ಕರಾವಳಿ

ಕುಂದಾಪುರದ ಬೀಜಾಡಿ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದ ಖತರ್ನಾಕ್ ದಂಪತಿ‌ ಸೆರೆ..!

Pinterest LinkedIn Tumblr

ಕುಂದಾಪುರ: ಯಾರೂ ಇಲ್ಲದ ಮನೆಯಲ್ಲಿ ಸೆ.6 ರಾತ್ರಿ ಅಂದಾಜು ಹತ್ತು ಲಕ್ಷ ಮೌಲ್ಯದ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿ ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಉಡುಪಿ ಇಂದ್ರಾಳಿಯ ಪ್ರಸ್ತುತ ದಾರಾವಾಡ ಜನತ್ ನಗರ ವಾಸಿ ರಾಜೇಶ ನಾಯ್ಕ ಅಲಿಯಾಸ್ ರಾಜ @ ರಾಜು ಪಾಮಡಿ (42) ಹಾಗೂ ಆತನ ಹೆಂಡತಿಯಾದ ಪದ್ಮ ಪಾಮಡಿ (37) ಬಂಧಿತ ಆರೋಪಿಗಳು. ಬಂಧಿತರಿಂದ ಕುಂದಾಪುರ, ಉಡುಪಿ ನಗರ, ಮಣಿಪಾಲ, ಗಂಗೊಳ್ಳಿ ,ದಾರಾವಾಢ ನಗರ ಠಾಣಾ ಸರಹದ್ದಿನಲ್ಲಿ ಕಳವು ಮಾಡಿರುವ ಒಟ್ಟು 202 ಗ್ರಾಂ ತೂಕದ ಚಿನ್ನ ಹಾಗೂ ಒಟ್ಟು 1 ಕೆಜಿ. 683 ಗ್ರಾಂ ಬೆಳ್ಳಿ ಹಾಗೂ 2 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಘಟನೆ ಏನು…?
ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ಬೀಪಾನ್‌ಬೆಟ್ಟು ರಸ್ತೆಯಲ್ಲಿರುವ ಜಯರಾಜ್‌ ಶೆಟ್ಟಯವರು ತನ್ನ ಪತ್ನಿ ತಂದೆಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಮನೆಗೆ ಬೀಗ ಹಾಕಿ ಹೋಗಿದ್ದ ಸಮಯದಲ್ಲಿ ಸೆ.6-7 ದಿನಾಂಕದ ಮದ್ಯೆ ರಾತ್ರಿ ಮನೆಯ ಬೀಗ ಮುರಿದು ಮನೆಯೊಳಗೆ ಇರಿಸಿದ್ದ ಸುಮಾರು 9 ಲಕ್ಷ 88 ಸಾವಿರದ 500 ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಕಳವು ನಡೆಸಿದ್ದರು. ಈ ಬಗ್ಗೆ ಜಯರಾಜ್‌ ಶೆಟ್ಟಿಯವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಖತರ್ನಾಕ್ ರಾಜನಿಗೆ ಹೆಂಡತಿಯೂ ಸಾತ್…!
ರಾಜೇಶ್ @ ರಾಜ @ ರಾಜು ಉಡುಪಿ ಇಂದ್ರಾಳಿಯವನಾಗಿದ್ದು ಈತನ ಹೆಂಡತಿ ಧಾರವಾಡದವಳಾಗಿದ್ದಾಳೆ. ಈ ಮೊದಲು ಕಾಪು ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿ ಜೈಲಿನಲ್ಲಿದ್ದವನು ಕಳೆದ ಜುಲೈ 2020 ರಲ್ಲಿ ಜಾಮೀನು ಮೇಲೆ ಬಿಡುಗಡೆಗೊಂಡು ಬಂದ ಬಳಿಕ ತನ್ನ ಹೆಂಡತಿಯೊಂದಿಗೆ ಸೇರಿಕೊಂಡು ಕುಂದಾಪುರ, ಸುರತ್ಕಲ್‌, ಮುಲ್ಕಿ, ಮಣಿಪಾಲ, ಗಂಗೊಳ್ಳಿ, ಭಟ್ಕಳ, ಮುರ್ಡೇಶ್ವರ, ಗೋಕರ್ಣ, ಕುಮಟಾ, ಹೊನ್ನಾವರ, ಕಾರಾವಾರದಲ್ಲಿ ಮನೆ ಹಾಗೂ ದೇವಸ್ಥಾನಗಳಲ್ಲಿ ಮತ್ತು ,ದೈವಸ್ಥಾನದಲ್ಲಿ ಕಳವು ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ.

ಕಾರ್ಯಾಚರಣೆ ತಂಡ….
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್‌ ಆದೇಶದಂತೆ ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಹಾಗೂ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್‌ ಮಾರ್ಗದರ್ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್‌ ರವರು ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ಆರೋಪಿ ವಶದಲ್ಲಿದ್ದ ಹಾಗೂ ಧಾರಾವಾಡ ಜುವೆಲ್ಲರಿ ಅಂಗಡಿಗಳಲ್ಲಿ ಮಾರಾಟ ಮಾಡಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಸ್ವಾಧೀನಪಡಿಸಿಕೊಂಡಿದ್ದು ಆಪಾದಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಕಾರ್ಯಚರಣೆಯಲ್ಲಿ ಕುಂದಾಪುರ ಠಾಣಾ ಪಿಎಸ್‌ಐ ಸದಾಶಿವ ಗವರೋಜಿ, ಕುಂದಾಪುರ ಸಂಚಾರ ಠಾಣಾ ಪಿಎಸ್ಐ ಸುದರ್ಶನ್‌ , ಶಂಕರನಾರಾಯಣ ಪಿಎಸ್ಐ ಶ್ರೀಧರ ನಾಯ್ಕ ಹಾಗೂ ಸಿಬ್ಬಂದಿಯವರಾದ ಮಂಜುನಾಥ, ಸಂತೋಷ, ರಾಘವೇಂದ್ರ, ಸಿದ್ದಪ್ಪ ವೃತ್ತ ಕಚೇರಿಯ ಸಿಬ್ಬಂದಿಗಳಾದ ಸೀತಾರಾಮ, ವಿಕ್ಟರ್‌, ಗುರುರಾಜ್, ಉದಯ,ಮಹಿಳಾ ಸಿಬ್ಬಂದಿಗಳಾದ ಬೇಬಿ, ಚಂದ್ರಾವತಿ, ಅಶ್ರೀತಾ ಮತ್ತು ಚಾಲಕ ಸಂತೋಷ ಪಾಲ್ಗೊಂಡಿದ್ದರು.

(ವರದಿ- ಯೋಗೀಶ್ ಕುಂಭಾಸಿ)

 

Comments are closed.