ಕರಾವಳಿ

ರೌಡಿಶೀಟರ್ ಇಂದ್ರಜಿತ್ ಹತ್ಯೆ – ಆರು ವರ್ಷಗಳ ಹಿಂದಿನ ಕೊಲೆಗೆ ಪ್ರತಿಕಾರ : 9 ಆರೋಪಿಗಳ ಬಂಧನ

Pinterest LinkedIn Tumblr

ಮಂಗಳೂರು, ನವೆಂಬರ್. 29: ಬೊಕ್ಕಪಟ್ಣ ಬಳಿ ನಡೆದ ರೌಡಿಶೀಟರ್ ಇಂದ್ರಜಿತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಒಂಬತ್ತು ಆರೋಪಿಗಳನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬೋಳೂರಿನ ಜಾರಂದಾಯ ದೇವಸ್ಥಾನ ಸಮೀಪದ ಮೋಕ್ಷಿತ್ 26), ಬೋಳೂರು ಮಠದ ಕಣಿಯ ಉಲ್ಲಾಸ್ ಕಾಂಚಾನ್ (20), ಬೋಳೂರಿನ ನಿವಾಸಿಗಳಾದ ಗೌತಮ್ (25), ಆಶಿಕ್ (23), ಕೌಶಿಕ್ (25), ಜಗದೀಶ್ ಅಲಿಯಾಸ್ ತಲವಾರ್ ಜಗ್ಗ(53), ಶರಣ್ ಅಲಿಯಾಸ್ ಚಾನು (19), ಬೋಳೂರು ಪರಪು ನಿವಾಸಿ ರಾಕೇಶ್ (28) ಹಾಗೂ ಅರ್ಕುಳದ ನಿತಿನ್ (25) ಎಂದು ಹೆಸರಿಸಲಾಗಿದೆ.

ನ.25ರಂದು ತಡ ರಾತ್ರಿ ಬೋಳೂರು ಬೊಕ್ಕಪಟ್ಣ ಸಮೀಪದ ಕರ್ನಲ್ ಗಾರ್ಡನ್‌ನಲ್ಲಿ ರೌಡಿಶೀಟರ್ ಇಂದ್ರಜಿತ್‌ನನ್ನು ಬರ್ಬರವಾಗಿ ಹತ್ಯೆಗೈಯಲಾಗಿತ್ತು. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬರ್ಕೆ ಪೊಲೀಸರು ತನಿಖೆ ಆರಂಭಿಸಿ ಹಲವರನ್ನು ವಿಚಾರಣೆ ನಡೆಸಿದ್ದರು. ಶಕ್ತಿನಗರ ಸಮೀಪದ ರಾಜೇಶ್ವರಿ ನಗರದಲ್ಲಿ ಈ ಆರೋಪಿಗಳನ್ನು ಶನಿವಾರ ಬೆಳಗ್ಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ತಲವಾರ್ ಜಗ್ಗನ ಮಗನ ಹತ್ಯೆಗೆ ಪ್ರತಿಕಾರಕ್ಕಾಗಿ ಈ ಹತ್ಯೆ ನಡೆದಿದೆ. ವಿಚಾರಣೆ ವೇಳೆ ಆರೋಪಿಗಳು ಕೃತ್ಯ ನಡೆಸಿರುವುದನ್ನು ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಮಾರು 6 ವರ್ಷಗಳ ಹಿಂದೆ ಪ್ರಕರಣದ ಆರೋಪಿಯಲ್ಲೊಬ್ಬನಾದ ತಲವಾರ್ ಜಗ್ಗನ ಮಗನಾದ ಸಂಜಯ್ ಎಂಬಾತನನ್ನು ಮಂಕಿ ಸ್ಟ್ಯಾಂಡ್ ಗ್ಯಾಂಗ್ ನವರು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಹೊಗೈಬೈಲ್ ಕಲ್ಲುರ್ಟಿ ದೇವಾಸ್ಥಾನದ ಬಳಿ ಕೊಚ್ಚಿ ಕೊಲೆಗೈದಿದ್ದರು.

ಅದರ ಪ್ರತೀಕಾರ ತೀರಿಸಿಕೊಳ್ಳಲು ಮಂಕಿಸ್ಟಾಂಡ್ ರೌಡಿ ಗ್ಯಾಂಗ್‌ನೊಂದಿಗೆ ಗುರುತಿಸಿಕೊಂಡಿದ್ದ ಇಂದ್ರಜಿತ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಇಂದ್ರಜಿತ್ ರಾತ್ರಿ ವೇಳೆಯಲ್ಲಿ ತಂಗುತ್ತಿದ್ದ ಕರ್ನಲ್ ಗಾರ್ಡನ್ ಬೋಟ್‌ಯಾರ್ಡ್‌ನಲ್ಲಿ ಆರೋಪಿಗಳು ಪೂರ್ವಯೋಜಿತ ಸಂಚಿನಂತೆ ಮಾರಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Comments are closed.