ಕರಾವಳಿ

ಜೀವವೈವಿಧ್ಯ ಮಂಡಳಿ ಅಧ್ಯಕ್ಷರ ನೇತ್ರತ್ವದಲ್ಲಿ ಕುಮಾರಧಾರಾ ನದೀ ಸಂರಕ್ಷಣಾ ಅಭಿಯಾನ

Pinterest LinkedIn Tumblr

ಮಂಗಳೂರು ಅಕ್ಟೋಬರ್ 07 : ಕರ್ನಾಟಕ ಜೀವವೈವಿಧ್ಯ ಮಂಡಳಿ, ಪಂಚಾಯತ್ ಜೀವವೈವಿಧ್ಯ ಸಮಿತಿಗಳು, ಅರಣ್ಯ ಇಲಾಖೆ ಇವುಗಳ ಸಹಯೋಗದಲ್ಲಿ ಅಕ್ಟೋಬರ್ 2 ಗಾಂಧೀ ಜಯಂತಿ ದಿನದಿಂದ 3 ದಿನ ಕಾಲ ಕುಮಾರಧಾರಾ ನದಿ ಸಂರಕ್ಷಣಾ ಅಭಿಯಾನದಲ್ಲಿ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ನದೀರಕ್ಷಾ ಅಭಿಯಾನದ ನೇತೃತ್ವ ವಹಿಸಿದ್ದರು.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನದೀಮಾಲಿನ್ಯ ಸಮಸ್ಯೆ ನಿವಾರಣೆ ಬಗ್ಗೆ ನಾಗರೀಕರು, ಪಂಚಾಯತ್, ದೇವಾಲಯ ಆಡಳಿತದ ಜೊತೆ ಸಮಾಲೋಚನಾ ಸಭೆ ನಡೆಸುವುದರೊಂದಿಗೆ ನದಿ ತೀರಕ್ಕೆ ಹಾಗೂ ಭೇಟಿ, ವೃಕ್ಷಾರೋಪಣಾ ಕಾರ್ಯಕ್ರಮಗಳು ನಡೆದವು. ಜಿಲ್ಲಾ ಮಾಲಿನ್ಯ ನಿಯಂತ್ರಣಾಧಿಕಾರಿಗಳು ಮುಂದಾಗಿ ಮಾಲಿನ್ಯ ತಡೆ ಕ್ರಮ ತ್ವರಿತವಾಗಿ ಜಾರಿ ಮಾಡಲು ಸೂಚಿಸಿದರು. ಹೋಟೆಲ್ ಅಡಿಗೆ ತ್ಯಾಜ್ಯಾದಿಂದ ಬಯೋಗ್ಯಾಸ್ ತಯಾರಿಸಿ, ತ್ಯಾಜ್ಯಾ ಸಮಸ್ಯೆ ನಿವಾರಿಸಿ ಎಂದು ಸುಬ್ರಹ್ಮಣ್ಯದ ಹೋಟೆಲ್ ಉದ್ಯಮಿಗಳಿಗೆ ಹೇಳಿದರು.

ಕುಮಾರಧಾರ ನದಿ ತೀರ ಉರುಂಭಿಯಲ್ಲಿ ರೈತರು ಹಾಗೂ ಪರಿಸರ ಕಾರ್ಯಕರ್ತರ ಜೊತೆ ನದಿ ಪೂಜೆ ಮಾಡಿ ನದಿಗೆ ಬಾಗಿನ ಅರ್ಪಿಸಿದರು. ಉರುಂಬಿ ನದಿ ಪ್ರದೇಶವನ್ನು ಸೂಕ್ಷ್ಮ ಜೀವ ಸಂಕುಲ ತಾಣ ಎಂದು ಕಡಬ ತಾಲ್ಲೂಕು ಪಂಚಾಯತ್ ಸಮಿತಿ ಸಭೆಯಲ್ಲಿ ಗುರುತಿಸಲಾಯಿತು. ಸುಳ್ಯ ತಾಲ್ಲೂಕು ಮಡಪ್ಪಾಡಿ ಗ್ರಾಮ ಪಂಚಾಯತ್ ಸಮಿತಿ ಸಭೆಯಲ್ಲಿ ತಜ್ಞರ ತಂಡ ಮಾಯಿಲ ಕೋಟೆ ಗುಡ್ಡ ಪ್ರದೇಶಕ್ಕೆ ಸಂರಕ್ಷಣಾ ಕವಚ ತೊಡಿಸಲು ನಿರ್ಧರಿಸಿತು.

ಸುಳ್ಯ ತಾಲ್ಲೂಕು ಪಂಚಾಯತ್ ಸಮಿತಿ ಸಭೆಯಲ್ಲಿ ನದಿ ಕಣಿವೆಗಳಲ್ಲಿರುವ ಮಿರಿಸ್ವಿಕಾ ಸ್ವಾಂಪ್ಸ್‍ಗಳನ್ನು ಗುರುತಿಸಿ ಸಂರಕ್ಷಣೆ ಮಾಡಲು ನಿರ್ಧರಿಸಲಾಯಿತು. ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿರಿ, ಜಿಲ್ಲಾ ಅರಣ್ಯಾಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಕುಮಾರಧಾರಾ ನೇತ್ರಾವತಿ ನದೀ ಕಣಿವೆಗಳಲ್ಲಿ ಇರುವ ಡೀಮ್ಡ್ ಅರಣ್ಯಗಳ ಸಂರಕ್ಷಣಾ ಯೋಜನೆಯನ್ನು ರೂಪಿಸಿ ಜಾರಿ ಮಾಡಬೇಕು ಎಂದು ಜೀವವೈವಿಧ್ಯ ಮಂಡಳಿ ಅಧ್ಯಕ್ಷರು ಸೂಚನೆ ನೀಡಿದರು.

ಪಿಲಿಕುಳ ನಿಸರ್ಗಧಾಮ ಹಾಗೂ ಜೀವವೈವಿಧ್ಯ ಮಂಡಳಿ ಜಂಟಿಯಾಗಿ ನಡೆಸಿದ ಕುಮಾರಧಾರಾ ನದೀ ಕಣಿವೆ ಪ್ರದೇಶದ ದೇವರ ಕಾಡುಗಳ ಕುರಿತ ಅಧ್ಯಯನ ವರದಿಯನ್ನು ಹಾಗೂ ಔಷಧಿ ಸಸ್ಯಗಳ ಗಣತಿ ಅಧ್ಯಯನ ವರದಿಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿಡುಗಡೆ ಮಾಡಲಾಯಿತು.

ಮಂಗಳೂರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಜೀವವೈವಿಧ್ಯ ಮಂಡಳಿ ತಂಡ ಸಸ್ಯ ಶಾಸ್ತ್ರಜ್ಞರು, ಪರಿಸರ ತಜ್ಞರು, ಸಂಶೋಧಕರು, ಉಪಕುಲಪತಿಗಳ ಜೊತೆ ಸಂವಾದ ನಡೆಸಿದರು.

ಕುಮಾರಧಾರಾ ನದಿ ಕಣಿವೆಯಲ್ಲಿ ಎನ್.ಎಸ್.ಎಸ್. ವಿದ್ಯಾರ್ಥಿಗಳ ಪಾದಯಾತ್ರೆ ನಡೆಸಲು ಅಶೀಸರ ಸಲಹೆ ನೀಡಿದರು. ಕನ್ನಡ ಭಾಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನದೀ ಕಣಿವೆಗಳ ಅಧ್ಯಯನ ವರದಿಯ ಸಾರಾಂಶವನ್ನು ಜನತೆಗೆ ಒದಗಿಸಲು ಸೂಚಿಸಿದರು.

ಜಿಲ್ಲೆಯಲ್ಲಿ ಕುಮಾರಧಾರಾ, ನೇತ್ರಾವತಿ, ಪಯಸ್ವಿನಿ ನದಿಗಳಲ್ಲಿ ಜೀವವೈವಿಧ್ಯ ಮಂಡಳಿ 5 ಸ್ಥಳಗಳನ್ನು ಮತ್ಸ್ಯ ತಾಣ ಎಂದು ಗುರುತಿಸಿದೆ. ಮೀನುಗಾರಿಕೆ ಇಲಾಖೆ ಸಹಕಾರದಲ್ಲಿ ಈ ಸ್ಥಳಗಳಲ್ಲಿ ಅಪರೂಪದ ಮೀನು ವೈವಿಧ್ಯ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ.

ನದೀ ಸಂರಕ್ಷಣಾ ಅಭಿಯಾನದಲ್ಲಿ ತಜ್ಞರಾದ ಪ್ರಸನ್ನ, ಕಾರ್ತಿಕ್, ಡಾ||. ದೇವಿ ಪ್ರಸಾದ್, ಡಾ||. ಶೆಣೈ, ಪ್ರೊ||. ಸ್ಮಿತಾ, ಡಾ||. ರೇವತಿ ಉಪಸ್ಥಿತದ್ದರು.

Comments are closed.