ಕರಾವಳಿ

ಜಯ ಸಿ. ಸುವರ್ಣರು ಮತ್ತು ಜನಾರ್ದನ ಪೂಜಾರಿಯವರು ಅಕ್ಕ-ಬುಕ್ಕ, ರಾಮ-ಲಕ್ಷ್ಮಣ, ಕೋಟಿ-ಚೆನ್ನಯರಂತೆ ಬೆಳೆದವರು : ಸಚಿವ ಕೋಟ

Pinterest LinkedIn Tumblr

ಮಂಗಳೂರು : ಜಯ ಸಿ. ಸುವರ್ಣರು ಸಮಾಜದಲ್ಲಿ ತುತ್ತು ಅನ್ನ ಊಟ ಮಾಡಲು ತತ್ವಾರ ಇರುವ ಕಾಲದಲ್ಲಿ ಸಂಘಟನೆ ಕಟ್ಟಿದವರು. ಜಯ ಸಿ. ಸುವರ್ಣರು ಮತ್ತು ಜನಾರ್ದನ ಪೂಜಾರಿ ಯವರು ಅಕ್ಕ-ಬುಕ್ಕ, ರಾಮ-ಲಕ್ಷ್ಮಣ, ಕೋಟಿ-ಚೆನ್ನಯರಂತೆ ಸೋದರತೆಯ ಸಂಕೇತವಾಗಿ ಬೆಳೆದವರು. ಜಯ ಸಿ. ಸುವರ್ಣ ಬಡವರಿಗೆ ಆಸರೆಯಾಗಿ ಬದುಕುಬೇಕು ಎಂದು ಹೇಳಿದ್ದಲ್ಲದೆ, ತನ್ನ ಜೀವನದಲ್ಲಿ ಕಾರ್ಯರೂಪಕ್ಕೆ ತಂದ ಹೆಗ್ಗಳಿಕೆ ಅವರದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕೇಂದ್ರದ ಮಾಜಿ ಸಚಿವ ಜನಾರ್ಧನ ಪೂಜಾರಿಯವರ ಉಪಸ್ಥಿತಿಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಮತ್ತು ಅಭಿವೃದ್ಧಿ ಸಮಿತಿಯ ವತಿಯಿಂದ ಇತ್ತೀಚೆಗೆ ಅಗಲಿದ ಶ್ರೀ ಗೋಕರ್ಣನಾಥ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ, ಬಿಲ್ಲವರ ಮಹಾಮಂಡಲ ಸ್ಥಾಪಕ ಅಧ್ಯಕ್ಷ, ಕರ್ಮಯೋಗಿ ಜಯ ಸಿ ಸುವರ್ಣರವರಿಗೆ ಕುದ್ರೋಳಿ ಶ್ರೀ. ಗೋಕರ್ಣನಾಥ ದೇವಸ್ಥಾನದ ಜಯ.ಸಿ.ಸುವರ್ಣ ಸಭಾಂಗಣದಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಯ ಸಿ. ಸುವರ್ಣರ ಯೋಚನೆ, ಚಿಂತನೆ, ಆದರ್ಶಗಳು, ವಿಚಾರಧಾರೆ, ಗುರಿಯನ್ನು ನೆನಪಿಸಲೇಬೇಕು. ಕರಾವಳಿ ಜಿಲ್ಲೆಯ ಸಾಮಾನ್ಯ ಬಡಕುಟುಂಬದಲ್ಲಿ ಹುಟ್ಟಿದ ಹುಡುಗ ಮುಂಬೈಯಂತಹ ಮಹಾನಗರಕ್ಕೆ ತೆರಳಿ ಉದ್ಯಮ ಸ್ಥಾಪಿಸಿ ಅದನ್ನು ಬೃಹದಾಕಾರಕ್ಕೆ ಬೆಳೆಸಿ ಎಲ್ಲ ಸಮಾಜಕ್ಕೂ ದಾರಿದೀಪವಾಗಿ ಬೆಳಗಿದವರು. ಬಿಲ್ಲವ ಸಮಾಜಕ್ಕೆ ಶಕ್ತಿ, ಕಣ್ಮಣಿಯಾಗಿದ್ದರು ಎಂದು ಅವರು ಹೇಳಿದರು.

ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಗೆ ಜಯ ಸಿ. ಸುವರ್ಣರ ಕೊಡುಗೆ ಮಹತ್ತರ ವಾದುದುರು. ಬಿಲ್ಲವ ಸಮಾಜವನ್ನು ಕೈಹಿಡಿದು ಮುನ್ನಡೆಸಿದ ಹಿರಿಮೆ ಸುವರ್ಣರದ್ದು. ಅವರು ಖಂಡಿತವಾಗಿ ನಮ್ಮ ಬಿಟ್ಟು ಹೋಗಿಲ್ಲ, ಅವರ ಜೀವನ, ವಿಚಾರಧಾರೆ, ಚಿಂತನೆ ನಮ್ಮ ಮುಂದಿನ ಸಮಾಜಕ್ಕೆ ಮಾದರಿ. ಸಚಿವ ಕೋಟ ಅವರ ಮೇಲೆ ದೊಡ್ಡ ಜವಾಬ್ದಾರಿ ಇದ್ದು, ಮುಂದೆ ಬಿಲ್ಲವ ಸಮಾಜವನ್ನು ಮುನ್ನಡೆಸಿಕೊಂಡು ನೀವು ಹೋಗಬೆಕಾಗಿದೆ. ಈ ಮೂಲಕ ಜಯ ಸಿ. ಸುವರ್ಣ ಅವರ ಸಂಘಟನಾ ಶಕ್ತಿಯನ್ನು ನಾವು ಮತ್ತಷ್ಟು ಬಲಪಡಿಸಿ ಮಾದರಿಯಾಗೋಣ ಎಂದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಸಚಿವ ಕೋಟ ಅವರಿಗೆ ಕಿವಿಮಾತು ಹೇಳಿದರು.

ಸಭೆಯಲ್ಲಿ ಕುದ್ರೋಳಿ ದೇವಸ್ಥಾನದ ಅಧ್ಯಕ್ಷ ಹೆಚ್.ಎಸ್. ಸಾಯಿರಾಂ, ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಆರ್. ಪದ್ಮರಾಜ್, ಟ್ರಸ್ಟಿಗಳಾದ ರವಿಶಂಕರ್ ಮಿಜಾರು, ಶೇಖರ್ ಪೂಜಾರಿ, ಕೆ. ಮಹೇಶ್ಚಂದ್ರ, ದೇವಳ ಅಭಿವೃದ್ಧಿ ಸಮಿತಿಯ ರಾಧಾಕೃಷ್ಣ, ದೇವೇಂದ್ರ ಪೂಜಾರಿ, ಮಾಜಿ ಶಾಸಕ ಜೆ.ಆರ್. ಲೊಬೋ ಉಪಸ್ಥಿತರಿದ್ದರು.

ಜಯ ಸಿ. ಸುವರ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು. ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು.

Comments are closed.