ಮಂಗಳೂರು, ನವೆಂಬರ್.03: ಸುಮಾರು ಎರಡು ದಶಕಗಳ ಬಳಿಕ ಮಂಗಳೂರಿನಲ್ಲಿ ಕರ್ನಾಟಕ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆ ನಡೆಯಲಿದೆ. ನವೆಂಬರ್ 5ರಂದು ಮಂಗಳೂರಿನ ಟಿ. ವಿ. ರಮಣ್ ಪೈ ಸಭಾಂಗಣದಲ್ಲಿ ನಡೆಯಲಿರುವ ಬಿಜೆಪಿಯ ರಾಜ್ಯ ಕಾರ್ಯಕಾರಣಿ ಮತ್ತು ಕೋರ್ ಕಮಿಟಿ ಸಭೆಯನ್ನು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಬಿಜೆಪಿಯ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆಯವರು, ಎರಡು ದಶಕಗಳ ಬಳಿಕ ಮೊದಲ ಬಾರಿಗೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಕಡಲನಗರಿಯಲ್ಲಿ ನಡೆಯುತ್ತಿದೆ.
ನವೆಂಬರ್ 4ರಂದು ಮುಖ್ಯಮಂತ್ರಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ ರಾತ್ರಿ 7 ಗಂಟೆಗೆ ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಮುಖ್ಯಮಂತ್ರಿಯವರು ರಾತ್ರಿ ಮಂಗಳೂರಿನಲ್ಲೇ ತಂಗಲಿದ್ದಾರೆ ಎಂದರು.
ನ. 5ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರಿನ ಟಿ.ವಿ.ರಮಣ್ ಪೈ ಸಭಾಂಗಣದಲ್ಲಿ ನಡೆಯುವ ರಾಜ್ಯ ಬಿಜೆಪಿ ವಿಶೇಷ ಸಭೆಯನ್ನು ಸಿಎಂ ಬಿಎಸ್ ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ.
ಬೆಳಗ್ಗೆ 10ರಿಂದ ಸಂಜೆ 5 ಗಂಟೆಯ ತನಕ ರಾಜ್ಯ ಕಾರ್ಯಕಾರಣಿ ಸಭೆ ನಡೆಯಲಿದ್ದು, ಬೆಳಗ್ಗೆ 11.30ರಿಂದ ಮಧ್ಯಾಹ್ನ 1.30ರ ತನಕ ನಡೆಯುವ ಬಿಜೆಪಿ ಪ್ರಮುಖರ ಸಭೆಯಲ್ಲಿ ಸಿಎಂ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 2.30ರಿಂದ ಸಂಜೆ 5ರ ತನಕ ಟಿವಿ ರಮಣ್ ಪೈ ಹಾಲ್ ನಲ್ಲಿ ನಡೆಯುವ ಬಿಜೆಪಿ ವಿಶೇಷ ಸಭೆಯಲ್ಲಿ ಭಾಗವಹಿಸುವರು. ಪಕ್ಷದ 120 ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾರ್ಯಕಾರಣಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದವರು ವಿವರಿಸಿದರು.
ಪಕ್ಷದ 120 ಪ್ರಮುಖರ ಜೊತೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಡಿ. ವಿ. ಸದಾನಂದ ಗೌಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಅವರು ಸಹ ಕಾರ್ಯಕಾರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಪಾಲ್ಗೊಳ್ಳಲಿದ್ದಾರೆ ಎಂದು ಸುದರ್ಶನ್ ಅವರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತವರು ಜಿಲ್ಲೆಯಲ್ಲಿಯೇ ಕಾರ್ಯಕಾರಣಿ ನಡೆಯುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷರ ತವರು ಜಿಲ್ಲೆಯಲ್ಲಿ ಕಾರ್ಯಕಾರಣಿ ಯಶಸ್ವಿಗೊಳಿಸಲು ಬಿಜೆಪಿ ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಕಾರ್ಯಕಾರಣಿಗಾಗಿ 9 ಮಂಡಲಗಳನ್ನು ಒಳಗೊಂಡು 16 ವಿಭಾಗವನ್ನು ಮಾಡಲಾಗಿದೆ. ಪಕ್ಷದ 7 ಶಾಸಕರು, ಪಕ್ಷದ ಪ್ರಮುಖರು ಕಾರ್ಯಕಾರಣಿ ಯಶಸ್ಸಿಗಾಗಿ ಕೆಲಸ ಮಾಡುತ್ತಿದ್ದಾರೆ.