ಕರಾವಳಿ

ಪಚ್ಚನಾಡಿ ತ್ಯಾಜ್ಯ ಕುಸಿತದಿಂದ ಹಾನಿ : ಸಂತ್ರಸ್ತರು ಪರಿಹಾರಕ್ಕಾಗಿ ನೇರ ಅರ್ಜಿ ಸಲ್ಲಿಸಲು ಸೂಚನೆ

Pinterest LinkedIn Tumblr

ಮಂಗಳೂರು : ಘನತ್ಯಾಜ್ಯ ಭೂಭರ್ತಿಯಿಂದ ನಷ್ಟಗೊಂಡ ಪಚ್ಚನಾಡಿ ಸುತ್ತ-ಮುತ್ತದ ಸಂತ್ರಸ್ತರು ಪರಿಹಾರದ ಅರ್ಜಿಗಳನ್ನು ನೇರವಾಗಿ ಸೂಕ್ತ ಪ್ರಾಧಿಕಾರಕ್ಕೆ ಸಲ್ಲಿಸಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾ ಮತ್ತು ಸತ್ರ ಪ್ರಧಾನ ನ್ಯಾಯಾಧೀಶ ಮುರಳೀಧರ್ ವೈ.ಬಿ ಅವರು ತಿಳಿಸಿದರು.

ಅವರು ನಗರದ ಹೊರ ವಲಯದ ಎಸ್.ಡಿ.ಎಮ್ ಮಂಗಳಜ್ಯೋತಿ ಸಮಗ್ರಶಾಲೆಯ ಸಭಾಂಗಣದಲ್ಲಿ ದ.ಕ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಘನತ್ಯಾಜ್ಯ ಭೂಭರ್ತಿಯಿಂದ ನಷ್ಟಗೊಂಡ ಸಂತ್ರಸ್ತರಿಗೆ ಕಾನೂನು ನೆರವು ಒದಗಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ, ಕುಡುಪು ಹಾಗೂ ಮಂದಾರ ಪ್ರದೇಶದಲ್ಲಿ ಘನ ತ್ಯಾಜ್ಯ, ಭೂಭರ್ತಿ ಘಟಕದಿಂದ ಉಂಟಾಗಿರುವ ಅನಾಹುತದಿಂದ ಸಂತ್ರಸ್ಥರು ತಮಗಾದ ನಷ್ಟದ ಬಗ್ಗೆ ಮಹಾನಗರ ಪಾಲಿಕೆಗೆ ಅಥವಾ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನೇರವಾಗಿ ಅರ್ಜಿ ಸಲ್ಲಿಸಬೇಕೆಂದರು.

ಕೆಲವು ಮಧ್ಯವರ್ತಿಗಳು ಹೆಚ್ಚಿನ ಪರಿಹಾರ ಕೊಡಿಸುವುದಾಗಿ ವಂಚನೆ ಮಾಡುವ ಬಗ್ಗೆ ಕೇಳಿ ಬರುತ್ತಿದೆ. ಸಂತ್ರಸ್ತರು ಇದಕ್ಕೆ ಅಸ್ಪಾದ ನೀಡದೇ ತಮಗಾದ ನಷ್ಟದ ಬಗ್ಗೆ ವಿವರದೊಂದಿಗೆ ಅಗತ್ಯ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕೆಂದರು.

ಪರಿಹಾರ ಕೋರಿದ ಅರ್ಜಿಯನ್ನು ತಮ್ಮ ಬೆಳೆಗಾದ ನಷ್ಟ, ಮರಗಳಿಗಾದ ನಷ್ಟ, ಮನೆಹಾನಿ, ಜಮೀನು ಮುಚ್ಚಿ ಹೋಗಿರುವುದರಿಂದ ಆದ ನಷ್ಟ ಅಲ್ಲದೇ ಮತ್ತಿತರ ಯಾವುದೇ ರೀತಿಯ ನಷ್ಟದ ಬಗ್ಗೆ ನಿಖರವಾಗಿ ದಾಖಲೆಗಳೊಂದಿಗೆ ಸಲ್ಲಿಸಿದಾಗ ಮಹಾನಗರ ಪಾಲಿಕೆ ಪರಿಹಾರವನ್ನು ಅವುಗಳ ಆಧಾರದ ಮೇಲೆ ನೀಡಲು ಅನುಕೂಲವಾಗುತ್ತದೆ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸಂತ್ರಸ್ತರಿಗೆ ನ್ಯಾಯುತ ಪರಿಹಾರ ಕೊಡಿಸಲು ಎಲ್ಲಾ ರೀತಿಯ ಸಹಕಾರ ನೀಡಲು ಮುಂದಾಗಿದೆ ಇದರ ಸದುಪಯೋಗವನ್ನು ಸಂತ್ರಸ್ತರು ಪಡೆದುಕೊಳ್ಳಬೇಕೆಂದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಸಂತ್ರಸ್ತರಿಗೆ ನ್ಯಾಯ ಒದಗಿಸಿ ಕೊಡಬೇಕೆಂಬ ಉದ್ದೇಶ ಹೊಂದಿ       ಸ್ವ ಇಚ್ಛೆಯಿಂದ ಉಚ್ಛನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿ ಪರಿಹಾರ ಮತ್ತು ಪುನರ್ವಸತಿಗೆ ಪಾಲಿಕೆಗೆ ಸಲ್ಲಿಸಿದ್ದ ರೂ,22 ಕೋಟಿ ಪ್ರಸಾವನೆ ಬದಲಿಗೆ ರೂ,8 ಕೋಟಿ ಮಾತ್ರ ನೀಡಿತ್ತು, ಬಾಕಿ ಉಳಿದ 14 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ನ್ಯಾಯಾಲಯದಲ್ಲಿ ಪ್ರಮಾಣ ಪತ್ರ ಸಲ್ಲಿಸಿತ್ತು.

ಸಂತ್ರಸ್ತರು ಈಗಲೂ ಸಹ ತಮಗಾದ ನಷ್ಟ ಪರಿಹಾರವನ್ನು ಕೋರಿ ಅರ್ಜಿ ಸಲ್ಲಿಸಲು ಅವಕಾಶವಿದೆ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಮಹಾನಗರ ಪಾಲಿಕೆಯ ಜಂಟಿ ಆಯುಕ್ತ ಜಿ.ಸಂತೋಷ್ ಕುಮಾರ್ ಮಾತನಾಡಿ ಸಂತ್ರಸ್ತರು ತಮಗಾದ ನಷ್ಟದ ವಿವರಗಳನ್ನು ಲಿಖಿತವಾಗಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಿದಾಗ ಪಾಲಿಕೆಯು ಅದನ್ನು ಆಧಾರಿಸಿ ಪರಿಹಾರ ಹಣವನ್ನು ನೀಡಲು ಸಾಧ್ಯವಾಗುತ್ತದೆ. ಸಂತ್ರಸ್ತರು ಇದನ್ನು ಗಮನದಲ್ಲಿಟ್ಟುಕೊಂಡು ಅರ್ಜಿ ಸಲ್ಲಿಸಬೇಕೆಂದರು.

ಸಭೆಯಲ್ಲಿ ಜಿಲ್ಲಾ ಕಾನೂನು ಸೇವಾಪ್ರಾಧಿಕಾರದ ಕಾರ್ಯದರ್ಶಿ ಎ.ಜಿ ಶಿಲ್ಪಾ , ಮಹಾನಗರಪಾಲಿಕೆಯ ಸದಸ್ಯೆ ಸಂಗೀತಾ ಆರ್. ನಾಯಕ್, ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ, ಕಾನೂನು ಸೇವಾ ಪ್ರಾಧಿಕಾರದ ವಕೀಲ ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.

Comments are closed.