ಕರಾವಳಿ

ಸಿಎಂ ಹೆಸರಿನ ನಕಲಿ ಖಾತೆಯಿಂದ ಮಣಿಪಾಲ ಮಾಹೆಗೆ ಇಮೇಲ್..!

Pinterest LinkedIn Tumblr

ಉಡುಪಿ: ಮುಖ್ಯಮಂತ್ರಿ ಹೆಸರಿನಲ್ಲಿ ನಕಲಿ ಇಮೇಲ್‌ ಐಡಿ ಸೃಷ್ಟಿಸಿ ಮಣಿಪಾಲದ ಮಾಹೆ ರಿಜಿಸ್ಟ್ರಾರ್ ವಿಭಾಗಕ್ಕೆ ಬೆದರಿಕೆ ಇಮೇಲ್‌ ಕಳುಹಿಸಲಾಗಿದೆ. ಈ ಬಗ್ಗೆ ಮಣಿಪಾಲದ ಮಾಹೆ ನಿರ್ದೇಶಕ ಡಾ.ನಾರಾಯಣ ಸಭಾಯಿತ್ ಉಡುಪಿ ಸೆನ್‌ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ನ.1ರಂದು ಬೆಳಿಗ್ಗೆ 4.48ಕ್ಕೆ cm@karnataka.gov.in ಎಂಬ ಖಾತೆಯಿಂದ ಮಾಹೆಗೆ ಮೇಲ್‌ ಬಂದಿದ್ದು, ‘ಮಣಿಪಾಲ ಅಕಾಡೆಮಿ ಆಫ್‌ ಹೈಯರ್ ಎಜುಕೇಷನ್‌ ಸಂಸ್ಥೆಯು ಕಾಲೇಜುಗಳನ್ನು ಆರಂಭಿಸುತ್ತಿರುವ ಬಗ್ಗೆ ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ದೂರುಗಳು ಬಂದಿವೆ. ಸದ್ಯದ ಪರಿಸ್ಥಿತಿಯಲ್ಲಿ ಕಾಲೇಜುಗಳನ್ನು ತೆರೆಯುವುದು ಸರಿಯಲ್ಲ. ಜ.1, 2021ರವರೆಗೆ ಕಾಲೇಜುಗಳನ್ನು ಆರಂಭಿಸಬಾರದು. ನಂತರ ತೆರೆಯಬೇಕಾದರೆ ಪೋಷಕರ ಹಾಗೂ ವಿದ್ಯಾರ್ಥಿಗಳ ಅಭಿಪ್ರಾಯ ಪಡೆಯಬೇಕು’ (We have received several emails and complaints from parents and students all around the globe regarding MAHE plan to re open colleges. The condition is not suitable as of now to open the colleges in Nov/Dec-2020. This mail is to make MAHE management aware that it is not allowed to open any colleges on or before 2nd Jan-2021. After 2nd Jan-2021, if plan to reopen you need to collect parent`s consent to send their wards back to collage) ಎಂದು ಇಮೇಲ್‌ ಕಳುಹಿಸಲಾಗಿದೆ.

ಇಷ್ಟೇ ಅಲ್ಲದೇ ‘ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ, ಕೊಠಡಿ ಸಂಖ್ಯೆ 323 ‘ಎ’ ಮೂರನೇ ಮಹಡಿ, ವಿಧಾನಸೌಧ, ಬೆಂಗಳೂರು’ ಎಂದು ಸಂದೇಶದಲ್ಲಿ ನಮೂದಿಸಲಾಗಿತ್ತು.

ಈ ಮೂಲಕ ಯಾವನೋ ದುಷ್ಕರ್ಮಿ, ಮುಖ್ಯಮಂತ್ರಿಯವರ ಈ-ಮೇಲ್ ಐ.ಡಿ.ಯನ್ನು ಕದ್ದು, ಅದೇ ರೀತಿಯಾಗಿ ಸುಳ್ಳು ಈ-ಮೇಲ್ ಐ.ಡಿ.ಯನ್ನು ಅವರ ಹೆಸರಿನಲ್ಲಿ ಸೃಷ್ಟಿಸಿ, ಈ-ಮೇಲ್ ಸಂದೇಶವನ್ನು ಮುಖ್ಯ ಮಂತ್ರಿಯವರೇ ಕಳುಹಿಸಿದ್ದಾರೆ ಎನ್ನುವ ರೀತಿಯಲ್ಲಿ ಸಂಸ್ಥೆಗೆ ತಪ್ಪು ಮಾಹಿತಿಯನ್ನು ನೀಡಿ, ನಂಬಿಸಿ, ವಂಚಿಸಿದ್ದು ಈ ಬಗ್ಗೆ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.

(ಸಾಂದರ್ಭಿಕ ಚಿತ್ರಗಳು)

Comments are closed.