ಕರ್ನಾಟಕ

ಬೆಂಗಳೂರು ಡಿಜೆ ಹಳ್ಳಿ ಗಲಭೆಯ ಪ್ರಮುಖ ಆರೋಪಿ ಸಂಪತ್‌ರಾಜ್ ಪರಾರಿ!?

Pinterest LinkedIn Tumblr

ಬೆಂಗಳೂರು: ಮಾಜಿ ಮೇಯರ್‌ ಹಾಗೂ ಬೆಂಗಳೂರು ಡಿಜೆ ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಆರ್. ಸಂಪತ್ ರಾಜ್ ಅಕ್ಟೋಬರ್ 7 ರಂದು ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಅಕ್ಟೋಬರ್ 7 ರಂದು ಆಸ್ಪತ್ರೆಯಿಂದ ತಪ್ಪಿಸಿಕೊಂಡ ಸಂಪತ್‌ ರಾಜ್‌ನ ಪತ್ತೆ ಕಾರ್ಯಚರಣೆಯನ್ನು ಸಿಸಿಬಿ ಪೊಲೀಸರು 23 ದಿನಗಳ ಬಳಿಕ ಆರಂಭಿಸಿದ್ದಾರೆ.

ಪೊಲೀಸರ ನಿರ್ಲಕ್ಷ್ಯದಿಂದಾಗಿ ಬೆಂಗಳೂರು ಗಲಭೆ ಪ್ರಕರಣದ ಪ್ರಮುಖ ಆರೋಪಿ ಸಂಪತ್ ರಾಜ್‌ ಅವರನ್ನು ಬಿಡುಗಡೆ ಮಾಡಲಾಗಿದ್ದು, ಆ ಬಳಿಕ ಅವರು ಪರಾರಿಯಾಗಿದ್ದಾರೆ. ಸಂಪತ್‌ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ ನಂತರವೂ ಯಾವುದೇ ಪೊಲೀಸರನ್ನು ಆಸ್ಪತ್ರೆಯ ಹೊರಗೆ ಇರಿಸಿಲ್ಲ. ಸಿಸಿಬಿ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದೆ ಎಂದು ಆಸ್ಪತ್ರೆ ಆರೋಪಿಸುತ್ತಿದೆ.

ಆಸ್ಪತ್ರೆಯ ಅಧಿಕಾರಿಗಳು ತಡರಾತ್ರಿ ಸಂಪತ್‌ಗೆ ಬಿಡುಗಡೆ ಪತ್ರ ನೀಡಿದ್ದಾರೆ. ಆದರೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಿಲ್ಲ. ಈ ಕಾರಣದಿಂದಾಗಿ ಆರೋಪಿ ತಪ್ಪಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಪೊಲೀಸರು ಆಸ್ಪತ್ರೆಯ ವಿರುದ್ದ ಆರೋಪ ಮಾಡಿದ್ದಾರೆ.

ಆಗಸ್ಟ್ 11 ರಂದು ನಗರದಲ್ಲಿ ಸಂಭವಿಸಿದ ಗಲಭೆಗಳ ಕುರಿತು ಬೆಂಗಳೂರು ಸಿಸಿಬಿ ತನ್ನ ಪ್ರಾಥಮಿಕ ಚಾರ್ಜ್‌ಶೀಟ್‌ನಲ್ಲಿ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಮಾಜಿ ಕಾರ್ಪೋರೇಟರ್ ಝಾಕೀರ್‌ ಹುಸೇನ್ ಹೆಸರನ್ನು ಉಲ್ಲೇಖಿಸಿದೆ. ಸೆಪ್ಟೆಂಬರ್ 14 ರಂದು ಸಂಪತ್‌ ಅವರಿಗೆ ಕೊರೊನಾ ಪಾಸಿಟಿವ್‌ ಆದ ಹಿನ್ನೆಲೆ ಹೆಬ್ಬಾಳಿನ ಆಸ್ಪತ್ರೆಗೆ ದಾಖಲಾಗಿದ್ದರು. ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸಂಪತ್‌ನ ಬಿಡುಗಡೆಗಾಗಿ ಪೊಲೀಸರು ಕಾಯುತ್ತಿದ್ದರು.

ಸಂಪತ್ ಬಿಡುಗಡೆಯ ಸಮಯದ ಬಗ್ಗೆ ತಿಳಿಸುವಂತೆ ಎಸಿಪಿ ವೇಣುಗೋಪಾಲ್ ಅವರು ಅಕ್ಟೋಬರ್ 7 ರಂದು ಆಸ್ಪತ್ರೆಗೆ ಲಿಖಿತ ನೋಟೀಸ್ ನೀಡಿದ್ದರು. ಆದರೆ ಯಾವುದೇ ಮಾಹಿತಿ ನೀಡದೆ ಆಸ್ಪತ್ರೆ ಸಿಬ್ಬಂದಿಗಳು ಸಂಪತ್‌ರನ್ನು ಬಿಡುಗಡೆ ಮಾಡಿದೆ ಎಂದು ಅಪರಾಧ ವಿಭಾಗದ ಬೆಂಗಳೂರು ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

 

Comments are closed.