ಕರಾವಳಿ

ಸರಕಾರದ ತಪ್ಪು ನೀತಿಗಳ ವಿರುದ್ಧ ಹೋರಾಟ ಅಗತ್ಯ – ಜನತೆ ಎಚ್ಚೆತ್ತುಕೊಳ್ಳಿ :ಸೀತಾರಾಮ ಬೇರಿಂಜೆ

Pinterest LinkedIn Tumblr

ಮಂಗಳೂರು : ‘ಅಂದು ಪಾರ್ಲಿಮೆಂಟಿನ ಮೆಟ್ಟಲು ಏರುವಾಗ ನೆಲಮುಟ್ಟಿ ನಮಸ್ಕರಿಸಿದವರು ಮುಂದೊಂದು ದಿನ ದೇಶವನ್ನೇ ಮಾರಲು ಮುಂದಾಗಬಹುದು ಎಂದು ನಾವು ಎಣಿಸಿರಲಿಲ್ಲ. ಜನರು ಮೌನವಾಗಿರದೆ ಎಚ್ಚೆತ್ತುಕೊಂಡು ಸರಕಾರದ ತಪ್ಪು ನೀತಿಗಳ ವಿರುದ್ಧ ಹೋರಾಡಬೇಕಿದೆ.’ ಎಂದು ಎ‌ಐಟಿಯುಸಿ ಮುಂದಾಳು ಸೀತಾರಾಮ ಬೇರಿಂಜೆ ಹೇಳಿದರು.

ಅವರು ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ (JCTU) ಕರೆಕೊಟ್ಟಿದ್ದ ಒಂದು ದಿನದ ರಾಷ್ಟ್ರೀಯ ಮುಷ್ಕರದ ಸಂದರ್ಭದಲ್ಲಿ ಮಂಗಳೂರಲ್ಲಿ ನಡೆದ ಪ್ರತಿಭಟನಾ ಪ್ರದರ್ಶನದಲ್ಲಿ ಮಾತನಾಡುತ್ತಿದ್ದರು.

ಪ್ರದರ್ಶನದ ಮೊದಲಿಗೆ ಮಾತನಾಡಿದ ಸಿ‌ಐಟಿಯು ಮುಖಂಡ ಸುನಿಲ್ ಕುಮಾರ್ ಬಜಾಲ್ ಮಾತನಾಡುತ್ತಾ, ‘ಸಾರ್ವಜನಿಕ ಉದ್ಯಮಗಳನ್ನು ಖಾಸಗಿಯವರಿಗೆ ಮಾರಲಾಗುತ್ತಿದೆ. ಲಾಕ್‌ಡೌನ್ ಹೇರಿ ಜನರನ್ನು ಮನೆಯೊಳಗಿರಿಸಿ ಕೃಷಿ, ಕಾರ್ಮಿಕ ಕಾನೂನುಗಳನ್ನು ಸುಗ್ರೀವಾಜ್ಙೆ ಮೂಲಕ ಕಾರ್ಪರೇಟ್ ಪರವಾಗಿ ಬದಲಿಸಲಾಗುತ್ತದೆ. ರೈತ ಕಾರ್ಮಿಕರ ಹಿತ ಕಾಪಾಡಬೇಕಿದ್ದ ಸರಕಾರ ಅಂಬಾನಿ ಅದಾನಿಯವರ ಹಿತ ಕಾಯುವಲ್ಲಿ ನಿರತವಾಗಿದೆ. ಬಡವರ ಆದಾಯ ದಿನದಿಂದ ದಿನಕ್ಕೆ ಕುಸಿಯುತ್ತಿದ್ದರೂ ಶ್ರೀಮಂತ ಕಾರ್ಪರೇಟುಗಳ ಆದಾಯ ದ್ವಿಗುಣಗೊಳ್ಳುತ್ತಿದೆ,’ ಎಂದರು.

(JCTU) ದಿನಕರ ಶೆಟ್ಟಿಯವರು ಮಾತನಾಡಿ ನಮ್ಮ ಸಂಸದರು ಮತ್ತು ಶಾಸಕರುಗಳು ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಗಮನ ಹರಿಸದೆ ರಸ್ತೆಗಳ ಸರ್ಕಲ್‌ಗಳ ಹೆಸರುಗಳ ಬಗ್ಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದರು.

ಬ್ಯಾಂಕ್ ಉದ್ಯೋಗಿಗಳ ಮುಂದಾಳಾದ ವಿನ್ಸೆಂಟ್ ಡಿಸೋಜ ಮಾತನಾಡುತ್ತಾ ‘ಜನಪ್ರತಿನಿಧಿಗಳು ಜಿಲ್ಲೆಯ ಮೂರು ಬ್ಯಾಂಕುಗಳು ವಿಲಿನೀಕರಣದ ಹೆಸರಲ್ಲಿ ಮುಚ್ಚಿರುವುದರ ಬಗ್ಗೆ ಧ್ವನಿ ಎತ್ತದಿರುವುದು ಜಿಲ್ಲೆಗೆ ಮತ್ತು ರಾಜ್ಯಕ್ಕೇ ನಾಚಿಕೆಗೇಡಿನ ಸಂಗತಿಯಾಗಿದೆ. ವಿಲಿನೀಕರಣ ನಡೆಯುತ್ತಲೆ ಇದೆ. ಅದರ ಜೊತೆಗೆ ಮೂರು ಸಾರ್ವಜನಿಕ ರಂಗದ ಬ್ಯಾಂಕುಗಳನ್ನು ಮಾರಲು ಸರಕಾರ ಮುಂದಾಗಿದೆ.’ ಎಂದು ದೂರಿದರು.

ಎ‌ಐಸಿಸಿಟಿಯುನ ಭರತ್, ಎ‌ಐಬಿ‌ಒ‌ಎನ ರಾಘವ, ಬಿ‌ಇಫ್‌ಐನ ಬಿ ಯಮ್ ಮಾಧವ ಮುಂತಾದವರು ಮಾತನಾಡಿ ಕಾರ್ಮಿಕರ ಬೇಡಿಕೆಗಳ ಬಗ್ಗೆ ವಿವಿರಣೆಯಿತ್ತು. ರೈತಸಂಘದ ರವಿಕಿರಣ ಪೂಣಚ್ಚ ಶುಭ ಕೋರಿದರು.

ಆರಂಭದಲ್ಲಿ ಜೆಸಿಟಿಯುನ ಜಿಲ್ಲಾ ಸಂಚಾಲಕ ಎಚ್ ವಿ ರಾವ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಿ‌ಐಟಿಯುನ ಜಯಂತಿ ಶೆಟ್ಟಿ ವಂದಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಮುಂದಾಳುಗಳಾದ ವಿ ಕುಕ್ಯಾನ್, ಕರುಣಾಕರ ಮಾರಿಪಳ್ಳ, ವಸಂತ ಆಚಾರಿ, ವಾಸುದೇವ ಉಚ್ಚಿಲ, ಮುನೀರ್ ಕಾಟಿಪಳ್ಳ, ಸಂತೋಷ್ ಬಜಾಲ್, ಸತೀಶ್, ಮನೋಹರ ಶೆಟ್ಟಿ, ಬೊಂಡಾಲ ಚಿತ್ತರಂಜನ ಶೆಟ್ಟಿ, ವಿನೋದ್ ರಾಜ್, ಫಣೀಂದ್ರ, ಸುರೇಶ್ ಹೆಗ್ಡೆ, ಪುಷ್ಪರಾಜ್, ಸುಲೋಚನಾ, ಕೃಷ್ಣಪ್ಪ, ಪುರುಶೋತ್ತಮ, ಸುನಿಲ್ ರಾಜ್, ರಾಘವೇಂದ್ರ ರಾವ್ ಮುಂತಾದವರು ಉಪಸ್ಥಿತರಿದ್ದರು.

Comments are closed.