ಬೆಂಗಳೂರು: ಇತ್ತೀಚೆಗೆ ನಡೆದ ಡಿ.ಜೆ.ಹಳ್ಳಿ-ಕೆ.ಜಿ. ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಸ್‌ಬುಕ್ ಪೋಸ್ಟ್ ಮಾಡಿದ್ದ ಆರೋಪಿ ನವೀನ್‌ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.
ನವೀನ್ ಪರ ವಕೀಲರು ಸಲ್ಲಿಕೆ ಮಾಡಿದ್ದ ಜಾಮೀನು ಅರ್ಜಿಯನ್ನು 60ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು. ಆದ್ದರಿಂದ, ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಕೆಯಾಗಿತ್ತು. ನವೀನ್ ಯಾವುದೇ ಕೆಟ್ಟ ಉದ್ದೇಶದಿಂದ ತನ್ನ ಫೇಸ್‌ಬುಕ್‌ನಲ್ಲಿ ಗಲಭೆಗೆ ಕಾರಣವಾದ ಪೋಸ್ಟ್ ಹಾಕಿರಲಿಲ್ಲ, ತನಗೆ ಆನ್‌ಲೈನ್‌ನಲ್ಲಿ ಬಂದ ಪೋಸ್ಟ್ ಫಾರ್ವರ್ಡ್ ಮಾಡಿದ್ದ. ವಿಷಯದ ಗಂಭೀರತೆ ಅರ್ಥವಾದ ಕೂಡಲೇ ಅದೇ ದಿನ ಸಂಜೆ ಅದನ್ನು ತನ್ನ ಖಾತೆಯಿಂದ ತೆಗೆದಿದ್ದಾನೆ ಎಂಬುದಾಗಿ ನವೀನ್ ಪರ ವಕೀಲರು ತಿಳಿಸಿದ್ದಾರೆ.
ವ್ಯಕ್ತಿಯೊಬ್ಬ ನವೀನ್ ತಲೆಗೆ ಬಹುಮಾನ ಘೋಷಣೆ ಮಾಡಿರುವ ಕಾರಣ ಜಾಮೀನು ನೀಡಿದರೆ ಆತನ ಜೀವಕ್ಕೆ ಅಪಾಯ ಇದೆ ಎಂಬುದಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪಿ. ಪ್ರಸನ್ನಕುಮಾರ್ ಅವರು ವಾದಿಸಿದ್ದಾರೆ.
ಆದರೆ ಈ ಕಾರಣಕ್ಕೆ ಜಾಮೀನು ನಿರಾಕರಿಸಲು ಸಾಧ್ಯವಿಲ್ಲ. ಆರೋಪಿ ಫೇಸ್‌ಬುಕ್ ಪೋಸ್ಟ್ ಡಿಲೀಟ್ ಮಾಡಿದ್ದಾನೆ. ಕಠಿಣ ಷರತ್ತು ವಿಧಿಸಿ ಜಾಮೀನು ನೀಡಲಾಗುವುದು. ಮುಂದೆ ಇಂತಹ ಕೃತ್ಯದಲ್ಲಿ ತೊಡಗಿದರೆ ಜಾಮೀನು ರದ್ದುಪಡಿಸಬಹುದು ಎಂದು ನ್ಯಾ. ಬಿ.ಎ. ಪಾಟೀಲ್ ಅವರ ಏಕ ಸದಸ್ಯ ಪೀಠ ಆದೇಶ ನೀಡಿದೆ.
ನವೀನ್ ಪ್ರತಿ ತಿಂಗಳ 1 ರಂದು ಠಾಣೆಗೆ ಹಾಜರಾಗಬೇಕು ಮತ್ತು ಪೂರ್ವಾನುಮತಿ ಇಲ್ಲದೆ ವಿಚಾರಣಾ ನ್ಯಾಯಾಲಯದ ವ್ಯಾಪ್ತಿಯಿಂದ ಹೊರ ಹೋಗಬಾರದು ಎಂದು ತಿಳಿಸಿದ್ದಾರೆ.