ಕರಾವಳಿ

ಮಂಗಳೂರಿನ ಪಚ್ಚನಾಡಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಕುಸಿತದಿಂದ ನಷ್ಟಗೊಂಡ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ : ಅರ್ಜಿ ಸಲ್ಲಿಸಲು ಸೂಚನೆ

Pinterest LinkedIn Tumblr

ಮಂಗಳೂರು ನವೆಂಬರ್ 03: ಪಚ್ಚನಾಡಿ ಗ್ರಾಮ ಸೇರಿದಂತೆ ಮತ್ತಿತ್ತರ ಗ್ರಾಮಗಳ ಘನತ್ಯಾಜ್ಯ ಭೂಭರ್ತಿಯಿಂದ ನಷ್ಟಗೊಂಡ ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರದ ಹಣವನ್ನು ಬಿಡುಗಡೆ ಮಾಡಿದ್ದು, ಸಂತ್ರಸ್ತರು ಅರ್ಜಿ ನೀಡಬಹುದಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಜಿ ಶಿಲ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ, ಕುಡುಪು ಹಾಗೂ ಮಂದಾರ ಪ್ರದೇಶದಲ್ಲಿ ಘನ ತ್ಯಾಜ್ಯ ಭೂಭರ್ತಿ ಘಟಕದಿಂದ ಉಂಟಾಗಿರುವ ಅನಾಹುತ ಕುರಿತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಯವರು ಹಾಗೂ ಹಿರಿಯ ಸಿವಿಲ್‍ ನ್ಯಾಯಾಧೀಶರು ಎ.ಜಿ. ಶಿಲ್ಪ, ಇವರು ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿನ ಪರಿಸಿತ್ಥಿಯನ್ನು ಅವಲೋಕಿಸಿದರು.

ಬಳಿಕ ಅಲ್ಲಿನ ನಿರಾಶ್ರಿತರ ಜೊತೆ ಚರ್ಚಿಸಿ ಸಂಬಂಧ ಪಟ್ಟ ಇಲಾಖೆ, ಸ್ಥಳೀಯ ಸಂಸ್ಥೆಗಳಲ್ಲಿ ಕಡತಗಳನ್ನು ಪರಿಶೀಲಿಸಿ, ಸೂಕ್ತ ದಾಖಲೆಗಳನ್ನು ಪಡೆದು ಪಚ್ಚನಾಡಿ, ಕುಡುಪು ಹಾಗೂ ಮಂದಾರ ಪ್ರದೇಶದಲ್ಲಿ ಘನತ್ಯಾಜ್ಯ ಭೂಭರ್ತಿ ಘಟಕದಿಂದ ಉಂಟಾಗಿರುವ ಅನಾಹುತ ಕುರಿತು ವರದಿಯನ್ನು ಮಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮುರಳೀಧರ ಪೈ ಬಿ ಅವರ ಅನುಮತಿಯೊಂದಿಗೆ ಬೆಂಗಳೂರು ಕರ್ನಾಟಕ ರಾಜ್ಯ ಸೇವಾ ಪ್ರಾಧಿಕಾರಕ್ಕೆ ಸಲ್ಲಿಸಿದ್ದು, ಪ್ರಾಧಿಕಾರವು ವರದಿಯ ಆಧಾರದ ಮೇರೆಗೆ ಸ್ವಇಚ್ಛೆಯಿಂದ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಿತ್ತು.

ಪರಿಹಾರ ರಕ್ಷಣೆ ಕಾಯ್ದೆ 1986, ಘನ ತ್ಯಾಜ್ಯ ನಿರ್ವಹಣಾ ಮಾದರಿಯ ಉಪನಿಯಮ-2019 ಪರಿಣಾಮಕಾರಿ ಅನುಷ್ಠಾನಗೊಳಿಸಬೇಕು. 2019ರಲ್ಲಿ ಸಂಭವಿಸಿದ ತ್ಯಾಜ್ಯ ಕುಸಿತ ಘಟನೆಯನ್ನು ಜಿಲ್ಲಾ ವಿಪತ್ತು ಎಂದು ಘೊಷಿಸಿ ತಪ್ಪಿತಸ್ಥರ ವಿರುದ್ಧ ವಿಪತ್ತು ನಿರ್ವಹಣಾ ಕಾಯಿದೆಯಡಿ ಕ್ರಮ ಜರುಗಿಸಬೇಕು. ಸಂತ್ರಸ್ಥ ಕುಟುಂಬಗಳಿಗೆ ತಕ್ಷಣ ಪರಿಹಾರ ನೀಡಬೇಕು ಜೊತೆಗೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಸಾರ್ವಜನಿಕರ ಹಿತಾಸಕ್ತಿಯಲ್ಲಿ ಅರ್ಜಿಯನ್ನು ಕೋರಿತ್ತು.

ಸಾರ್ವಜನಿಕ ಹಿತಶಕ್ತಿ ಅರ್ಜಿಸಂಖ್ಯೆ: ತಿ.ಠಿ.ಓo. 9367/2020) ರಲ್ಲಿ ಗೌರವಾನ್ವಿತ ಮುಖ್ಯ ನ್ಯಾಯಾಮೂರ್ತಿಗಳಾದ ಎ.ಎಸ್.ಓಕ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿ, ಪರಿಹಾರ ಮತ್ತು ಪುನರ್ವಸತಿಗೆ ಪಾಲಿಕೆ ಸಲ್ಲಿಸಿರುವ 22ಕೋಟಿ ರೂ. ಪ್ರಸ್ತಾವನೆ ಬದಲಿಗೆ ಕೇವಲ 8 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದ್ದು ಏಕೆ ಎಂಬ ವಿವರಣೆ ನೀಡುವಂತೆಯೂ ಸರಕಾರಕ್ಕೆ ಸೂಚಿಸಿತ್ತು.

ಸರ್ಕಾರ 2020 ಅಕ್ಟೋಬರ್ 23 ರಂದು ಪ್ರಮಾಣ ಪತ್ರ ಸಲ್ಲಿಸಿ, 14 ಕೋಟಿ ರೂ.ಗಳನ್ನು ಪಚ್ಚನಾಡಿ ಗ್ರಾಮದ ಘನತ್ಯಾಜ್ಯ ಭೂಭರ್ತಿಯಿಂದ ನಷ್ಟಗೊಂಡ ಸಂತ್ರಸ್ಥರಿಗೆ ಸರ್ಕಾರದ ವತಿಯಿಂದ ಹಣವು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ.

(ಅಂದು ಪಚ್ಚನಾಡಿ ಗ್ರಾಮ ಸೇರಿದಂತೆ ಮತ್ತಿತ್ತರ ಗ್ರಾಮಗಳ ವ್ಯಾಪ್ತಿಯಲ್ಲಿ ಘನತ್ಯಾಜ್ಯ (ಕುಸಿತ) ಭೂಭರ್ತಿಯಿಂದ ಹಾನಿಗೊಂಡಿರುವ ಸ್ಥಳಗಳ ಕಡತ ಚಿತ್ರ)

ಸಂತ್ರಸ್ತರು ಪರಿಹಾರ ಕೋರಿ ಅರ್ಜಿ ಸಲ್ಲಿಸಬಹುದಾಗಿದ್ದು, ಸಂಬಂಧ ಪಟ್ಟ ಅರ್ಜಿಗಳನ್ನು ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ದ.ಕ ಮಂಗಳೂರು ಇವರ ಸಹಯೋಗ ಪಡೆಯಬಹುದಾಗಿದೆ ಎಂದು ನ್ಯಾಯಾಲಯವು ಆದೇಶಿಸಿದೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯಾಧೀಶೇ ಎ. ಜಿ. ಶಿಲ್ಪ ಹಾಗೂ ಪ್ರಾಧಿಕಾರದ ಪ್ಯಾನೆಲ್ ವಕೀಲರು ಪಚ್ಚನಾಡಿಗೆ ಭೇಟಿ ನೀಡಿ ಸಂತ್ರಸ್ತರಿಂದ ಈಗಾಗಲೇ 25 ಅರ್ಜಿಗಳನ್ನು ಸ್ವೀಕರಿಸಿದ್ದಾರೆ.

ಈ ಸಂಬಂಧಿತ ಹಿತಾಸಕ್ತಿಯುಳ್ಳ ಸಾರ್ವಜನಿಕರು ದೂರು ಅರ್ಜಿಗಳನ್ನು ದ.ಕ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮಂಗಳೂರು ಇಲ್ಲಿಗೆ 2020, ನವೆಂಬರ್ 3ರ ಒಳಗೆ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮೊ.ನಂ: 9480024188 ಅಥವಾ dlsamangalore@gmail.com ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.