ಕರಾವಳಿ

ಸಿನೆಮಾ ಪ್ರೇರಣೆ?- ಕಷ್ಟ ಪರಿಹಾರಕ್ಕೆ ಮನೆಬಿಟ್ಟು ಭಿಕ್ಷಾಟನೆಗೆ ಬಂದ ಯುವಕ ಉಡುಪಿಯಲ್ಲಿ ರಕ್ಷಣೆ, ಮರಳಿ ಮನೆಗೆ..

Pinterest LinkedIn Tumblr

ಉಡುಪಿ: ಕನ್ನಡದ ‘ಅಮ್ಮ ಐ ಲವ್ ಯು’ ಚಲನಚಿತ್ರ ನೋಡಿದ ಯುವಕ ಚಲನಚಿತ್ರದಲ್ಲಿ ನಾಯಕ 48 ದಿನ ಬೇಡಿ ತಿಂದು ಕಷ್ಟ ಪರಿಹಾರ ಆಗುವುದೆಂದು ಕಥೆ ತಿಳಿದು ಉಡುಪಿ ಶ್ರೀ ಕೃಷ್ಣ ಮಠದ ಪರಿಸರದಲ್ಲಿ ಬೇಡುತ್ತಿದ್ದುದನ್ನು ಗಮನಿಸಿದ ಸಮಾಜ‌ಸೇವಕರಾದ ವಿಶು ಶೆಟ್ಟಿ ಅಂಬಲಪಾಡಿ ಹಾಗೂ ತಾರಾನಾಥ್ ಮೇಸ್ತ ಅವರಿಂದ ರಕ್ಷಿಸಲ್ಪಟ್ಟು ಬಾಳಿಗ ಆಸ್ಪತ್ರೆಗೆ ದಾಖಲಿಸಿ ತದನಂತರ ಚಿತ್ರದುರ್ಗದಲ್ಲಿರುವ ಹೆತ್ತವರ ಜೊತೆ ಮನೆಗೆ ತೆರಳಿದ್ದಾನೆ. ದೀಪಾವಳಿಯ ಈ ಶುಭ ಸಂದರ್ಭ ಮಾನವೀಯ ಘಟನೆಗೆ ಉಡುಪಿ ಸಾಕ್ಷಿಯಾಗಿದೆ.

ರಕ್ಷಿಸಲ್ಪಟ್ಟು ಮನೆ ಸೇರಿದ ಪದವೀಧರ ಯುವಕನು ಕೆಲಸವಿಲ್ಲದೆ ಮನನೊಂದು ಮನೆ ಬಿಟ್ಟು ಊರಿಂದ ಊರಿಗೆ ಸಂಚರಿಸುತ್ತಿದ್ದು ಉಡುಪಿಯಲ್ಲಿ ರಕ್ಷಣೆಗೊಳಗಾಗಿದ್ದಾರೆ. ಮಗ ಮನೆ ಬಿಟ್ಟಂದಿನಿಂದ ಹೆತ್ತವರು ಹುಡುಕಾಟದಲ್ಲಿ ನಿರತರಾಗಿದ್ದರು. ಮೂಲತ ಚಿತ್ರದುರ್ಗದ ಯುವಕ ಮಗನ ಇರುವಿಕೆಯ ಸುದ್ದಿ ತಿಳಿದು ಯುವಕನ ತಂದೆ ಕೂಡಲೇ ಉಡುಪಿಗೆ ಬಂದು ಮಗನನ್ನು ಕಂಡು ಸಂತೋಷದಿಂದ ಊರಿಗೆ ಕರೆದುಕೊಂಡು ಹೋಗಿದ್ದಾರೆ.

ಈ ವರ್ಷ ಮಗನಿಲ್ಲದೆ ದೀಪಾವಳಿ ಆಚರಣೆ ಇಲ್ಲ ಎಂದು ಎನಿಸಿದ್ದೆವು. ಇದೀಗ ದೀಪಾವಳಿಗೆ ಮಗ ಸಿಕ್ಕಿರುವುದು ಸಂತಸ ತಂದಿದೆ. ಮಗನನ್ನು ರಕ್ಷಿಸಿ ಆರೈಕೆ ಮಾಡಿದ ಸಮಾಜ ಸೇವಕರು ನಿಜವಾಗಿ ನಮ್ಮ ಪಾಲಿನ ಆಪತ್ಬಾಂಧವರು. ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಹಾರೈಸಿ ಚಿತ್ರದುರ್ಗಕ್ಕೆ ಮಗನನ್ನು ಕರೆದೊಯ್ದದರು.

Comments are closed.