ಕರಾವಳಿ

ನಡೆದುಕೊಂಡು ಹೋಗುತ್ತಿದ್ದಾಗ ಚಿನ್ನಾಭರಣ ಸುಲಿಗೆ: 2.34 ಲಕ್ಷ ರೂ. ಮೌಲ್ಯದ ಚಿನ್ನ ಕಳೆದುಕೊಂಡ ಮಹಿಳೆಯರು

Pinterest LinkedIn Tumblr

ಮಂಗಳೂರು : ಮಂಗಳೂರಿನ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕದ್ರಿ ಹಾಗೂ ಕಾವೂರು ಪರಿಸರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮಹಿಳೆಯರ ಕುತ್ತಿಗೆಯಿಂದ 2.34 ಲಕ್ಷ ರೂ. ಮೌಲ್ಯದ ಚಿನ್ನದ ಸರ ಸುಲಿಗೆಯಾಗಿದೆ.

ಒಂದು ಪ್ರಕರಣದಲ್ಲಿ ಗೀತಾ ಎಂಬವರು ಕದ್ರಿಯಲ್ಲಿರುವ ಸಂಬಂಧಿಕರ ಮನೆಯಿಂದ ತನ್ನ ಮನೆಗೆ ಮರಳುತ್ತಿದ್ದಾಗ ಕೆಪಿಟಿ ಬಳಿಯ ಅರ್‌ಟಿಓ ಮೈದಾನದ ಬಳಿ ವ್ಯಾಸನಗರದಲ್ಲಿರುವ ರಸ್ತೆಯಲ್ಲಿ ಸಂಜೆ ನಡೆದುಕೊಂಡು ಹೋಗುತ್ತಿದ್ದಾಗ ಎದುರಿನಲ್ಲಿ ಅಪರಿಚಿತ ವ್ಯಕ್ತಿ ಬೈಕ್ ನಿಲ್ಲಿಸಿ ರಿಪೇರಿ ಮಾಡುವಂತೆ ನಟಿಸುತ್ತಿದ್ದ.

ಆತನನ್ನು ದಾಟಿ ಮುಂದೆ ಹೋದ ನಂತರ ಆತನು ಹಿಂದಿನಿಂದ ಬಂದು ಕುತ್ತಿಗೆಯಲ್ಲಿದ್ದ ಸುಮಾರು 54,000 ರೂ. ಮೌಲ್ಯದ 13 ಗ್ರಾಂ ತೂಕದ ಚಿನ್ನದ ಕರಿಮಣಿ ಸರ ಮತ್ತು ಸುಮಾರು 1 ಲಕ್ಷ ರೂ. ಮೌಲ್ಯದ 26 ಗ್ರಾಂ ತೂಕದ ಸರ ಸಹಿತ 1,54,000 ರೂ. ಮೌಲ್ಯದ ಚಿನ್ನಾಭರಣಗಳನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದಾನೆ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ರಶ್ಮಿ ಎಂಬವರು ಶಾಂತಿನಗರದ ಹೋಂಡಾ ಶೋ ರೂಂ ನಲ್ಲಿ ಕೆಲಸ ಮುಗಿಸಿ ಪಂಜಿಮೊಗರಿನ ಉರುಂದಾಡಿಗುಡ್ಡೆಯಲ್ಲಿರುವ ಮನೆ ಕಡೆಗೆ ಹೋಗುತ್ತಿದ್ದಾಗ ರಾಘವೇಂದ್ರ ಮಠದ ಹತ್ತಿರ ಅಪರಿಚಿತ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾನೆ ಎನ್ನಲಾಗಿದೆ.

ಭಯಗೊಂಡು ರಶ್ಮಿ ತನ್ನ ತಾಯಿಗೆ ಕರೆ ಮಾಡಿದ್ದು, ಅಷ್ಟರಲ್ಲಿ ಆ ವ್ಯಕ್ತಿಯು ಹಿಂದುಗಡೆಯಿಂದ ಬಂದು ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಬಲವಂತದಿಂದ ಎಳೆದೊಯ್ದಿದ್ದಾನೆ. ಚಿನ್ನದ ಕರಿಮಣಿ ಸರವು ಸುಮಾರು 22 ಗ್ರಾಂ ಇದ್ದು ಅದರ ಅಂದಾಜು ಮೌಲ್ಯ 80,000 ರೂ. ಆಗಿರಬಹುದು ಎಂದು ಹೇಳಲಾಗಿದೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.