ಕರಾವಳಿ

ಕಳೆದ 20 ವರ್ಷಗಳಿಂದ ಈ ಊರಿನ ಜನರಿಗೆ ರಸ್ತೆಯೇ ಇಲ್ಲ: ಸಂಕಷ್ಟದಲ್ಲಿ 100ಕ್ಕೂ ಅಧಿಕ ಮನೆಗಳು

Pinterest LinkedIn Tumblr

ಮಂಗಳೂರು / ಪುತ್ತೂರು: ಪುತ್ತೂರು ನಗರದಿಂದ ಕೇವಲ 10 ಕಿ.ಮೀ. ದೂರದಲ್ಲಿರುವ ಹಳ್ಳಿಯೊಂದು ಇಂದಿಗೂ ಕುಗ್ರಾಮ ಇದೆ ಎಂದರೆ ಯಾರಾದರೂ ನಂಬುತ್ತೀರಾ. ರಸ್ತೆಯೇ ಇಲ್ಲದೆ ಸುಮಾರು100ಕ್ಕೂ ಅಧಿಕ ಮನೆಗಳು ಇಂದಿಗೂ ಸಂಕಷ್ಟದ ನಡುವೆ ಬಾಳಿ ಬದುಕುತ್ತಿದ್ದಾರೆ.

ಈ ರಸ್ತೆಯ ದುರಸ್ತಿಗೆ ಎರಡು ದಶಕದಿಂದ ಶಾಸಕರಿಗೆ, ಸಂಸದರಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ, ಈ ವರ್ಷ ಅನುದಾನ ಇಲ್ಲ ಮುಂದಿನ ಬಾರಿ ನೋಡೋಣ ಪುಕ್ಕಟೆ ಭರವಸೆಯನ್ನೇ ನಂಬಿದ್ದರು. ಇದೀಗ ಗ್ರಾಮಸ್ಥರ ಆಕ್ರೋಶದ ಕಟ್ಟೆ ಒಡೆದಿದ್ದು, ಮುಂದಿನ ದಿನಗಳಲ್ಲಿ ಬರುವ ಗ್ರಾಮ ಪಂಚಾಯತ್ ಚುನಾವಣೆಯನ್ನೇ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.

ಪುತ್ತೂರು ತಾಲೂಕು ಆರ್ಯಾಪು, ಕೆಮ್ಮಿಂಜೆ, ಕುರಿಯ ಗ್ರಾಮದ ನಡುವೆ ಬರುವ ಇಡಬೆಟ್ಟು ಹಾಗೂ ಆಸುಪಾಸಿನ ಜನರ ಸಮಸ್ಯೆಯಾಗಿದೆ. ಈ ರಸ್ತೆಯು ಇಡಬೆಟ್ಟು, ಅಮ್ಮುಂಜ, ಕಾರಿಜ, ಕಟ್ಟತಬೈಲು, ಓಟೆತಿಮಾರು ಸಂಪರ್ಕ, ಪೊಯ್ಯೆ, ಕುರಿಯ ಏಳ್ನಾಡುಗುತ್ತು ಭಾಗದಲ್ಲಿ ಸುಮಾರು 100 ಮನೆಗಳು, ಮೂರು ಕಾಲೋನಿಗಳು, ಮಸೀದಿ, ದೇವಸ್ಥಾನ, ಶಾಲೆಯನ್ನು ಸಂಪರ್ಕಿಸುವ ರಸ್ತೆ ಇದಾಗಿದೆ.

1990ರ ವರೆಗೆ ಊರಿನವರೇ ರಸ್ತೆಯನ್ನು ನಿರ್ವಹಣೆ ಮಾಡುತ್ತಿದ್ದರು. ವಿಜಯ ಕುಮಾರ್ ಸೊರಕೆ ಎರಡನೇ ಅವಧಿಯ ಚನಾವಣಾ ಪ್ರಚಾರಕ್ಕೆ ಬಂದ ವೇಳೆ ರಸ್ತೆಯ ಅಭಿವೃದ್ಧಿ ಮಾಡಬೇಕು ಎಂದು ಊರಿನವರು ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ವಿಜಯ ಕುಮಾರ್ ಸೊರಕೆ 1991ರಲ್ಲಿ ರಸ್ತೆಯನ್ನು ಅಗಲೀಕರಣಗೊಳಿಸಿದ್ದರು.

ಇದಾದ ಬಳಿಕ ಸತತ ಮನವಿ ಸಲ್ಲಿಸಿದ ಪರಿಣಾಮ ಮೂರು ಕಿ.ಮಿ. ಈ ರಸ್ತೆ ಕೇವಲ 850 ಮೀಟರ್ ರಸ್ತೆಗೆ ಡಾಂಬರೀಕರಣ ಹಾಕಲಾಯಿತು. ಎರಡು ಬಾರಿ ಶಾಸಕರ ನಿಧಿಯಿಂದ ಕೇವಲ100 ಮೀಟರ್ ಕಾಂಕ್ರೀಟೀಕರಣವಾಯಿತು. ಅಷ್ಟು ಬಿಟ್ಟರೆ ಈ ಊರಿನ ರಸ್ತೆ ಅಥವಾ ಚರಂಡಿ ಅಭಿವೃದ್ಧಿಗೆ ಇಂದಿನ ವರೆಗೆ ಜನಪ್ರತಿನಿಧಿಗಳು ಇಚ್ಛಾಶಕ್ತಿಯನ್ನೇ ತೋರಿಸಿಲ್ಲ. ಊರಿನ ಜನರ ಮನವಿ ಈಡೇರಲೇ ಇಲ್ಲ.

ಈ ಊರಿನ ಜನರು ಎಲ್ಲ ವ್ಯವಹಾರಕ್ಕೆ ಪುತ್ತೂರು ನಗರವನ್ನೇ ಅವಲಂಬಿಸಿದ್ದಾರೆ. ಯಾವುದೇ ಕೆಲಸ, ಮಾರುಕಟ್ಟೆ, ಹೆರಿಗೆ ಸೇರಿದಂತೆ ಅನಾರೋಗ್ಯವಾದ ವೇಳೆ ಆಸ್ಪತ್ರೆಗೆ ಬರಬೇಕಾದರೂ ಈ ಊರಿನ ಜನರಿಗೆ ಪುತ್ತೂರು ಪೇಟೆಗೆ ಬರಬೇಕು. ಇದರಿಂದಾಗಿ ಗ್ರಾಮ ಪಂಚಾಯತ್ ರಸ್ತೆ ದುರಸ್ತಿ ಮಾಡದಾಗ ಊರಿನವರೇ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ರಸ್ತೆಯನ್ನು ದುರಸ್ತಿ ಮಾಡುವುದು ಸಂಪ್ರದಾಯ.

ಪ್ರತಿಷ್ಠಿತ ಪ್ರದೇಶ :

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪ್ರತಿನಿಧಿಸುವ ಕ್ಷೇತ್ರ. ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಶಕುಂತಳಾ ಶೆಟ್ಟಿ ಎರಡು ಬಾರಿ, ಮಲ್ಲಿಕಾ ಪ್ರಸಾದ್ ಒಮ್ಮೆ ಶಾಸಕರಾಗಿ ಪ್ರತಿನಿಧಿಸಿದ ಕ್ಷೇತ್ರ. ಪ್ರಸ್ತುತ ಸಂಜೀವ ಮಠಂದೂರು ಪ್ರತಿನಿಧಿಸುತ್ತಿದ್ದಾರೆ.

ಬಿಜೆಪಿ ಮಂಡಲ ಅಧ್ಯಕ್ಷರ ಕ್ಷೇತ್ರ. ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಸದಸ್ಯರು ಈ ರಸ್ತೆಯಲ್ಲೇ ಓಡಾಡುತ್ತಿದ್ದರೂ ದುರಸ್ತಿ ಭಾಗ್ಯಕಾಣಲಿಲ್ಲ. ಅಂದರೆ ಇಚ್ಛಾಶಕ್ತಿಯ ಕೊರತೆ ಬಿಟ್ಟರೆ ಇನ್ಯಾವುದೇ ಸಮಸ್ಯೆಗಳು ಕಾಣುವುದಿಲ್ಲ.

ಊರಿನ ರಸ್ತೆ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡುವಂತೆ ಮಳೆಗಾಲದ ಬಳಿಕ ಊರಿನ ಯುವಕರ ನಿಯೋಗವು ಶಾಸಕ ಸಂಜೀವ ಮಠಂದೂರು ಅವರಿಗೆ ಮನವಿ ಸಲ್ಲಿಸಿತ್ತು. ಮನವಿ ಸಲ್ಲಿಸಿದ ವೇಳೆ 77 ಲಕ್ಷ ಅನುದಾನ ಬಿಡುಗಡೆಯಾಗಿದೆ. ಮಳೆಗಾಲ ಪೂರ್ಣವಾದ ಬಳಿಕ ಡಾಂಬರೀಕರಣ ಮಾಡಲಾಗುವುದು ಎಂದು ಭರವಸೆಯನ್ನು ನೀಡಿದ್ದರು.

ಮಾತ್ರವಲ್ಲದೆ ಐದು ಲಕ್ಷ ರೂ. ವೆಚ್ಚದಲ್ಲಿ 100 ಮೀಟರ್ ಕಾಂಕ್ರಿಟೀಕರಣ ಮಾಡಲಾಗುವುದು ಎಂಬ ಭರವಸೆಯನ್ನೂ ನೀಡಿದ್ದರು. ಶಾಸಕರು ನೀಡಿದ ಭರವಸೆಯನ್ನು ನಂಬಿದ ಊರಿನ ನಾಯಕರಿಕರು ಶಾಸಕರಿಗೆ ಅಭಿನಂದನೆ ಸಲ್ಲಿಸಿ ಬ್ಯಾನರ್ ಮುದ್ರಣ ಮಾಡಿ ಹಾಕಿದ್ದೇ ಬಂತು ಎಂದು ಬೇಸರ ವ್ಯಕ್ತಪಡಿಸುತ್ತಾರೆ ಊರಿನ ವಿನೋದ್ ಇಡಬೆಟ್ಟು.

ಹೊಸ ಸೀರೆ ಬರುತ್ತದೆ ಎಂದು ಹಳೆ ಸೀರೆಯನ್ನು ಒಲೆಗೆ ಹಾಕಿದ ಸ್ಥಿತಿ. ಯಾಕೆಂದರೆ 100 ಮೀಟರ್ ರಸ್ತೆ ಕಾಂಕ್ರಿಟೀಕರಣಕ್ಕೆ ಗುತ್ತಿಗೆ ಪಡೆದ ಗುತ್ತಿಗೆದಾರರು ಎರಡು ತಿಂಗಳ ಹಿಂದೆ ರಸ್ತೆಯನ್ನು ಅಗೆದು ಹೋಗಿದ್ದಾರೆ. ಬಳಿಕ ಈ ಕಡೆ ಬರಲೇ ಇಲ್ಲ. ಇದರಿಂದಾಗಿ ಇದೀಗ ಸಂಪರ್ಕವೇ ಇಲ್ಲದ ನಗರದ ಸಮೀಪದ ಕುಗ್ರಾಮವಾಗಿದೆ.

ಶಾಸಕರಿಂದ ಶಾಕಿಂಗ್ ಟ್ರೀಟ್‌ಮೆಂಟ್ :

ಗುತ್ತಿಗೆದಾರರು ರಸ್ತೆ ಅಗೆದು ಇದ್ದ ರಸ್ತೆಯನ್ನು ಇಲ್ಲದಂತೆ ಮಾಡಿರುವ ಕುರಿತು ಶಾಸಕರಿಗೆ ದೂರು ಸಲ್ಲಿಸಿ, ಅಂದು ಬಿಡುಗಡೆ ಮಾಡಿದ 77 ಲಕ್ಷ ರೂ. ಮೊತ್ತದ ಕಾಮಗಾರಿಯ ಪ್ರಗತಿಯ ಕುರಿತು ಮಾತನಾಡಿದಾಗ 77 ಲಕ್ಷ ರೂ. ಅನುದಾನ ಬಿಡುಗಡೆಯೇ ಆಗಲಿಲ್ಲ ಎಂಬ ಹೇಳಿಕೆ ನೀಡಿ ಊರಿನ ನಾಗರಿಕರಿಗೆ ಶಾಕಿಂಗ್ ಟ್ರೀಟ್‌ಮೆಂಟ್ ನೀಡಿದ್ದಾರೆ.

ರಸ್ತೆಯೇ ಇಲ್ಲ ಎಂದಾದ ಮೇಲೆ ಪ್ಯಾಚ್ ವರ್ಕ್ ಯಾವುದಕ್ಕೆ?

ಇಡಬೆಟ್ಟು ರಸ್ತೆಯಲ್ಲಿ ಈ ಹಿಂದೆ ಹಾಕಿರುವ ಬಹುತೇಕ ಎಲ್ಲ ಡಾಂಬರೀಕರಣ ಹೋಗಿದೆ. ಆದರೆ ಶಾಸಕರು ಈ ಭಾರಿ ಪ್ಯಾಚ್ ವರ್ಕ್ ಮಾಡುತ್ತೇವೆ ಎನ್ನುವ ಭರವಸೆ ನೀಡಿದ್ದಾರೆ. ರಸ್ತೆಯೇ ಇಲ್ಲ ಎಂದಾದ ಮೇಲೆ ಪ್ಯಾಚ್ ವರ್ಕ್ ಯಾವುದಕ್ಕಾಗಿ ಮಾಡುತ್ತಾರೆ. ಇದೊಂದು ಕಣ್ಣೋರೆಸುವ ತಂತ್ರವಾಗಿ. ಆದುದರಿಂದ ಪ್ಯಾಚ್ ವರ್ಕ್ ಮಾಡುವುದೇ ಬೇಡ. ಆದುದರಿಂದನಾವು ಚುನಾವಣೆಗೆ ಬಹಿಷ್ಕಾರಕ್ಕೆ ತೀರ್ಮಾನಿಸಿದ್ದೇವೆ – ಗೋಪಾಲ ಕೃಷ್ಣ ಗೌಡ ಕರೆಜ್ಜ

ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕರಕ್ಕೆ ನಿರ್ಧಾರ!

ಕಳೆದ ಮೂರು ದಶಕದಿಂದ ರಸ್ತೆಯನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಲು ಮನವಿ ಸಲ್ಲಿಸಿದರೂ ಯಾರೂ ಸ್ಪಂದನೆ ನೀಡುತ್ತಿಲ್ಲ. ಆದುದರಿಂದ ಮುಂದಿನ ದಿನಗಳಲ್ಲಿ ಬರುವ ಗ್ರಾಮ ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸಲಾಗುವುದು. ಈ ನಿಟ್ಟಿನಲ್ಲಿ ಇಂದಿನಿಂದಲೇ ಊರಿನ ಎಲ್ಲ ನಾಗರಿಕರ ಮನವೊಲಿಸಲಾಗುವುದು. ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲ ಮಾದ್ಯಮಗಳ ಮೂಲಕ ಜನಜಾಗೃತಿ ಮೂಡಿಸಲಾಗುವುದು – ಶ್ರೀಧರ ಮಣಿಯಾಣಿ, ಇಡಬೆಟ್ಟು

Comments are closed.