ಕರಾವಳಿ

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಮಂಗಳೂರಿನಲ್ಲಿ ಬೃಹತ್ ಸಮಾಜ ಕಲ್ಯಾಣ ನೆರವು ವಿತರಣೆ : ವಿದ್ಯಾರ್ಥಿ ವೇತನ, ವೈದ್ಯಕೀಯ ನೆರವು, ಮದುವೆಗೆ ಆರ್ಥಿಕ ನೆರವು, ಬಡಕುಟುಂಬಗಳಿಗೆ ಸಹಾಯಧನ, ಸಾಧಕರಿಗೆ ಸನ್ಮಾನ

Pinterest LinkedIn Tumblr

ಮಂಗಳೂರು : ಬಂಟರು ಎಲ್ಲಾ ಸಮಾಜವನ್ನು ಪ್ರೀತಿಸುವವರು. ಮಾನವ ಜಾತಿಯಲ್ಲಿ ಎಲ್ಲರೂ ಒಂದೇ ಎಂಬ ದೃಷ್ಠಿಯಲ್ಲಿ ಎಲ್ಲಾ ಸಮಾಜದ ಆಶಕ್ತರಿಗೂ ಸಹಾಯ ಮಾಡುತ್ತಿದ್ದೇವೆ. ಅದಲ್ಲದೆ ಇತರ ಬೇರೆ ಸಮಾಜದ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದ್ದೇವೆ. ಬಡತನದಲ್ಲಿರುವ ಬಂಟರಿಗೆ ಸರ್ಕಾರದ ಮತ್ತಷ್ಟು ಸೌಲಭ್ಯಗಳು ದೊರೆಯುವ ಉದ್ದೇಶದಿಂದ ಜಾತಿಯ ಕೆಟಗರಿಯಲ್ಲಿ ಬಂಟರನ್ನು 2ಎಗೆ ಸೇರಿಸಿ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಯವರು ಸಂಸದ ಬಿಜಿಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಲ್ಲಿ ಮನವಿ ಮಾಡಿದರು.

ಡಿ. 1 ರಂದು ಗೀತಾ ಎಸ್. ಎಂ. ಶೆಟ್ಟಿ ಸಭಾಭವನ ಬಂಟ್ಸ್ ಹಾಸ್ಟೆಲ್, ಮಂಗಳೂರು ಇಲ್ಲಿ ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಸಮಾಜ ಬಾಂಧವರಿಗೆ ಬೃಹತ್ ಸಮಾಜ ಕಲ್ಯಾಣ ನೆರವು ವಿತರಣೆ ಕಾರ್ಯಕ್ರಮ ದ ಸಮಾರಂಭದ ಅಧ್ಯಕ್ಶತೆಯನ್ನು ವಹಿಸಿ  ಐಕಳ ಹರೀಶ್ ಶೆಟ್ಟಿ ಅವರು ಮಾತನಾಡಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸೂಕ್ತ ಕಚೇರಿ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ ಸೂಕ್ತ  ಜಾಗ ನೀಡುವಂತೆ ಸಂಸದರಲ್ಲಿ ಕೋರಿದರು. ನಾವು ಕೇವಲ ಬಂಟ ಸಮಾಜ ಮಾತ್ರವಲ್ಲದೆ ಇತರ ಸಮಾಜದ ಅರ್ಹ ವ್ಯಕ್ತಿಗಳಿಗೂ ಸಹಕರಿಸುತ್ತಿದ್ದು ಇಂದು ಕಟೀಲು ಕ್ಷೇತ್ರದಲ್ಲಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿದ ಲಿಂಗಪ್ಪ ಶೇರಿಗಾರ ಹಾಗೂ ಸಮಾಜಸೇವಕ ಆಸಿಫ್ ಅಪತ್ಬಾಂದವ ಅವರನ್ನು ಗುರುತಿಸಿ ಸನ್ಮಾನಿದ್ದೇವೆ ಎಂದು ಐಕಳ ಹರೀಶ್ ಶೆಟ್ಟಿ ಹೇಳಿದರು.

ಸಮಾರಂಭದಲ್ಲಿ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವೈದ್ಯಕೀಯ ನೆರವು, ವಸತಿ ಹಾಗೂ ಬಡ ಹೆಣ್ಣಮಕ್ಕಳ ಮದುವೆಗೆ ಆರ್ಥಿಕ ನೆರವು ಒಟ್ಟು ಉಡುಪಿ ಹಾಗೂ ಮಂಗಳೂರಲ್ಲಿ ಸುಮಾರು ಒಂದೂವರೆ ಕೋಟಿ ರೂಪಾಯಿ ಮೊತ್ತದ ಸಹಾಯ ವಿತರಣೆ ನಡೆಯಿತು.

ಸಮಾರಂಭವನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಅವರು ದೀಪ ಬೆಳಗಿಸಿ ಚಾಲನೆಯಿತ್ತು ಮಾತನಾಢಿ, ಶತಮಾನಗಳ ಇತಿಹಾಸದ ಬಂಟರ ಸಂಘವನ್ನು ಕಟ್ಟಿದ ಅಂದಿನ ಹಿರಿಯರ ದಾರಿಯಲ್ಲಿ ಐಕಳ ಅವರು ನಡೆಯುತ್ತಿರುವುದು ಮೆಚ್ಚುಗೆಯ ವಿಷಯ. ಒಕ್ಕೂಟವು ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆ ಮೂಡಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಸಹಾಯಹಸ್ತ ನೀಡುತ್ತಿದ್ದು ವಿದ್ಯಾರ್ಥಿಗಳು ಈ ಸಹಾಯವನ್ನು ಸದುಪಯೋಗಪಡಿಸಿ ಉತ್ತಮ ನಾಗರಿಕರಾಗಿ ಸಮಾಜವನ್ನು ಮರೆಯದೆ ಬಾಳಿರಿ ಎಂದರು.

ಬೃಹತ್ ಸಮಾಜ ಕಲ್ಯಾಣ ನೆರವು ವಿತರಣೆ ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಕೆ.ಎಂ. ಶೆಟ್ಟಿ ಅವರು ಹಿಂಗಾರ ಬಿಡಿಸುವ ಮೂಲಕ ಸಂಪ್ರದಾಯಿಕವಾಗಿ ಉದ್ಘಾಟಿಸಿ ಮಾತನಾಡಿ, ಜಾಗತಿಕ ಬಂಟರ ಸಂಘದ ತಂಡವು ಬಡವರ ಕಣ್ಣೀರು ಒರೆಸುವ ಮಹತ್ವಪೂರ್ಣ ಕಾರ್ಯ ಮಾಡುತ್ತಿದ್ದು ಅವರ ಕಾರ್ಯಕ್ಕೆ ದೇವರು ಮತ್ತಷ್ತು ಶಕ್ತಿ ತುಂಬಲಿ ಎಂದು ಹಾರೈಸಿದರು.

ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು, ಎಸ್ ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಮ್.ಎನ್ ರಾಜೇಂದ್ರ ಕುಮಾರ್, ಶಾಸಕರಾದ ರಾಜೇಶ್ ನಾೈಕ್, ಉಮಾನಾಥ್ ಎ ಕೋಟ್ಯಾನ್, ಯು.ಟಿ ಖಾದರ್, ಬಂಟವಾಳ ಬಂಟದ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ್ ರೈ, ಮಾಜೀ ಸಚಿವರಾದ ಬಿ ರಮಾನಾಥ ರೈ, ಕೆ ಅಭಯಚಂದ್ರ ಜೈನ್, ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ, ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಜತೆ ಕಾರ್ಯದರ್ಶಿ ಸತೀಶ್ ಅಡಪ ಸಂಕಬೈಲ್, ಕೊಲ್ಲಾಡಿ ಬಾಲಕೃಷ್ಣ ರೈ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿಯವರು ಪ್ರಸ್ತಾವನೆಗೈದರು. ಪುರುಷೋತ್ತಮ ಭಂಡಾರಿಯವರು ಕಾರ್ಯಕ್ರಮ ನಿರೂಪಿಸಿದರು. ದಾನಿಗಳ ಯಾದಿಯನ್ನು ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿಯವರು ವಾಚಿಸಿದರು. ಗೌರವ ಸ್ವೀಕರಿಸಿದರ ಪರಿಚಯವನ್ನು ಅಶೋಕ ಪಕ್ಕಳ ಮತ್ತು ಕೊಲ್ಲಾಡಿ ಬಾಲಕೃಷ್ಣ ರೈ ಮಾಡಿದರು. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಪ್ರಾರ್ಥಿಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಸ್ವಾಗತಿಸಿದರು. ಒಕ್ಕೂಟದ ಗೌರವ ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ ವಂದಿಸಿದರು. ವಿಠಲ ನಾಯಕ್ ತಂಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಿಂಗಪ್ಪ ಸೇರಿಗಾರ್ ಕಟೀಲು ದಂಪತಿಯನ್ನು, ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಗೋಪಾಲಕೃಷ್ಣ ಆರಕ್ಷಕ, ಅಕ್ಷತಾ ವಿ. ಶೆಟ್ಟಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸುರತ್ಕಲ್ ಬಂಟರ ಸಂಘದ ಪರವಾಗಿ ಅದರ ಅಧ್ಯಕ್ಷರಾದ ಸುಧಾಕರ ಪೂಂಜ ಹಾಗೂ ಮೈಮೂನ ಫೌಂಡೇಶನಿನ ಸಮಾಜಸೇವಕ ಅಪತ್ಬಾಂದವ ಅಸೀಫ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ವೆನ್ಲಾಕ್ ಆಸ್ಪತ್ರೆಯಲ್ಲಿ ಬಡರೋಗಿಗಳ ಪ್ರತಿದಿನ ಊಟ ವಿತರಣೆ ಮಾಡುವ ಎಂ. ಫ್ರೆಂಡ್ಸ್ ಕಾರುಣ್ಯ ತಂಡಕ್ಕೆ 1 ತಿಂಗಳ ಆರ್ಥಿಕ ಸಹಾಯ ನೀಡಲಾಯಿತು.

ಮನವಿಗೆ ನಳಿನ್ ಕುಮಾರ್ ಕಟೀಲ್ ಸ್ಪಂದನೆ :

ಈ ಸಂದರ್ಭ ದಲಿಬಿಜಿಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಬಂಟರನ್ನು 2ಎಗೆ ಸೇರಿಸುವ ಮನವಿಯನ್ನು ಉನ್ನತಮಟ್ಟದ ಪರಿಶೀಲನೆಗೆ ಕಳುಹಿಸುವ ಭರವಸೆ ನೀಡಿದರು. ಒಕ್ಕೂಟಕ್ಕೆ ಸೂಕ್ತವಾದ ಜಾಗ ಗುರುತಿಸಿ ಸರ್ಕಾರ ಸರ್ಕಾರದಿಂದ ಸಿಗುವ ಸೌಲಭ್ಯಕ್ಕೆ ನಾನು ಸಹಕರಿಸುತ್ತೇನೆ ಎಂದರು.

ಮನುಷ್ಯನಿಗೆ ಹಣ ಬಂದಾರ ಇನ್ನೊಬ್ಬನಿಗೆ ಸಹಕರಿಸಲು ಮನಸ್ಸು ಬರುದಿಲ್ಲ. ಆದರೆ ಒಕ್ಕೂಟವು ಇದ್ದವರಿಂದ ಪಡೆದು ಇಲ್ಲದವರಿಗೆ ನೀಡುತ್ತಿದೆ. ಮುಂಬಯಿಗರು ಕೋರೋನಾದಿಂದ ಅತೀ ಹೆಚ್ಚು ಸೋಂಕಿತರು. ಕೊರೋನಾದಿಂದ ಅತೀ ಹೆಚ್ಚು ನಷ್ಟವಾದದ್ದು ಬಂಟರಿಗೆ. ಇಂತಹ ಕಷ್ಟದ ಸಮಯದಲ್ಲಿ ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ಅತೀ ದೊಡ್ಡ ಮೊತ್ತದ ಸಹಾಯ ಮಾಡುತ್ತಿರುವುದು ನಿಜಕ್ಕೂ ಅಭಿನಂದನೀಯ.– ರಮಾನಾಥ ರೈ – ಮಾಜಿ ಸಚಿವರು

ಹುಟ್ಟು ಸಾವಿನ ಮಧ್ಯೆ ಮಾಡುತ್ತಿರುವ ಉತ್ತಮ ಕೆಲಸವು ಯಾವಾಗಲೂ ನೆನಪಲ್ಲಿ ಉಳಿಯುತ್ತದೆ. ಬಂಟರು ಯಾರೇ ಆಗಲಿ ಅವರ ಕಣ್ಣೀರು ಒರಸುವವರು. ಮಹಿಳೆಯರ ಉಪಸ್ಥಿತಿಯಿರುವ ಕಾರ್ಯಕ್ರಮಕ್ಕೆ ಕಟೀಲು ಮಾತೆಯ ಆಶೀರ್ವಾದವಿದೆ. – ಮಿಥುನ್ ರೈ, ಅಧ್ಯಕ್ಷರು, ದ.ಕ.ಜಿಲ್ಲಾ ಯುಥ್ ಕಾಂಗ್ರೆಸ್

ವರದಿ : ಈಶ್ವರ ಎಂ. ಐಲ್

ಚಿತ್ರ : ಸತೀಶ್ ಕಾಪಿಕಾಡ್ / ದಿನೇಶ್ ಕುಲಾಲ್

Comments are closed.