ಕರಾವಳಿ

ಭಾರತದ ಪ್ರತಿ ಭಾಷೆಯಲ್ಲಿಯೂ ಸುದ್ದಿ ವಾಹಿನಿ ಆರಂಭಿಸುತ್ತೇನೆ: ಮಹಾ ಸಿಎಂಗೆ ಅರ್ನಬ್ ಗೋಸ್ವಾಮಿ ಸವಾಲು

Pinterest LinkedIn Tumblr

ಮುಂಬೈ : ಉದ್ಧವ್ ಠಾಕ್ರೆ, ನೀವು ಎಲ್ಲಾ ಕಳೆದುಕೊಂಡಿರಿ, ಸೋತುಹೋದಿರಿ ಎಂದು ಸುಪ್ರೀಂಕೋರ್ಟ್ ಜಾಮೀನು ನೀಡಿದ ಬಳಿಕ ಜೈಲಿನಿಂದ ಬಿಡುಗಡೆಗೊಂಡ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಕಿಡಿಕಾರಿದ್ದಾರೆ.

ಸುಪ್ರೀಂ ಕೋರ್ಟ್ ನಿಂದ ಮಧ್ಯಂತರ ಜಾಮೀನು ಪಡೆದು ಬಿಡುಗಡೆಯಾದ ಬಳಿಕ ರಿಪಬ್ಲಿಕ್ ವಾಹಿನಿಯ ಕಚೇರಿಗೆ ಮರಳಿದ ಅರ್ನಬ್ ಗೋಸ್ವಾಮಿ ಮೊದಲಿಗೆ ತಮ್ಮ ಸಹೋದ್ಯೋಗಿಗಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು.

ಬಳಿಕ ತಮ್ಮ ಟಿವಿ ಚಾನೆಲ್ ನ ನ್ಯೂಸ್ ರೂಂನಿಂದ ಮಾತನಾಡಿದ ಅವರು, ಯಾವುದೇ ಶಕ್ತಿಯು ರಿಪಬ್ಲಿಕ್ ನೆಟ್ ವರ್ಕ್ ಅನ್ನು ಮುಗಿಸಲು ಸಾಧ್ಯವಿಲ್ಲ. ನಾವು ಇನ್ನು ಮುಂದಿನ 16-17 ತಿಂಗಳಲ್ಲಿ ಭಾರತದ ಪ್ರತಿ ಭಾಷೆಯಲ್ಲಿಯೂ ಸುದ್ದಿ ವಾಹಿನಿ ಆರಂಭಿಸಲಿದ್ದೇವೆ. ಅಂತಾರಾಷ್ಟ್ರೀಯ ನೆಟ್ ವರ್ಕ್ ಬೆಳೆಸಲಿದ್ದೇವೆ. ಉದ್ಧವ್ ಠಾಕ್ರೆ, ನಿಮಗೆ ಸಾಧ್ಯವಾದರೆ ತಡೆಯಿರಿ. ಜೈಲಿಗೆ ಇನ್ನೊಮ್ಮೆ ಕಳಿಸಿ. ಅಲ್ಲಿಯೇ ಸುದ್ದಿ ವಾಹಿನಿ ಆರಂಭಿಸುತ್ತೇನೆ ಎಂದು ಸವಾಲು ಹಾಕಿದರು.

ಒಂದು ಹಳೆಯ ಸುಳ್ಳು ಪ್ರಕರಣದಲ್ಲಿ ನನ್ನನ್ನು ಸಿಕ್ಕಿಹಾಕಿಸಿ ಬಂಧಿಸಿದಿರಿ. ಇದಕ್ಕಾಗಿ ನನ್ನ ಕ್ಷಮೆಯನ್ನು ಕೂಡ ಕೇಳಲಿಲ್ಲ ಈಗಷ್ಟೇ ಆಟ ಆರಂಭವಾಗಿದೆ, ರಿಪಬ್ಲಿಕ್ ಟಿವಿ ಚಾನೆಲ್ ಅನ್ನು ಎಲ್ಲಾ ಸ್ಥಳೀಯ ಭಾಷೆಗಳಲ್ಲಿಯೂ ಆರಂಭಿಸಲಾಗುವುದು. ಅಂತಾರಾಷ್ಟ್ರೀಯ ಮಾಧ್ಯಮವನ್ನು ಸಹ ತೆರೆಯಲಾಗುವುದು ಎಂದು ಘೋಷಿಸಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ನಿರಂತರ ವಾಗ್ದಾಳಿ ನಡೆಸಿದ ಅರ್ನಬ್, ಪ್ರಮಾಣವಚನ ಸ್ವೀಕಾರದ ವೇಳೆ ಏನೆಂದು ಪ್ರತಿಜ್ಞೆ ಮಾಡಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ. ನಾನು ಇದರಿಂದ ಎದೆಗುಂದುವುದಿಲ್ಲ. ಇದರಿಂದ ಮತ್ತಷ್ಟು ಬಲಗೊಂಡಿದ್ದೇನೆ. ನಮಗೆ ದೇಶ ಮುಖ್ಯ. ಇದರಲ್ಲಿ ಯಾವ ರಾಜಿಯೂ ಆಗುವುದಿಲ್ಲ ಎಂದರು.

ತಮಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್ ಗೆ ಧನ್ಯವಾದ ಹೇಳಿದ ಅವರು,ಇದು ಭಾರತದ ಜನರ ವಿಜಯ. ನಾನು ಸುಪ್ರೀಂಕೋರ್ಟ್‌ಗೆ ಆಭಾರಿಯಾಗಿರುತ್ತೇನೆ ಎಂದರು. ಕೆಲವು ವಾಕ್ಯವನ್ನು ಮರಾಠಿ ಭಾಷೆಯಲ್ಲಿ ಮಾತನಾಡಿ ಜೈ ಮಹಾರಾಷ್ಟ್ರ ಎಂದು ಕೂಗಿದ ಅರ್ನಬ್, ಮಹಾರಾಷ್ಟ್ರದ ಜನತೆ ನನ್ನೊಂದಿಗೆ ಇದ್ದಾರೆ ಎಂದು ಹೇಳಿ ಮತ್ತೊಮ್ಮೆ ‘ಜೈ ಮಹಾರಾಷ್ಟ್ರ’ ಎಂದು ಘೋಷಣೆ ಕೂಗಿದರು.

2018ರಲ್ಲಿ 53 ವರ್ಷದ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ತಾಯಿ ಕುಮುದ್‌ ನಾಯಕ್ ಆತ್ಮಹತ್ಯೆ ಪ್ರಕರಣದಲ್ಲಿ ಅರ್ನಬ್ ಗೋಸ್ವಾಮಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ಮುಂಬೈ ಪೊಲೀಸರು ಹಠಾತ್ತನೇ ದಾಳಿ ನಡೆಸಿ ಅರ್ನಬ್‌ನ್ನು ಬಂಧಿಸಿದ್ದರು.

ಈ ಪ್ರಕರಣದ ತನಿಖೆ ಕೈಗೊಂಡಿದ್ದ ಸುಪ್ರೀಂ ಕೋರ್ಟ್ ಬುಧವಾರ ಮಧ್ಯಂತರ ಜಾಮೀನು ನೀಡಿದ್ದು, ಒಂದು ವಾರ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಅರ್ನಬ್‌ ನಿನ್ನೆ ಜೈಲಿನಿಂದ ಹೊರಬಂದ ಬಳಿಕ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದ್ದಾರೆ.

Comments are closed.