ಕರಾವಳಿ

ಉಗ್ರರ ಪರ ಗೋಡೆ ಬರಹ ಬರೆದ ಆರೋಪಿಗಳನ್ನು ಶೀಘ್ರ ಬಂಧಿಸಿ ಕಾನೂನು ಕ್ರಮಕ್ಕೆ ಎಸ್‌ಡಿಪಿಐ ಆಗ್ರಹ

Pinterest LinkedIn Tumblr

ಮಂಗಳೂರು, ಡಿಸೆಂಬರ್. 01: ಮಂಗಳೂರಿನಲ್ಲಿ ದುಷ್ಕರ್ಮಿಗಳು ಲಷ್ಕರ್ ಉಗ್ರರ ಪರ ಮತ್ತು ವಿವಾದಾತ್ಮಕ ಗೋಡೆ ಬರಹಗಳನ್ನು ಬರೆದ ಘೋರ ಕೃತ್ಯವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ ಎಂದು ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕದ್ರಿ ಪೋಲಿಸ್ ಠಾಣಾ ವ್ಯಾಪ್ತಿಯ ಬಿಜೈ ಬಳಿಯ ರಸ್ತೆಯ ಗೋಡೆಯೊಂದರಲ್ಲಿ ಮೊದಲಿಗೆ ಉಗ್ರರ ಪರ ಬರಹ ಕಂಡು ಬಂದಿತ್ತು, ಆದರೆ ಆರೋಪಿಗಳನ್ನು ಪತ್ತೆ ಹಚ್ಚಲು ಪೋಲಿಸ್ ಇಲಾಖೆ ನಿರ್ಲಕ್ಷ್ಯ ಧೋರಣೆ ತೋರಿದ್ದರಿಂದ ನಂತರ ಪಿ.ವಿ.ಎಸ್ ಸಮೀಪದ ನ್ಯಾಯಾಲಯದ ಆವರಣದ ಪೊಲೀಸ್ ಚೌಕಿಯ ಹಳೆ ಕಟ್ಟಡದ ಗೋಡೆಯಲ್ಲಿ ಪುನಃ ವಿವಾದಾತ್ಮಕ ಬರಹ ಕಂಡು ಬಂದಿದೆ. ಇದೆಲ್ಲವೂ ಜಿಲ್ಲೆಯ ಶಾಂತಿಯನ್ನು ಕದಡಿಸಿ ಗಲಭೆ ಸೃಷ್ಟಿಸಲು ಕೋಮುವಾದಿ ಶಕ್ತಿಗಳು ನಡೆಸುತ್ತಿರುವ ಷಡ್ಯಂತ್ರದ ಭಾಗವಾಗಿದೆ ಎಂದು ಹೇಳಿದರು.

ಪೋಲಿಸ್ ಇಲಾಖೆ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸಿದ ಕಾರಣದಿಂದಲೇ ಇಂತಹ ಘಟನೆಗಳು ಪುನರಾವರ್ತನೆ ಯಾಗುತ್ತಿರುವುದು. ಪೋಲಿಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಯಾಕಾಗಿ ಬಂದಿಸಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಕಲ್ಲಡ್ಕ ಪ್ರಭಾಕರ್ ಭಟ್ ಅವರು ಉಳ್ಳಾಲವನ್ನು ಪಾಕಿಸ್ತಾನಕ್ಕೆ ಹೋಲಿಸಿ ಹೇಳಿಕೆ ನೀಡಿದ ಸಂದರ್ಭದಲ್ಲೂ ಪೋಲಿಸ್ ಇಲಾಖೆ ಅದನ್ನು ಗಂಭೀರವಾಗಿ ಪರಿಗಣಿಸದೆ ಇದ್ದುದ್ದರಿಂದ ಇಂತಹ ಮನಸ್ಥಿತಿಯ ದುಷ್ಕರ್ಮಿ ಗಳಿಗೆ ದೇಶದ್ರೋಹದ ಬರಹ ಬರೆಯಲು ಮತ್ತು ಹೇಳಿಕೆ ನೀಡಲು ಧೈರ್ಯ ಸಿಕ್ಕಿದಂತಾಗಿದೆ.

ಗ್ರಾ.ಪಂ ಚುನಾವಣೆ ಸಮೀಪಿಸಿದ ಈ ಸಮಯದಲ್ಲಿ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ ಕೋಮು ಧ್ರುವೀಕರಣ ಯತ್ನವನ್ನು ಪೋಲಿಸ್ ಇಲಾಖೆ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತ ಕಡಿವಾಣ ಹಾಕಲೇಬೇಕಾಗಿದೆ. ಅದೇ ರೀತಿಯಲ್ಲಿ ಉಗ್ರರ ಪರ ಮತ್ತು ವಿವಾದಾತ್ಮಕ ಗೋಡೆ ಬರಹ ಬರೆದ ದುಷ್ಕರ್ಮಿಗಳನ್ನು ಶೀಘ್ರದಲ್ಲಿ ಬಂಧಿಸಿ ಕಠಿಣ ಕಾನೂನು ಕ್ರಮ ಜರಗಿಸಬೇಕು ಈ ಬಗ್ಗೆ ನಿರ್ಲಕ್ಷ್ಯ ತೋರಿದರೆ ಎಸ್‌ಡಿಪಿಐ ಇದರ ವಿರುದ್ಧ ಜಿಲ್ಲಾದ್ಯಂತ ಹೋರಾಟವನ್ನು ನಡೆಸಲಿದೆ ಎಂದು ಅಥಾವುಲ್ಲಾ ಜೋಕಟ್ಟೆ ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ದ.ಕ,ಜಿಲ್ಲಾ ಪ್ರ. ಕಾರ್ಯದರ್ಶಿ ಶಾಹುಲ್ ಹಮೀದ್, ಜಿಲ್ಲಾ ಕಾರ್ಯದರ್ಶಿಗಳಾದ ಇಕ್ಬಾಲ್ ಬೆಳ್ಳಾರೆ, ಅನ್ವರ್ ಸಾದತ್ ಬಜತ್ತೂರು ಮುಂತಾದವರು ಉಪಸ್ಥಿತರಿದ್ದರು.

Comments are closed.