ಮಂಗಳೂರು, ಆಕ್ಟೋಬರ್.15: ಕೊರೊನಾ ಲಾಕ್‌ಡೌನ್ ನಿಂದ ಮುಚ್ಚಲ್ಪಟ್ಟಿದ್ದ ಥಿಯೇಟರ್ ಇಂದಿನಿಂದ ಮತ್ತೆ ರೀ ಓಪನ್ ಆಗ್ತಿವೆ. ಚಿತ್ರಪ್ರದರ್ಶನಕ್ಕೆ ಅನುಮತಿ ನೀಡಿರುವ ಸರ್ಕಾರ ಕೆಲವೊಂದು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಕೊರೊನಾ ಕಟ್ಟುನಿಟ್ಟಿನ ನಿಯಮಗಳ ಜೊತೆಗೆ ಸಿನಿ ರಸಿಕರನ್ನ ರಂಜಿಸಲು ಮತ್ತೆ ಬಾಗಿಲು ತೆರೆಯಲು ನಿರ್ಧರಿಸಿವೆ. ಮಾರ್ಚ್‌ನಲ್ಲಿ ಕೊರೊನಾ ಕಾರಣದಿಂದಾಗಿ ಇದ್ದಕ್ಕಿದ್ದಂತೆ ಸ್ಥಗಿತಗೊಳಿಸಲಾಗಿದ್ದ ಸಿನೆಮಾ ಪ್ರದರ್ಶನ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಇಂದಿನಿಂದ ಮತ್ತೆ ಆರಂಭವಾಗಲಿದೆ.
ಪ್ರೇಕ್ಷಕರನ್ನು ಮತ್ತೆ ಮನರಂಜಿಸಲು ಸಿದ್ದವಾಗಿರುವ ಮಲ್ಟಿಪ್ಲೆಕ್ಸ್‌ಗಳು ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದು ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವತ್ತ ಗಮನ ಹರಿಸಿ ಆಸನಗಳನ್ನು ಮರುಜೋಡನೆ ಮಾಡಲಾಗಿದೆ. ಆನ್‌ಲೈನ್ ಬುಕ್ಕಿಂಗ್ ಆರಂಭವಾಗಿದೆ.
ಮಂಗಳೂರಿನ ಭಾರತ್ ಮಾಲ್‌ನ ಬಿಗ್ ಸಿನೆಮಾಸ್ ಹಾಗೂ ನಗರದ ಸಿಟಿ ಸೆಂಟರ್ ಮಾಲ್‌ನ ಸಿನಿಪಾಲಿಸಿ ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳು ಇಂದಿನಿಂದ ಮತ್ತೆ ತೆರೆಯಲಿದ್ದು, ಹೊಸ ಚಿತ್ರಗಳು ಇನ್ನು ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಲಾಕ್ ಡೌನ್ ಸಂದರ್ಭ ಪ್ರದರ್ಶನ ಕಾಣುತ್ತಿದ್ದ ಅದೇ ಹಳೆಯ ಚಿತ್ರಗಳ ಪ್ರದರ್ಶನವನ್ನು ಮುಂದುವರಿಸಲಿದೆ. ಆದರೆ ಯಾವೂದೇ ಹೊಸ ಚಿತ್ರಗಳು ಬಿಡುಗಡೆ ಭಾಗ್ಯ ಕಾಣದ ಹಿನ್ನೆಲೆಯಲ್ಲಿ ಫಾರಂ ಫಿಝಾ ಮಾಲ್‌ನಲ್ಲಿರುವ ಪಿವಿಆರ್ ಚಿತ್ರ ಮಂದಿರ ಕೆಲವು ದಿನಗಳ ಬಳಿಕ ತೆರೆಯಲಿದೆ.
ಇದೇ ವೇಳೆ ನಗರದ ಹಲವಾರು ಸಿಂಗಲ್ ಸ್ಕ್ರೀನ್ ಥಿಯೇಟರ್ ಮಾಲೀಕರು ಸಿನಮಾ ಮಂದಿರವನ್ನು ಮತ್ತೆ ತೆರೆಯುವ ಬಗ್ಗೆ ಇನ್ನೂ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ. ಕೊರೊನಾ ಕಾರಣದಿಂದಾಗಿ ಮುಚ್ಚಲ್ಪಟ್ಟಿದ್ದ ಸಿನಿಮಾ ಮಂದಿರವನ್ನು ಈಗ ಮತ್ತೆ ಆರಂಭ ಮಾಡಲು ನಿರ್ವಹಣೆ ಮತ್ತು ನವೀಕರಣಕ್ಕಾಗಿ ಹಾಗೂ ಸಿಬ್ಬಂದಿಗಳ ವೇತನಕ್ಕಾಗಿ ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ. ಜೊತೆಗೆ ಮತ್ತೆ ಲಾಕ್‌ಡೌನ್ ಆದರೆ ಏನು ಮಾಡುವುದು ಎಂಬ ಭಯ ಕೂಡ ಕಾಡುತ್ತಿದೆ ಎನ್ನುತ್ತಾರೆ ಸಿಂಗಲ್ ಸ್ಕ್ರೀನ್ ಥಿಯೇಟರ್ ಮಾಲೀಕರು.
ಹಾಗಾಗಿ ನಗರದ ಚಿತ್ರಮಂದಿರಗಳಾದ ಜ್ಯೋತಿ, ರಾಮಕಾಂತಿ, ರೂಪಾವಾಣಿ, ಸುಚಿತ್ರಾ, ಪ್ರಭಾತ್, ಸುರತ್ಕಲ್‌ನ ನಟರಾಜ್ ಥಿಯೇಟರ್, ಮೂಡಬಿದಿರೆಯ ಅಮರಶ್ರೀ, ಪುತ್ತೂರಿನ ಅರುಣಾ, ಸುಳ್ಯದ ಸಂತೋಷ್, ಬೆಳ್ತಂಗಡಿಯ ಭಾರತ್ ಸಿನಿಮಾ ಮಂದಿರದಲ್ಲಿ ಸದ್ಯಕ್ಕೆ ಸಿನಿಮಾಗಳ ಪ್ರದರ್ಶನ ನಡೆಯುವುದಿಲ್ಲ. ಈ ಬಗ್ಗೆ ಅಧಿಕೃತ ದಿನಾಂಕ ಕೂಡ ಪ್ರಕಟಿಸಿಲ್ಲ.
ಸೇವಾ ಶುಲ್ಕ ಕಡಿತ: ನಿರ್ಮಾಪಕರ ಸಂಘ ಆಕ್ರೋಶ
ಇದೇ ವೇಳೆ್ ಯುಎಫ್‌ಓ ಮತ್ತು ಕ್ಯೂಬ್ ಡಿಜಿಟಲ್ ಸಿನಿಮಾ ಡಿಸ್ಟ್ರಿಬ್ಯೂಷನ್ ಸಂಸ್ಥೆಗಳು ಸದ್ಯ ನಿರ್ಮಾಪಕರಿಗೆ ಕೊಂಚ ಸಮಾಧಾನಕಾರ ಸುದ್ದಿ ನೀಡಿದ್ದು, ಸಧ್ಯ ಪಡೆಯುತ್ತಿರುವ ಸೇವಾ ಶುಲ್ಕದಲ್ಲಿ 7 ತಿಂಗಳ ಕಾಲ ಶೇ.50ರಷ್ಟು ಶುಲ್ಕ ಕಡಿತ ಮಾಡಲು ನಿರ್ಧರಿಸಿವೆ.
ಆದರೆ ಯುಎಫ್‌ಓ ಈ ನಿರ್ಧಾರಕ್ಕೆ ನಿರ್ಮಾಪಕರ ಸಂಘ ಆಕ್ರೋಶ ವ್ಯಕ್ತ ಪಡಿಸಿದೆ. 50ರಷ್ಟು ಆದ್ರೂ ಕಷ್ಟ ಆಗುತ್ತೆ ಶೇ.25 ಸೇವಾ ಶುಲ್ಕ ವಿಧಿಸಲು ಆಗ್ರಹಿಸಿದೆ.
ಯುಎಫ್‌ಓ ಮತ್ತು ಕ್ಯೂಬ್ ಸಂಸ್ಥೆಗಳು ಪ್ರತಿ ಶೋಗೆ ನಿರ್ಮಾಪಕನಿಂದ 300 ರೂ. ಪಡೆಯುತ್ತಿವೆ. ಅಂದ್ರೆ, ವಾರಕ್ಕೆ ಒಂದು ಚಿತ್ರಮಂದಿರದಿಂದ 40ರಿಂದ 50 ಸಾವಿರ ರೂ.ಗಳನ್ನ ಪಾವತಿ ಮಾಡಬೇಕಾಗುತ್ತೆ. ಹಾಗಾಗಿ ಶೇ. 25 ಸೇವಾ ಶುಲ್ಕದಲ್ಲಿ ಎರಡು ವರ್ಷಗಳ ಕಾಲ ವಿನಾಯಿತಿ ನೀಡಬೇಕು ಎಂದಿದ್ದಾರೆ. ಅದ್ರಂತೆ, ಈ ಕುರಿತು ಯುಎಫ್‌ಓ ಮತ್ತು ಕ್ಯೂಬ್ ಸಂಸ್ಥೆಗೆ ಪತ್ರ ಬರೆಯಲು ನಿರ್ಮಾಪಕರು ನಿರ್ಧರಿಸಿದ್ದಾರೆ.