ಮಂಗಳೂರು: ಕರ್ನಾಟಕ ಘನ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿ ಅತ್ಯಲ್ಪ ಸಮಯದಲ್ಲಿಯೇ ಉತ್ತಮ ಕಾರ್ಯದಿಂದ ಜನ ಮನ್ನಣೆ ಪಡೆದಿರುವ ಶ್ರೀ ಸಿ.ಟಿ. ರವಿ ಅವರು ತಮ್ಮ ಸ್ಥಾನಕ್ಕೆ ಗೌರವಯುತವಾಗಿ ರಾಜೀನಾಮೆ ನೀಡಿದ್ದು ಅವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಅಧ್ಯಕ್ಷರಾಗಿ ಶ್ರೀ ದಯಾನಂದ ಜಿ. ಕತ್ತಲ್‌ಸಾರ್ ಅವರು ವಿಶೇಷವಾಗಿ ಗೌರವಿಸಿದರು.
ಬೆಂಗಳೂರಿನ ಕಲಾ ಗ್ರಾಮದ ಸಭಾಂಗಣದಲ್ಲಿ ನಡೆದ ಈ ಸಮಾರಂಭದಲ್ಲಿ ದಯಾನಂದ ಜಿ. ಕತ್ತಲ್‌ಸಾರ್ ಮಾತನಾಡಿ, ಸಚಿವ ಸ್ಥಾನಕ್ಕೆ ನ್ಯಾಯ ಒದಗಿಸಿ, ಕೊರೊನಾ ಸಂಕಷ್ಟದ ಸಮಯದಲ್ಲಿ ರಾಜ್ಯದ ಎಲ್ಲಾ ಅಕಾಡೆಮಿಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ಕಾರ್ಯ ನಿರ್ವಹಿಸಿದ್ದು ಶ್ಲಾಘನೀಯ,
ರಾಜ್ಯದ ಸಂಸ್ಕೃತಿ ಸಂಸ್ಕಾರಗಳನ್ನು ಪ್ರತಿಬಿಂಬಿಸಲು ನಮ್ಮೆಲ್ಲರನ್ನು ಹುರಿದುಂಬಿಸಿ ಪ್ರೋತ್ಸಾಹಿಸಿ, ಅವರ ಸ್ಥಾನಕ್ಕೊಂದು ನ್ಯಾಯ ಒದಗಿಸಿದ ಅಪರೂಪದ ಸಚಿವರಾಗಿದ್ದಾರೆ. ರಾಜ್ಯದ ಸಾಂಸ್ಕೃತಿಕ ಲೋಕಕ್ಕೆ ತಮ್ಮದೇ ಆದ ವಿಶೇಷ ಕೊಡುಗೆ ನೀಡಿರುವುದು ವಿಶೇಷ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿ.ಟಿ. ರವಿ ಅವರನ್ನು ತುಳುನಾಡಿನ ಪರಂಪರೆಯ ಮುಟ್ಟಾಳೆ, ರೇಷ್ಮೆ ಶಾಲು, ಸಹಿತ ತುಳುನಾಡನ್ನು ಪ್ರತಿಬಿಂಬಿಸುವ ವಿಶೇಷ ಕಲಾಕೃತಿಯನ್ನು ನೀಡಿ ಸಾರ್ವತ್ರಿಕವಾಗಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಕಾಡೆಮಿಯ ಸದಸ್ಯರಾದ ಚೇತಕ್ ಪೂಜಾರಿ ಮಂಗಳೂರು, ನರೇಂದ್ರ ಎಂ. ಪೂಜಾರಿ ಉಪಸ್ಥಿತರಿದ್ದರು.
ಭಾವುಕರಾದ ಕತ್ತಲ್‌ಸಾರ್…
ವೇದಿಕೆಯಲ್ಲಿ ಮಾತನಾಡಿದ ದಯಾನಂದ ಜಿ. ಕತ್ತಲ್‌ಸಾರ್, ಸಚಿವರಾಗಿ ಸ್ಥಾನಮಾನ ಪಡೆದಿದ್ದ ಸಿ.ಟಿ.ರವಿ ಅವರು ಯಾವುದೇ ಕೆಲಸಕ್ಕೂ ನಾನಿದ್ದೇನೆ ನೀವು ಮುಂದುವರಿಯರಿ ಅಧ್ಯಕ್ಷರೇ ಎಂದು ನೈತಿಕ ಸ್ಥೈರ್ಯ ತುಂಬಿದವರು ಎಂದು ಮಾತಿನಲ್ಲಿಯೇ ಭಾವುಕರಾದಾಗ ಸಭಾಂಗಣವೇ ಮೌನ ಆವರಿಸಿತ್ತು.