ಕರಾವಳಿ

ಆಡು,ಕುರಿ ಮಾಂಸದೊಂದಿಗೆ ದನಕರುಗಳ ಮಾಂಸ ಬೆರಕೆ ಆರೋಪ: ಮಟನ್‌‌ಸ್ಟಾಲ್‌‌ಗಳಿಗೆ ದಾಳಿ 

Pinterest LinkedIn Tumblr

ಮಂಗಳೂರು, ಆಕ್ಟೋಬರ್.14: ಮಂಗಳೂರಿನ ಕೆಲವು ಮಟನ್‌ ಸ್ಟಾಲ್‌ಗಳಲ್ಲಿ ಆಡು, ಕುರಿ ಮಾಂಸದೊಂದಿಗೆ ದನದ ಮಾಂಸ ಬೆರಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಸಾರ್ವಜನಿಕರ ದೂರಿನ ಹಿನ್ನೆಲೆ ಮಂಗಳೂರು ಮೇಯರ್ ಅವರ ನೇತ್ರತ್ವದಲ್ಲಿ ಮನಪಾ ಅಧಿಕಾರಿಗಳು ಬುಧವಾರ ಬೆಳಗ್ಗೆ ಕಸಾಯಿಖಾನೆ ಹಾಗೂ ವಿವಿಧ ಮಾಂಸ ಮಾರಾಟ ಮಳಿಗೆಗಳಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಮಂಗಳೂರು ಮಹಾನಗರ ಪಾಲಿಕೆಗೆ ಸಾರ್ವಜನಿಕರ ಹಲವಾರು ದೂರಿನ ಹಿನ್ನೆಲೆ ಹಾಗೂ ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುವ ವಾಹನಗಳನ್ನು ಅರಕ್ಷಣಾ ಅಧಿಕಾರಿಗಳು ತಡೆಹಿಡಿದ ಘಟನೆಗಳನ್ನು ಪರಿಗಣಿಸಿಇಂದು ಮುಂಜಾನೆ ಉರ್ವಸ್ಟೋರ್, ಉರ್ವ ಮಾರ್ಕೆಟ್, ಕಸಾಯಿಖಾನೆ ಮುಂತಾದೆಡೆ ಮಾಂಸದ ಅಂಗಡಿಗಳನ್ನು ಪರಿಶೀಲಿಸಲಾಯಿತು.

ಈ ವೇಳೆ ಕಸಾಯಿ ಖಾನೆ ಮತ್ತು ಮಾರಾಟ ಮಳಿಗೆಗಳ ಪರವಾನಿಗೆ ಮತ್ತು ಬಿಲ್‌ಗಳನ್ನು ಮೇಯರ್ ಪರಿಶೀಲನೆ ನಡೆಸಿದ್ದು ಅಕ್ರಮ ಮಾರಾಟ ಮತ್ತು ವಧೆಗಳ ಬಗ್ಗೆ ನಿಗಾ ಇರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಾಂಸ ಮಳಿಗೆಗಳಲ್ಲಿ ಮಾರಾಟವಾಗುವ ಮಾಂಸದಲ್ಲಿ ಕಡ್ಡಾಯ ಸೀಲ್ ಮತ್ತು ಬಿಲ್ ಇರುವಂತೆ ಸೂಚನೆ ನೀಡಿರುವ ಮೇಯರ್‌ ದಿವಾಕರ್‌ ಅವರು, ಅಕ್ರಮವಾಗಿ ಮಾರಾಟ, ಕಂಡುಬಂದಲ್ಲಿ ಪರವಾನಿಗೆ ರದ್ದು ಮಾಡುವ ಎಚ್ಚರಿಕೆ ನೀಡಿದರು.

ದಾಳಿ ಕಾರ್ಯಾಚರಣೆಯಲ್ಲಿ ಮನಪಾ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಶ್ರೀಮತಿ ಪೂರ್ಣಿಮಾ, ಶ್ರೀ ಕಿರಣ್ ಕುಮಾರ್, ಮ.ನ.ಪಾ ಸದ್ಯಸರು ಶ್ರೀ ಸುಧೀರ್ ಶೆಟ್ಟಿ ಹಾಗು ಮ.ನ.ಪಾ ಅಧಿಕಾರಿಗಳ ವರ್ಗ ಪಾಲ್ಗೊಂಡಿದ್ದರು.

Comments are closed.