ಕರಾವಳಿ

ಕುಂದಾಪುರದಲ್ಲಿ ಸರಳ, ಸಂಭ್ರಮದ ಕನ್ನಡ ರಾಜ್ಯೋತ್ಸವ: ಸಾಧಕ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ

Pinterest LinkedIn Tumblr

ಕುಂದಾಪುರ: ಪ್ರಾದೇಶಿಕ ವೈವಿಧ್ಯತೆ, ಭಾಷಾ ಸೊಗಡು, ಸಂಸ್ಕೃತಿ, ಪರಂಪರೆ, ಆಹಾರ, ಆಚರಣೆಗಳಲ್ಲಿ ವಿವಿಧತೆಯಿದ್ದರೂ ನಮ್ಮೆಲ್ಲರ ಹೃದಯ ಭಾಷೆ ಒಂದೇ ಅದು ಕನ್ನಡ. ಎಲ್ಲ ಕ್ಷೇತ್ರಗಳಲ್ಲಿಯೂ ಕರುನಾಡಿನ ಸಾಧನೆ ವಿಶಿಷ್ಟವಾಗಿದೆ. ನಡೆ,ನುಡಿ, ಆಚರಣೆ ಹಾಗೂ ಆಡಳಿತದಲ್ಲಿ ಕನ್ನಡತನವನ್ನು ಬಳಸುವುದು ತಾಯಿ ನುಡಿಯ ಮಹತ್ತರ ಸೇವೆಯಾಗಿದೆ ಎಂದು ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಕೆ. ರಾಜು ಹೇಳಿದರು.

ಅವರು ಭಾನುವಾರ ಕುಂದಾಪುರ ತಾಲೂಕು ಆಡಳಿತದ ವತಿಯಿಂದ ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಜಾತಿ,ಮತ, ಪಂಥ ಪ್ರದೇಶಗಳ ಎಲ್ಲೆ ಮೀರಿ ಎಲ್ಲ ಭಾಷೆಗಳನ್ನು ಪ್ರೀತಿಸುವ, ಹಾಗೂ ಕನ್ನಡ ಭಾಷೆಯನ್ನು ರಕ್ಷಿಸುವ, ಜಾಗತೀಕರಣದ ಅನಿವಾರ್ಯತೆಯ ನಡುವೆ ‘ನಮ್ಮತನ’ವನ್ನು ಉಳಿಸಿಕೊಳ್ಳುವ ಅಗತ್ಯತೆ ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ. ಜಗತ್ತನ್ನು ಅರಿಯುವ ಜತೆಗೆ ಜನಪದ, ಜಾನಪದವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಕರೆಕೊಟ್ಟರು.

ಕುಂದಾಪುರ ತಾ.ಪಂ. ಅಧ್ಯಕ್ಷೆ ಇಂದಿರಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಸದಸ್ಯರಾದ ದೇವಕಿ ಸಣ್ಣಯ್ಯ, ಪ್ರಭಾಕರ್ ವಿ., ಶ್ರೀಧರ ಶೇರೆಗಾರ್, ಯುವಜನ ಸೇವಾ ಮತ್ತು ಕ್ರೀಡಾಽಕಾರಿ ಕುಸುಮಾಕರ್ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೆಕರ್, ಮತ್ತಿತರ ತಾಲೂಕು ಮಟ್ಟದ ಅಧಿಕಾರಿಗಳು, ಇಲಾಖಾ ಸಿಬಂದಿ, ಜನಪ್ರತಿನಿಧಿಗಳು, ಶಿಕ್ಷಕರು ಉಪಸ್ಥಿತರಿದ್ದರು.

ಸರಳ ಆಚರಣೆ….
ಕೊರೊನಾ ಹಿನ್ನೆಲೆಯಲ್ಲಿ ಫಥಸಂಚಲನವಿರಲಿಲ್ಲ. ಕುಂದಾಪುರ ನಗರ ಠಾಣಾಧಿಕಾರಿ ಸದಾಶಿವ ಗವರೋಜಿ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಹಾಗೂ ಗೃಹರಕ್ಷಕ ಪಡೆಯಿಂದ ಧ್ವಜವಂದನೆ ಮಾತ್ರ ನಡೆಸಲಾಯಿತು.

ಸಾಧಕ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್..
ಕನ್ನಡ ಮಾಧ್ಯಮದಲ್ಲಿ ಉತ್ತಮ ಸಾಧನೆಗೈದ ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಧನ್ಯಶ್ರೀ ಶೆಟ್ಟಿ, ಪ್ರಶಾಂತ್ ಹಾಗೂ ಕುಂದಾಪುರ ಬೋರ್ಡ್ ಹೈಸ್ಕೂಲಿನ ಪನ್ನಗ ಮಯ್ಯ ಅವರಿಗೆ ಲ್ಯಾಪ್‌ಟಾಪ್ ನೀಡಿ ಗೌರವಿಸಲಾಯಿತು.

ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅರುಣ್ ಕುಮಾರ್ ಶೆಟ್ಟಿ ಸ್ವಾಗತಿಸಿ, ತಾ.ಪಂ. ಕಾರ್‍ಯನಿರ್ವಹಣಾಧಿಕಾರಿ ಕೇಶವ್ ಶೆಟ್ಟಿಗಾರ್ ವಂದಿಸಿದರು. ಶಿಕ್ಷಕ ಚಂದ್ರಶೇಖರ್ ಬೀಜಾಡಿ ಕಾರ್‍ಯಕ್ರಮ ನಿರ್ವಹಿಸಿದರು.

(ವರದಿ, ಚಿತ್ರ- ಯೋಗೀಶ್ ಕುಂಭಾಸಿ)

Comments are closed.