ಕರ್ನಾಟಕ

ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ಹಿನ್ನೆಲೆ ; ಹಲವೆಡೆ ಘರ್ಷಣೆ – ನಾಲ್ಕು ಕಾರುಗಳು ಜಖಂ – ನಿಷೇಧಾಜ್ಞೆ ಜಾರಿ

Pinterest LinkedIn Tumblr

ಶಿವಮೊಗ್ಗ, ಡಿಸೆಂಬರ್.03 : ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ನಾಗೇಶ್ ಅವರ ಮೇಲೆ ಹಲ್ಲೆ ನಡೆದಿರುವ ಹಿನ್ನೆಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಶಿವಮೊಗ್ಗ ನಗರದಾದ್ಯಂತ ಶನಿವಾರದವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ನಾಗೇಶ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ನಡೆದ ಗಲಾಟೆ ಪ್ರಕರಣ ವಿಸ್ತಾರಗೊಳ್ಳುತ್ತಿದ್ದಂತೆ ಪರಿಸ್ಥಿತಿ ತಿಳಿಗೊಳಿಸಲು ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಶಿವಮೊಗ್ಗ ತಹಶೀಲ್ದಾರ್ ನಾಗರಾಜ್ ಆದೇಶ ಹೊರಡಿಸಿದ್ದಾರೆ.

ಇಂದಿನಿಂದ ಶನಿವಾರ ಬೆಳಗ್ಗೆ 10 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಆದೇಶದಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪುಗೂಡದಂತೆ ಸೂಚನೆ ನೀಡಲಾಗಿದ್ದು. ಆದೇಶ ಉಲ್ಲಘಿಂಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.

ಬಂಜರಂಗದಳ ಸಹ ಸಂಚಾಲಕ ನಾಗೇಶ್​ ಎಂಬಾತನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಇದರಿಂದ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಘಟನೆ ಬಳಿಕ ನಗರದ ಐದಾರು ಕಡೆ ಅಹಿತಕರ ಘಟನೆಗಳು ದಾಖಲಾದ ಹಿನ್ನಲೆ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್​ ಆದೇಶ ಹೊರಡಿಸಿದ್ದಾರೆ.

ಇಂದು ಮುಂಜಾನೆ ವಾಕಿಂಗ್​ನಿಂದ ಹಿಂದಿರುಗುವ ವೇಳೆ ನಾಗೇಶ್​ ಮೇಲೆ ಹಲ್ಲೆಯಾಗಿದೆ. ನಗರದ ಲಷ್ಕರ್​ ಮೊಹಲ್ಲಾದಲ್ಲಿ ಆಟೋ, ಬೈಕ್​ನಲ್ಲಿ ಬಂದ ಐವರು ದುಷ್ಕರ್ಮಿಗಳು ಅವರ​ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಾಯಗೊಂಡ ನಾಗೇಶ್​ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಬಂಜರಂಗದಳ ಸಂಘಟನೆ ಮುಖಂಡರು ಆಸ್ಪತ್ರೆ ಮುಂದೆ ಜಮಾಯಿಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಘಟನೆಯ ಬೆನ್ನಲ್ಲೆ ನಗರದ ಹಲವೆಡೆ ಘರ್ಷಣೆ ಉಂಟಾಗಿದೆ. ಗಾಂಧಿ ಬಜಾರ್‌, ಆಜಾದ್ ನಗರ, ರವಿ ವರ್ಮ ಬೀದಿಯಲ್ಲಿ ಘರ್ಷಣೆ ನಡೆದಿದ್ದು, ರಾಮಣ್ಣ ಶ್ರೇಷ್ಟಿ ಪಾರ್ಕ್‌ ಬಳಿ ಒಂದು ಕಾರು, ಕಸ್ತೂರ ಬಾ ರಸ್ತೆಯಲ್ಲಿ ಒಂದು ಆಟೊರಿಕ್ಷಾ ಜಖಂಗೊಳಿಸಲಾಗಿದೆ. ಜೋರ್ ಬಜಾರ್‌ನಲ್ಲಿ ಮೂವರು ವ್ಯಾಪಾರಿಗಳ ಮೇಲೆ ಹಲ್ಲೆ ನಡೆದಿದೆ, ಗಲಾಟೆಯಲ್ಲಿ ನಾಲ್ಕು ಕಾರುಗಳು ಜಖಂಗೊಂಡಿದ್ದು, ಒಟ್ಟು ಹನ್ನೊಂದು ಮಂದಿ ಆಸ್ಪತ್ರೆಗೆ ದಾಖಲಾಗಿ ರುವುದಾಗಿ ವರದಿಯಾಗಿದೆ.

ಘಟನೆ ನಡೆದ ತಕ್ಷಣಕ್ಕೆ ಪೊಲೀಸರು ಬಿಗಿ ಬಂದೋಬಸ್ತ್​ ನಡೆಸಿದ್ದಾರೆ. ಈ ಘಟನೆ ಎರಡು ಕೋಮುಗಳ ನಡವಿನ ಉದ್ವಿಗ್ನತೆಗೆ ಕಾರಣವಾಗುವ ಸಾಧ್ಯತೆ ಹಿನ್ನಲೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ.

ಇನ್ನು ಈ ಘಟನೆ ನಡೆಯುತ್ತಿದ್ದಂತೆ ನಗರದದಲ್ಲಿ ಕಿಡಿಗೇಡಿಗಳು ಕಸ್ತೂರಿ ಬಾ ರಸ್ತೆಯಲ್ಲಿ ನಿಂತಿದ್ದ ಮಾರುತಿ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಘಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ಗಾಂಧಿ ಬಜಾರ್​ನ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಚ್ಚಿದ್ದಾರೆ. ಶಾಂತಿ ಕಾಪಾಡುವ ಉದ್ದೇಶದಿಂದ ಇಂದು ಮಧ್ಯಾಹ್ನದಿಂದ ಶನಿವಾರ ಬೆಳಗ್ಗೆ 10ಗಂಟೆವರೆಗೆ ಸೆಕ್ಷನ್​ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದ್ದು, ಪೂರ್ವವಲಯ ಐಜಿಪಿ ಎಸ್‌.ರವಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಸ್ಥಳದಲ್ಲೇ ಬೀಡುಬಿಟ್ಟು ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಯತ್ನಿಸುತ್ತಿದ್ದಾರೆ. ವದಂತಿಗಳಿಗೆ ಕಿವಿಗೊಡದೇ ಶಾಂತಿ ಕಾಪಾಡುವಂತೆ ಕೋರಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಸಂಸದ ಬಿವೈ ರಾಘವೇಂದ್ರ ಆಸ್ಪತ್ರೆಗೆ ಭೇಟಿ ನೀಡಿ ನಾಗೇಶ್​ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾತನಾಡಿದ ಅವರು, ನಿನ್ನೆ ರಾತ್ರಿ ಶಿವಮೊಗ್ಗದ ಗೋಪಾಳದಲ್ಲಿ ಮಂಜುನಾಯ್ಕ, ಸುಧೀರ್ ಹಾಗೂ ನವೀನ್ ಎಂಬುವರ ಮೇಲೆ ಹಲ್ಲೆ ನಡೆದಿದೆ. ಮುಂಜಾನೆ ಸಹ ಬಜರಂಗದಳ ಕಾರ್ಯಕರ್ತ ನಾಗೇಶ್ ಮೇಲೆ ಹಲ್ಲೆ ನಡೆದಿದೆ. ಈ ಎರಡು ಕಡೆಗಳಲ್ಲಿ ಎರಡು ಮೂರು ಜನ ಸೇರಿ ಹಲ್ಲೆ ನಡೆಸಿದ್ದಾರೆ.

ಈ ಹಿಂದೆ ಕಳೆದ ತಿಂಗಳ ಸಹ ಎರಡು ಮೂರು ಕಡೆ ಈ ರೀತಿ ಘಟನೆ ನಡೆದಿದೆ. ಪೊಲೀಸರು ಸಹ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ರಾತ್ರಿ ಹಾಗೂ ಇಂದು ಬೆಳಗ್ಗೆ ನಡೆದ ಘಟನೆ ಬಗ್ಗೆ ಎಸ್ ಪಿ ಜೊತೆ ಚರ್ಚಿಸಿದ್ದೇನೆ. ಈ ಘಟನೆ ಗಮನಿಸಿದರೆ ಕಳೆದ ಒಂದು ವಾರದಿಂದ ಗಮನಿಸಿ ಮಾಡಿದ್ದಂತಿದೆ. ತಪ್ಪಿತಸ್ಥರ ಪತ್ತೆ ಹಚ್ಚಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಉದ್ದೇಶ ಏನೇ ಇದ್ದರೂ ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲ ಎಂದು ಹೇಳಿದ್ದಾರೆ.

Comments are closed.