಂತೆ ಪೊಲೀಸರು ಲಘು ಲಾಠಿಚಾರ್ಜ್ ಮಾಡಿ ಗುಂಪನ್ನು ಚದುರಿಸಲು ಯತ್ನಿಸಿದರು.

ಪ್ರತಿಭಟನೆ ತೀವ್ರರೂಪ ಪಡೆಯುತ್ತಿದ್ದಂತೆ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಲಾಠಿಚಾರ್ಜ್ ಬೆನ್ನಲ್ಲೇ ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸ್ ವಾಹನದತ್ತಲೂ ಕಲ್ಲು ತೂರಾಟ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದ್ದಾರೆ.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಬಳಿ ಬಸ್ ಸಂಚಾರ ಅಸ್ತವ್ಯಸ್ತಗೊಂಡಿದೆ. ಈ ನಡುವೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯಿಂದ ಆತಂಕಗೊಂಡಿರುವ ಪರಿಸರದ ಅಂಗಡಿಮುಂಗಟ್ಟುಗಳ ಮಾಲಕರು ಸ್ವಯಂಪ್ರೇರಿತವಾಗಿ ಅಂಗಡಿಮುಂಗಟ್ಟುಗಳಿಗೆ ಬೀಗ ಜಡಿದಿದ್ದರು.

ಬಳಿಕ ಸಂಜೆ ನಡೆದ ಎರಡನೇಯ ಘಟನೆಯ ವಿವರ:

ಪೌರತ್ವ ಕಾಯ್ದೆ ವಿರೋಧಿಸಿ ನಗರದಲ್ಲಿ ನಡೆದ ಪ್ರತಿಭಟನೆ ಸಂದರ್ಭ ಬಂದರು ಠಾಣೆಗೆ ಬೆಂಕಿ ಹಚ್ಚಲು ಮುಂದಾದ ಉದ್ರಿಕ್ತರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದು,ಈ ಗುಂಡಿಗೆ ಇಬ್ಬರು ಬಲಿಯಾಗಿದ್ದಾರೆ.

ಅಂದಿನ ಮಂಗಳೂರು ನಗರ ಪೊಲೀಸ್ ಆಯುಕ್ತ ಪಿ.ಎಸ್.ಹರ್ಷ ಅವರು ಹೇಳುವ ಪ್ರಕಾರ, ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ನಗರದ ಸ್ಟೇಟ್ ಬ್ಯಾಂಕ್ ಬಳಿ ನಿಷೇಧಾಜ್ಞೆ ಉಲ್ಲಂಘಿಸಿ ಜಮಾಯಿಸಿದ ಗುಂಪೊಂದರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿ ಹಲವರನ್ನು ವಶಕ್ಕೆ ಪಡೆದ ಬಳಿಕ ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯಲ್ಲಿ ಸುಮಾರು ಏಳು ಸಾವಿರಕ್ಕೂ ಅಧಿಕ ಉದ್ರಿಕ್ತರ ಗುಂಪು ಠಾಣೆಯ ಮೇಲೆ ದಾಳಿ ನಡೆಸಿದೆ.

ಠಾಣೆಯನ್ನು ಸುತ್ತುವರಿದ ಗುಂಪು ಠಾಣೆಯೊಳಗಿದ್ದ ಸಿಬ್ಬಂದಿಗಳಿಗೆ ಠಾಣೆಯಿಂದ ಹೊರ ಬರಲು ಅವಕಾಶ ನೀಡದೆ ಹಲ್ಲೆ ನಡೆಸಲು ಹಾಗೂ ಠಾಣೆಗೆ ಬೆಂಕಿ ಹಚ್ಚಲು ಮುಂದಾಗಿದೆ. ಉದ್ರಿಕ್ತ ಗುಂಪು ದಾಳಿಗೆ ಮುಂದಾದಾಗ ಯಾವುದೇ ಆಯ್ಕೆ ಇಲ್ಲದೇ ನಾವು ಬಲಪ್ರಯೋಗ ಮಾಡಿದ್ದೇವೆ. ಪೊಲೀಸ್ ಠಾಣೆಗೆ ದಾಳಿ ಹಾಗೂ ಪೊಲೀಸರ ಹತ್ಯಾ ಯತ್ನ ನಡೆಸಿದ ಹಿನ್ನೆಲೆಯಲ್ಲಿ ನಾವು ಪ್ರತಿರೋಧ ತೋರಿದ್ದೇವೆ.

ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಕಾರಣ ಅನಿವಾರ್ಯವಾಗಿ ಅಧಿಕಾರಿಗಳು ಬಲಪ್ರಯೋಗ ಮಾಡಿದ್ದಾರೆ. ಘಟನೆಯಿಂದ ಹಲವಾರು ಪೊಲೀಸರಿಗೆ ಗಂಭೀರ ಗಾಯಗಳಾಗಿವೆ. ಅಷ್ಟಕ್ಕೂ ಸುಮ್ಮನಾಗದ ಉದ್ರಿಕ್ತರು ಮತ್ತೆ ಮುನ್ನುಗ್ಗಿ ಸಿಬ್ಬಂದಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಇದರಲ್ಲಿ ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಂದಿನ ಮಂಗಳೂರು ನಗರ ಪೊಲೀಸ್ ಆಯುಕ್ತ ಪಿ.ಎಸ್.ಹರ್ಷ ತಿಳಿಸಿದ್ದಾರೆ.

ಮಂಗಳೂರಿನಲ್ಲಿ 2019, ಡಿ.19ರಂದು ಪ್ರತಿಭಟನೆ ಹೆಸರಿನಲ್ಲಿ ನಡೆದ ಹಿಂಸಾಚಾರ ಮತ್ತು ಗೋಲಿಬಾರ್ ಪ್ರಕರಣದ ಕಡತ ಚಿತ್ರ

ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಕೆ:

ಈ ಎಲ್ಲಾ ಘಟನೆಗಳ ಬಗ್ಗೆ ಅರೋಪ ಪ್ರತ್ಯಾರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಸರ್ಕಾರ ಉಡುಪಿ ಜಿಲ್ಲಾಧಿಕಾರಿಗಳಾದ ಜಿ.ಜಗದೀಶ್ ಅವರನ್ನು ಅಂದು ತನಿಖಾಧಿಕಾರಿಯಾಗಿ ನೇಮಕಗೊಳಿಸಿತ್ತು.

ಇದೀಗ ಮಂಗಳೂರು ಹಿಂಸಾಚಾರ ಮತ್ತು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದ ಮ್ಯಾಜಿಸ್ಟೀರಿಯಲ್ ತನಿಖೆಯ 50 ಪುಟಗಳ ವರದಿ ಮತ್ತು ಸುಮಾರು 2500 ದಾಖಲೆಗಳನ್ನೊಳಗೊಂಡ ಅಂತಿಮ ವರದಿಯನ್ನು ನ.4ರಂದು ರಾಜ್ಯ ಗೃಹ ಇಲಾಖೆಗೆ ಸಲ್ಲಿಸಲಾಗಿದೆ ಎಂದು ತನಿಖಾಧಿಕಾರಿ ಹಾಗೂ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

Comments are closed.