ಕರಾವಳಿ

ಅರ್ನಬ್ ಗೋಸ್ವಾಮಿ ಬಂಧನ-ದೈಹಿಕ ಹಲ್ಲೆ : ಮಾಧ್ಯಮ ಕ್ಷೇತ್ರದಲ್ಲಿ ಭಯದ ವಾತಾವರಣ ಸೃಷ್ಠಿ – ಕೇಂದ್ರ ಸರ್ಕಾರ ಮಧ್ಯ ಪ್ರವೇಶಕ್ಕೆ ಆಗ್ರಹ

Pinterest LinkedIn Tumblr

ಮುಂಬೈ, ನವೆಂಬರ್ 4: ಮಹಾರಾಷ್ಟ್ರ ಸರ್ಕಾರ ಮತ್ತು ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ನಡುವಿನ ಸಮರ ತಾರಕಕ್ಕೇರಿದ್ದು, ವಾಣಿಜ್ಯ ನಗರಿ ಮುಂಬೈಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ನಡೆದ ಹಠಾತ್ ಬೆಳವಣಿಗೆಯಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಯವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಬುಧವಾರ ಬೆಳಿಗ್ಗೆ ಅರ್ನಬ್ ಗೋಸ್ವಾಮಿ ಅವರ ಮನೆಗೆ ನುಗ್ಗಿದ ಪೊಲೀಸರು ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ. ಬಂಧನದ ವೇಳೆ ಪೊಲೀಸರು ತಮ್ಮ ಮೇಲೆ ಹಾಗೂ ಮಗನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಈ ವೇಳೆ ಅರ್ನಬ್ ಆರೋಪಿಸಿದ್ದಾರೆ.

ಮುಂಬೈನಲ್ಲಿರುವ ಅರ್ನಬ್ ಮನೆಗೆ ತೆರಳಿದ್ದ ಪೊಲೀಸರು ಅವರನ್ನು ತಮ್ಮ ಜೊತೆ ಬರುವಂತೆ ಸೂಚಿಸಿದ್ದಾರೆ. ಅವರು ನಿರಾಕರಿಸಿದಾಗ ಅಕ್ಷರಶಃ ಎಳೆದೊಯ್ದಿದ್ದಾರೆ. ಅವರನ್ನು ಪೊಲೀಸ್ ವ್ಯಾನ್‌ಗೆ ಬಲವಂತವಾಗಿ ತಳ್ಳುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿದೆ.

ಸುಮಾರು ಎಂಟು ಪೊಲೀಸ್ ವಾಹನಗಳು, ಕನಿಷ್ಠ 40-50 ಪೊಲೀಸ್ ಸಿಬ್ಬಂದಿ ಅರ್ನಬ್ ಅವರ ಮನೆಯ ಸುತ್ತಲೂ ನೆರೆದಿದ್ದರು. ಅವರಲ್ಲಿ ಹೆಚ್ಚಿನವರು ಶಸ್ತ್ರಸಜ್ಜಿತರಾಗಿದ್ದರು. ಪತ್ರಕರ್ತನ ಬಂಧನಕ್ಕೆ ಇಷ್ಟೆಲ್ಲ ತಯಾರಿ ಮಾಡಿರುವುದು ಮತ್ತು ಅವರನ್ನು ಭಯೋತ್ಪಾದಕನಂತೆ ನಡೆಸಿಕೊಂಡಿರುವುದು ಮಹಾರಾಷ್ಟ್ರ ಸರ್ಕಾರ ಹಾಗೂ ಪೊಲೀಸರ ದೌರ್ಜನ್ಯದ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ವಾಹಿನಿ ಆರೋಪಿಸಿದೆ.

ತಮ್ಮ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲು ಪೊಲೀಸರು ಯತ್ನಿಸಿದರು. ಅಲ್ಲದೆ ತಮ್ಮ ಪತ್ನಿ, ಪುತ್ರ, ಅತ್ತೆ-ಮಾವಂದಿರ ಮೇಲೆ ಕೂಡ ಹಲ್ಲೆ ನಡೆಸಲು ಯತ್ನಿಸಿದರು ಎಂದು ಅರ್ನಬ್ ಗೋಸ್ವಾಮಿ ಆರೋಪಿಸಿದ್ದಾರೆ.

ರಿಪಬ್ಲಿಕ್ ಟಿವಿಯಲ್ಲಿ ಬರುತ್ತಿರುವ ವಿಡಿಯೊ ಪ್ರಸಾರದಲ್ಲಿ ಪೊಲೀಸರು ಅರ್ನಬ್ ಗೋಸ್ವಾಮಿ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ನಂತರ ಪೊಲೀಸ್ ವ್ಯಾನಿನಲ್ಲಿ ಅರ್ನಬ್ ಗೋಸ್ವಾಮಿಯವರನ್ನು ಬಂಧಿಸಿ ಕರೆದುಕೊಂಡು ಹೋಗಲಾಗುತ್ತಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆ. ಮಹಾರಾಷ್ಟ್ರ ಸರ್ಕಾರ ಉದ್ದೇಶಪೂರ್ವಕವಾಗಿ ಈ ದಾಳಿ ಮಾಡಿದೆ ಎಂದು ರಿಪಬ್ಲಿಕ್ ಟಿವಿ ಆರೋಪಿಸಿದೆ.

ಅರ್ನಬ್ ಮನೆಗೆ ನುಗ್ಗಿದ ಸುಮಾರು ಹತ್ತು ಪೊಲೀಸರು ಅವರನ್ನು ಬಲವಂತವಾಗಿ ಎಳೆದೊಯ್ದಿದ್ದಾರೆ. ಈ ವೇಳೆ ಅರ್ನಬ್ ಮನೆಗೆ ಪ್ರವೇಶಿಸಲು ಪ್ರಯತ್ನಿಸಿದ ರಿಪಬ್ಲಿಕ್ ಟಿವಿಯ ಕಾರ್ಯನಿರ್ವಾಹಕ ಸಂಪಾದಕ ನಿರಂಜನ್ ನಾರಾಯಣಸ್ವಾಮಿ ಮತ್ತು ಹಿರಿಯ ಸಹ ಸಂಪಾದಕ ಅಂಜಯ್ ಪಾಠಕ್ ಅವರಿಗೆ ಪೊಲೀಸರು ತಡೆಯೊಡ್ಡಿದ್ದಾರೆ.

ವರದಿಗಾರಿಕೆ ಮಾಡುವುದು ತಮ್ಮ ಹಕ್ಕು. ಆದರೆ ಅದಕ್ಕೆಂದು ತೆರಳಿದ್ದಾಗ ಅರ್ನಬ್ ನಿವಾಸದಿಂದ ತಮ್ಮನ್ನು ಹೊರಗೆ ದಬ್ಬಲಾಯಿತು ಎಂದು ನಿರಂಜನ್ ಆರೋಪಿಸಿದ್ದಾರೆ. ಜತೆಗೆ ತಮ್ಮ ಫೋನ್ ಕಿತ್ತುಕೊಳ್ಳಲು ಸಹ ಮುಂಬೈ ಪೊಲೀಸರು ಪ್ರಯತ್ನಿಸಿದರು ಎಂದು ದೂರಿದ್ದಾರೆ.

ಸುಳ್ಳು ಆರೋಪಗಳು ಸೃಷ್ಠಿ :

2018ರ ಆತ್ಮಹತ್ಯೆಗೆ ಕುಮ್ಮಕ್ಕು ಆರೋಪ ಪ್ರಕರಣವೊಂದನ್ನು ಪುನಃ ತೆರೆದಿರುವ ಪೊಲೀಸರು, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ನಬ್ ಅವರನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ. ಎರಡು ವರ್ಷಗಳ ಹಿಂದಿನ ಅರ್ನಬ್ ಗೋಸ್ವಾಮಿ ವಿರುದ್ಧದ ಪ್ರಕರಣವನ್ನು ಪೊಲೀಸರು ಸ್ಥಗಿತಗೊಳಿಸಿದ್ದರು. ಈಗ ಅದನ್ನು ಸುಳ್ಳು ದಾಖಲೆ ಸೃಷ್ಠಿಸಿ ಮತ್ತೆ ತೆರೆಯಲಾಗಿದೆ ಎನ್ನಲಾಗಿದೆ.

53 ವರ್ಷದ ಇಂಟೀರಿಯರ್ ಡಿಸೈನರ್ ಅವರ ಆತ್ಮಹತ್ಯೆಗೆ ಅರ್ನಬ್ ಗೋಸ್ವಾಮಿಯವರು ಪ್ರಚೋದನೆ ನಿಡಿರುವ ಆರೋಪದ ಸಂಬಂದ ಮುಂಬೈ ಪೊಲೀಸರು ಇಂದು ಬೆಳಗ್ಗೆ ಅವರ ನಿವಾಸದಲ್ಲಿ ಬಂಧಿಸಿದ್ದಾರೆ ಎನ್ನಲಾಗಿದೆ.

ಮುಂಬೈ ನಗರದಲ್ಲಿ ಅತ್ಯಂತ ದೊಡ್ಡ ಹವಾಲಾ ಆಪರೇಟರ್ ಎಂದು ಅರ್ನಬ್ ಗೋಸ್ವಾಮಿ ವಿರುದ್ಧ ಮುಂಬೈ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಆರೋಪ ಮಾಡಿದ್ದರು. ಸುಶಾಂತ್ ಸಿಂಗ್ ಪ್ರಕರಣದಲ್ಲಿ ಮುಂಬೈ ಪೊಲೀಸರ ವೈಫಲ್ಯದ ಕುರಿತಾಗಿ ಪರಮ್ ಬೀರ್ ಸಿಂಗ್ ರಾಜೀನಾಮೆಗೆ ಅರ್ನಬ್ ಆಗ್ರಹಿಸಿದ್ದರು. ಹೀಗಾಗಿ ಇದು ದ್ವೇಷದ ಕಾರಣದಿಂದ ಮಾಡಿರುವ ಬಂಧನ ಎಂದು ರಿಪಬ್ಲಿಕ್ ಟಿವಿ ಪರ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಮುಂಬೈ ಪೊಲೀಸ್, ಬಾಲಿವುಡ್ ಮತ್ತು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅರ್ನಬ್ ನಿರಂತರ ವರದಿಗಳನ್ನು ಬಿತ್ತರಿಸಿದ್ದರು. ಈ ಸಂಬಂಧ ಅರ್ನಬ್ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿದ್ದವು. ಜತೆಗೆ ನಕಲಿ ಟಿಆರ್‌ಪಿ ಹಗರಣದಲ್ಲಿಯೂ ಅವರ ಹೆಸರು ಕೇಳಿಬಂದಿತ್ತು.

ಮಾಧ್ಯಮ ಕ್ಷೇತ್ರದಲ್ಲಿ ಭಯದ ವಾತಾವರಣ ನಿರ್ಮಾಣ:

ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆ ಎಂದೇ ಹೇಳಲಾಗಿರುವ ಈ ಪ್ರಕರಣದಿಂದ ಮಾಧ್ಯಮ ಕ್ಷೇತ್ರದಲ್ಲಿ ಭಯದ ವಾತಾವರಣ ಸೃಷ್ಠಿಸಿದೆ. ಸತ್ಯ ಬಿಚ್ಚಿಡುವ ಮಾಧ್ಯಮಕ್ಕೆ ಈ ರೀತಿಯ ಘಟನೆಗಳು ವರದಿಗಾರಿಕೆ ಮಾಡುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ.

ಮುಂಬೈಯಲ್ಲಿ ಸರ್ಕಾರ ಹಾಗೂ ಪೊಲೀಸರ ಕಾರ್ಯವೈಕರಿಯು ಮಾಧ್ಯಮ ಕ್ಷೇತ್ರಕ್ಕೆ ಸವಾಲಾಗಿ ಪರಿಣಮಿಸಿದೆ. ಪ್ರಕರಣದ ಸತ್ಯಾಸತ್ಯತೆಯನ್ನು ಜನತೆಯ ಮುಂದೆ ಬಹಿರಂಗಪಡಿಸುವ ವಾಹಿಗಳ ಮೇಲೆ ದೌರ್ಜನ್ಯ ನಡೆಸುತ್ತಿರುವ ಮಹಾರಾಷ್ಟ್ರ ಸರ್ಕಾರ ಹಾಗೂ ಮುಂಬೈ ಪೊಲೀಸರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕೂಡಲೇ ಮಧ್ಯೆ ಪ್ರವೇಶಿಸ ಬೇಕು ಎಂಬ ಮಾತು ವ್ಯಕ್ತವಾಗುತ್ತಿದೆ.

ಬಾಲಿವುಡ್ ಡ್ರಗ್ಸ್ ಪ್ರಕರಣಗಳು, ಆತ್ಮಹತ್ಯೆ, ಮರ್ಡರ್ ಸೇರಿದಂತೆ ಇತ್ತೀಚಿನ ಕೆಲವು ದಿನಗಳಿಂದ ಮುಂಬೈಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಬಗ್ಗೆ ಹಾಗೂ ಅಲ್ಲಿನ ಸರ್ಕಾರ ಮತ್ತು ಪೊಲೀಸ್ ಇಲಾಖೆ ತಮ್ಮ ವಿರುದ್ಧ ನಿಂತವರ ವಿರುದ್ಧ ರಿವೆಂಜ್ ತೆಗೆದುಕೊಳ್ಳುವ ಕ್ರಮದ ಬಗ್ಗೆ ಕೇಂದ್ರ ಸರಕಾರ ಕೂಡಲೇ ಮಧ್ಯೆ ಪ್ರವೇಶಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ ಮುಂಬೈಯಲ್ಲಿ ಜನಸಾಮಾನ್ಯರ ಬದುಕು ದುಸ್ತರವಾಗುವುದು ಖಂಡಿತ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಇಲ್ಲಿ ಸತ್ಯ ಬಿಚ್ಚಿಡುವ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಾಹಿಸುತ್ತಿರುವವರಿಗೆ ಈ ರೀತಿಯ ಭಯದ ವಾತಾವರಣವಿದ್ದರೆ, ಇನ್ನು ಜನಸಾಮಾನ್ಯರ ಗತಿ ಏನು? ಒಂದು ರಾಜ್ಯದ ಜವಾಬ್ದಾರಿ ಹೊತ್ತಿರುವ ಸರ್ಕಾರ, ಜನರ ರಕ್ಷಣೆ ಮಾಡಬೇಕಾದ ಪೊಲೀಸ್ ಇಲಾಖೆಯೇ ಭಕ್ಷಣೆಯಲ್ಲಿ ತೊಡಗಿದರೆ, ನಾಗರೀಕರು ತಮ್ಮ ನೋವನ್ನು ಯಾರಲ್ಲಿ ಹೇಳಿಕೊಳ್ಳುವುದು? ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

ಇಂತಹ ಘಟನೆಗಳು ನಡೆದಾಗ ಎಲ್ಲಾ ಮಾಧ್ಯಮಗಳು ಒಟ್ಟು ಸೇರಿ ಈ ಪ್ರಕರಣವನ್ನು ಖಂಡಿಸಿ, ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲಾ ಮಾಧ್ಯಮಗಳು ಕೈಜೋಡಿಸಿಕೊಂಡು ಕಾನೂನು ರೀತಿಯಲ್ಲಿ ಉಗ್ರ ಪ್ರತಿಭಟನೆ ನಡೆಸುವ ಮೂಲಕ ಮಾಧ್ಯಮದ ಶಕ್ತಿ ಏನೆಂಬುವುದನ್ನು ಜಗತ್ತಿಗೆ ತೋರಿಸಬೇಕು ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.

Comments are closed.