ಕರಾವಳಿ

ಅಬ್ದುಲ್ಲ ಅಝೀಝ್ ಮೇಲಿನ ತಲವಾರು ದಾಳಿಗೆ ವ್ಯಾಪಕ ಖಂಡನೆ: ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ

Pinterest LinkedIn Tumblr

ಇಬ್ರಾಹಿಂ ಸಖಾಫಿ                                                ವೆನ್ಝ್ ಅಬ್ದುಲ್ಲ ಅಝೀಝ್   

ಮಂಗಳೂರು, ನವೆಂಬರ್17: ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರು ತಾಲೂಕು ಸಮಿತಿಯ ನೂತನ ಕಾರ್ಯದರ್ಶಿಯಾಗಿ ಇತ್ತೀಚೆಗೆ ಆಯ್ಕೆಯಾದ ಎಸ್‌ವೈಎಸ್ ದ.ಕ. ಜಿಲ್ಲಾ ಸದಸ್ಯ ವೆನ್ಝ್ ಅಬ್ದುಲ್ಲ ಅವರ ಮೇಲೆ ದುಷ್ಕರ್ಮಿಗಳು ನಡೆಸಿದ ತಲವಾರು ದಾಳಿಗೆ ವಿವಿಧ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದು, ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದೆ.

ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕಂದಾವರ ಬಳಿ‌ ರವಿವಾರ ರಾತ್ರಿ‌ ಕಂದಾವರ ಕೈಕಂಬದ ನಿವಾಸಿ ವೆನ್ಝ್ ಅಬ್ದುಲ್ಲ ಅಝೀಝ್ (56)ಅವರ ಮೇಲೆ ದುಷ್ಕರ್ಮಿಗಳ ತಂಡ ಮಾರಾಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿಯಾಗಿತ್ತು.

ಅಬ್ದುಲ್ಲ ಅಝೀಝ್ ಅವರು ರಾತ್ರಿ ಸುಮಾರು 10:30ಕ್ಕೆ ಮಸೀದಿಯಲ್ಲಿ ನಮಾಝ್ ಮಾಡಿ ಮನೆಗೆ ಮರಳಲು ತನ್ನ ಕಾರಿನತ್ತ ನಡೆದುಕೊಂಡು ಬರುತ್ತಿದ್ದಾಗ ಇಬ್ಬರು ಯುವಕರು ತಲವಾರಿನಿಂದ ಅಝೀಝ್ ಅವರ ತಲೆ, ಕೈ, ಕಾಲಿಗೆ ಕಡಿದು, ಗಂಭೀರ ಗಾಯಗೊಳಿಸಿ, ಪರಾರಿಯಾಗಿದ್ದಾರೆ. ಇದು ಅಲ್ಲೇ ಪಕ್ಕದಲ್ಲಿದ್ದ ಸಿಸಿ ಟಿವಿಯಲ್ಲಿ ದಾಖಲಾಗಿದೆ.

ವೈಯಕ್ತಿಕ ದ್ವೇಷದಿಂದ ಈ ಕೃತ್ಯ ನಡೆದಿರುವ ಬಗ್ಗೆ ಶಂಕಿಸಲಾಗಿದೆ. ಗಾಯಗೊಂಡ ಅಝೀಝ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರಿನಲ್ಲಿ ವೆನ್ಝ್ ಬಟ್ಟೆಬರೆ ಅಂಗಡಿ ಹೊಂದಿರುವ ಅಝೀಝ್ ಕಂದಾವರ ಮಸೀದಿಯ ಆಡಳಿತ ಕಮಿಟಿಯಲ್ಲೂ ಸಕ್ರಿಯರಾಗಿದ್ದರು.

ಇದೀಗ ಈ ದಾಳಿ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಅಬ್ದುಲ್ಲ ಅಝೀಝ್ ಅವರ ಮೇಲಿನ ದಾಳಿಯನ್ನು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ರಾಜ್ಯ ಸಮಿತಿಯು ಖಂಡಿಸಿದೆ. ಸ್ಥಳೀಯವಾಗಿ ಧಾರ್ಮಿಕ- ಸಾಮಾಜಿಕ ಸಂಘ- ಸಂಸ್ಥೆಗಳಲ್ಲಿ ಸಕ್ರಿಯವಾಗಿ ದುಡಿಯುತ್ತಿರುವ ಅಬ್ದುಲ್ಲಾ ಸರ್ವ ಮತಬಾಂಧವರಿಗೂ ಆತ್ಮಿಯರಾಗಿದ್ದು ಜನಪ್ರಿಯ ಸಮಾಜ ಸೇವಕರಾಗಿದ್ದಾರೆ.

ರಾತ್ರಿ ನಡೆದ ಈ ಹತ್ಯೆ ಯತ್ನದ ಹಿಂದಿರುವ ಎಲ್ಲ ದುಷ್ಟಶಕ್ತಿಗಳನ್ನು ಬೇಧಿಸಿ ಅಬ್ದುಲ್ಲಾ ಅವರಿಗೆ ನ್ಯಾಯ ಮತ್ತು ರಕ್ಷಣೆ ನೀಡಬೇಕೆಂದು ಎಸ್‌ವೈಎಸ್ ರಾಜ್ಯಾಧ್ಯಕ್ಷ ಪಿ.ಎಂ.ಉಸ್ಮಾನ್ ಸಅದಿ ಪಟ್ಟೋರಿ ಹಾಗೂ ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನಿ ಕಾಮಿಲ್ ಮನವಿ ಮಾಡಿದ್ದಾರೆ.

ಅಬ್ದುಲ್ಲ ಅಝೀಝ್ ಅವರ ಮೇಲಿನ ದಾಳಿಯನ್ನು ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ. ಮೇಘ ಹಾಲ್‌ನಲ್ಲಿ ರವಿವಾರ ನಡೆದ ಎಸ್‌ವೈಎಸ್ ಕೌಂಟ್ 20 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಹಿಂದಿರುಗುವ ವೇಳೆ ಕಂದಾವರ ಮಸೀದಿಯಲ್ಲಿ ನಮಾಝ್ ಮುಗಿಸಿ ತನ್ನ ಕಾರಿನ ಬಳಿ ತೆರುತ್ತಿದ್ದಾಗ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳ ತಂಡ ಅವರ ಮೇಲೆ ತಲವಾರು ದಾಳಿ ಮಾಡಿದೆ.

ಈ ಕೃತ್ಯದ ಹಿಂದಿರುವ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಬೇಕು. ಘಟನೆಗೆ ಕಾರಣ ಏನೆಂಬುದನ್ನು ಕೂಲಂಕಷವಾಗಿ ತನಿಖೆ ನಡೆಸಿ ಸತ್ಯ ವಿಚಾರ ಹೊರತೆಗೆಯಬೇಕು ಎಂದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯನ್ನು ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ ಆಗ್ರಹಿಸಿದ್ದಾರೆ.

ಈ ಘಟನೆ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಲಾಗಿದ್ದು, ಬಜ್ಪೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Comments are closed.