ಮುಂಬೈ : ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಸಿ.ಬಿ.ಯಿಂದ ಬಂಧನಕ್ಕೀಡಾಗಿದ್ದ ಬಾಲಿವುಡ್‌ನ ಹಾಸ್ಯ ನಟಿ ಭಾರ್ತಿ ಸಿಂಗ್ ಹಾಗೂ ಪತಿ ಹರ್ಷ ಲಿಂಬಾಚಿಯಾ ಅವರಿಗೆ ಕೋರ್ಟ್‌ನಿಂದ ಜಾಮೀನು ಸಿಗುವ ಮೂಲಕ ಬಿಗ್ ರಿಲೀಫ್ ಸಿಕ್ಕಿದೆ.
ಕಾಮಿಡಿಯನ್ ಭಾರತಿ ಸಿಂಗ್ ಅವರ ಮುಂಬೈ ನಿವಾಸದ ಮೇಲೆ ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳು ಶನಿವಾರದಂದು ದಾಳಿ ನಡೆಸಿದ್ದರು. ಪರಿಶೀಲನೆ ವೇಳೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣ(ಸುಮಾರು 86.5 ಗ್ರಾಂ ಗಾಂಜಾ ) ದಲ್ಲಿ ಮಾದಕ ವಸ್ತು ಹೊಂದಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತಿ ಸಿಂಗ್ ಹಾಗೂ ಹರ್ಷ ಅವರನ್ನು ಬಂಧಿಸಿ, ಡಿ.4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಆದರೆ ಭಾರ್ತಿ ಸಿಂಗ್ ದಂಪತಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್ ಇದೀಗ ಇಬ್ಬರಿಗೂ ಜಾಮೀನು ನೀಡಿದೆ.
ನ್ಯಾಯಾಂಗ ಬಂಧನದಲ್ಲಿದ್ದ ಇಬ್ಬರಿಗೂ ಮುಂಬೈ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಮಂಜೂರಾಗಿದೆ. ಇಬ್ಬರಿಗೂ ತಲಾ 15,000 ರು ಬಾಂಡ್, ಕರೆದಾಗ ವಿಚಾರಣೆಗೆ ಹಾಜರಾಗುವಂತೆ ಷರತ್ತು ವಿಧಿಸಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜಾಮೀನು ನೀಡಿದೆ ಎಂದು ಭಾರತಿ ಪರ ವಕೀಲ ಏಜಾಜ್ ಖಾನ್ ಅವರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ಭಾರತಿ ಸಿಂಗ್ ಮತ್ತು ಅವರ ಪತಿ ಹರ್ಷ್ ಲಿಂಬಾಚಿಯಾ ಅವರು ಗಾಂಜಾ ಸೇವನೆ ಮಾಡುವುದನ್ನು ಒಪ್ಪಿಕೊಂಡಿದ್ದಾರೆ. ಎನ್‌ಡಿಪಿಎಸ್ ಕಾಯ್ದೆ 1986ರ ನಿಯಮಗಳ ಅಡಿ ಭಾರತಿ ಸಿಂಗ್ ಅವರನ್ನು ಬಂಧಿಸಲಾಗಿದೆ, ವಿಚಾರಣೆಗೊಳಪಡಿಸಲಾಗಿತ್ತು. ಅಗತ್ಯ ಮಾಹಿತಿ ಸಿಕ್ಕಿದ್ದರಿಂದ ಎನ್ ಸಿಬಿ ಅಧಿಕಾರಿಗಳು ಇವರಿಬ್ಬರ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ತಿಳಿದು ಬಂದಿದೆ.