ಕರಾವಳಿ

ಉತ್ತಮ ಶಿಕ್ಷಕರಿಂದ ಆದರ್ಶ ವಿದ್ಯಾರ್ಥಿಗಳ ಸೃಷ್ಟಿ – ತಮ್ಮ 14ನೇ ವರ್ಷದ ಶೈಕ್ಷಣಿಕ ಸೇವೆ ಕಾರ್ಯಕ್ರಮದಲ್ಲಿ ಮುಂಬಯಿ ಉದ್ಯಮಿ ಸುರೇಶ್ ಕಾಂಚನ್

Pinterest LinkedIn Tumblr

ಮುಂಬಾಯಿ : ನಾನು ಯಾವುದೇ ಒಂದು ದೊಡ್ಡ ಮಟ್ಟದ ಸೇವೆ ಮಾಡುತ್ತಿಲ್ಲ. ಇದೊಂದು ಸಣ್ಣ ಪ್ರಯತ್ನ. ನನ್ನ ಗ್ರಾಮದ ಅಭಿವೃದ್ಧಿ ಕಾರ್ಯಗಳಲ್ಲಿ ಪಾಲ್ಗೊಳ್ಳುವುದೇ ನನ್ನ ಭಾಗ್ಯ. ಇಂದಿನ ಕಾರ್ಯಕ್ರಮವನ್ನು ಯುವಕ ಮಂಡಲದವರು ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ. ನಮ್ಮ ಗ್ರಾಮದಲ್ಲಿ ಬಹಳಷ್ಟು ಜನ ದಾನಿಗಳಿದ್ದಾರೆ. ಎಲ್ಲರೂ ಸೇರಿ ಶಾಲೆಗೆ ವೇದಿಕೆ ನಿರ್ಮಾಣ ಮಾಡಬೇಕಿದೆ.

ನಮ್ಮ ಶಾಲೆಯಲ್ಲಿ ಶಿಕ್ಷಣದೊಂದಿಗೆ ಶಿಸ್ತನ್ನೂ ಕಲಿಸಲಾಗುತ್ತಿದೆ. ಇಂದು ವಿತರಿಸಿದ ಪುಸ್ತಕ ಹಾಗೂ ವಿದ್ಯಾರ್ಥಿ ವೇತನವನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ ಸುರೇಶ್ ಕಾಂಚನ್ ಉತ್ತಮ ಶಿಕ್ಷಕರಿಂದ ಆದರ್ಶ ವಿದ್ಯಾರ್ಥಿಗಳನ್ನು ಸೃಷ್ಟಿಸಬಹುದು ಎಂದರು.

ಅವರು ಇತ್ತೀಚಿಗೆ ಉಪ್ಪಿನ ಕುದ್ರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆವರಣದಲ್ಲಿ ಮುಂಬಯಿ ಉದ್ಯಮಿ ಸುರೇಶ್ ಕಾಂಚನ್ ಮತ್ತವರ ಧರ್ಮಪತ್ನಿ ಯಶೋಧ ಕಾಂಚನ್ ಅವರ ವತಿಯಿಂದ ಯುವಕ ಮಂಡಲದ ಆಶ್ರಯದಲ್ಲಿ ನಡೆದ 14ನೇ ವರ್ಷದ ಪುಸ್ತಕ ವಿತರಣೆ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು ಪ್ರತೀ ವರ್ಷ ಈ ಕಾರ್ಯಕ್ರಮವನ್ನು ಯಶಸ್ವೀ ಆಗಿ ಆಯೋಜಿಸುತ್ತಾ ಬರುತ್ತಿರುವರು. ಕೊರೋನಾ ಸಾಂಕ್ರಾಮಿಕ ಕಾಯಿಲೆ ವಿಶ್ವವನ್ನೇ ತಲ್ಲಣಗೊಳಿಸಿದ್ದು, ಇಂತಹ ಪರಿಸ್ಥಿತಿಯಲ್ಲಿ ಕೋವಿಡ್ ನಿಯಮವನ್ನು ಪಾಲಿಸಿ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಹಮ್ಮಿಕೊಂಡ ಯುವಕ ಮಂಡಲದವರು, ಅಧ್ಯಾಪಕ ವರ್ಗ, ಶ್ರೀ ಗೋಪಾಲ ಕೃಷ್ಣ ದೇವಸ್ಥಾನದ ಆಡಳಿತ ಮಂಡಳಿ ಎಲ್ಲರೂ ಅಭಿನಂದನಾರ್ಹರು.

ನಮ್ಮ ಊರಿನಲ್ಲಿ, ಶಾಲೆಯ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ನಾನು ಗ್ರಾಮದ ಯಾವುದೇ ರೀತಿಯ ಸೇವೆಗೆ ಸದಾ ಸಿದ್ಧನಿದ್ದೇನೆ. ಎಲ್ಲರೂ ಗ್ರಾಮದ ಒಳಿತಿಗೆ ಪ್ರಯತ್ನಿಸೋಣ. ಕೋವಿಡ್ ನಿಯಮ ಪಾಲಿಸುತ್ತ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ ಎಂದು ಸುರೇಶ್ ಕಾಂಚನ್ ನುಡಿದರು.

ಮುಖ್ಯ ಅತಿಥಿ ಬಿ.ಜೆ.ಪಿ. ನಾಯಕರೂ, ಯುವಕ ಮಂಡಲದ ಗೌರವ ಅಧ್ಯಕ್ಷರಾಗಿರುವ ಸದಾನಂದ ಶೇರಿಗಾರ್ ಮಾತನಾಡುತ್ತ, ”ಕೊರೋನಾ ಮಹಾಮಾರಿಯಿಂದ ಎಲ್ಲರೂ ಸಂಕಷ್ಟಕ್ಕೀಡಾಗಿರುವ ಈ ಕಾಲಘಟ್ಟದಲ್ಲಿ ತನ್ನ ಉದ್ಯಮ ಸ್ಥಗಿತವಾಗಿದ್ದರೂ , ಹುಟ್ಟೂರಿನ ಬಡಮಕ್ಕಳ ವಿದ್ಯಾರ್ಜನೆಗೆ ಸ್ಪಂದಿಸಿದ ಸುರೇಶ್ ಕಾಂಚನ್ ದಂಪತಿ ಪುಣ್ಯ ಕಾರ್ಯ ಮಾಡಿದೆ. ಸುರೇಶ್ ಕಾಂಚನ್ ರು ತನ್ನ ಹುಟ್ಟೂರಲ್ಲಿ ಮಾಡುತ್ತಿರುವ ಸಾಮಾಜಿಕ, ಶೈಕ್ಷಣಿಕ ಸೇವೆಗಳು ಅಭಿಮಾನದ ಸಂಗತಿ. ಇಂತಹ ಕಠಿಣ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಿಸಿದ ಸುರೇಶ್ ಕಾಂಚನ್ ರನ್ನು ಎಲ್ಲರೂ ಅಭಿನಂದಿಸಬೇಕು ಎಂದರು.

ಪ್ರೌಢ ಶಾಲಾ ಮೂಖ್ಯೋಪಾಧ್ಯಾಯಿನಿ ಮಾಲತಿ ತನ್ನ ಅನಿಸಿಕೆ ತಿಳಿಸುತ್ತ, ಸತತ 14 ವರ್ಷಗಳಿಂದ ಒಂದನೇ ತರಗತಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸುರೇಶ್ ಕಾಂಚನ್ ನಡೆಸುತ್ತಿರುವುದು ನಮ್ಮೆಲ್ಲರ ಭಾಗ್ಯ. ಸುರೇಶ್ ಕಾಂಚನ್ ಮತ್ತವರ ಪರಿವಾರಕ್ಕೆ ನಮ್ಮೆಲ್ಲರ ಕೃತಜ್ಞತೆಗಳು. ಉಪ್ಪಿನ ಕುದ್ರು ದಾನಿಗಳ ಊರು. ಶಾಲಾ ಹಳೆ ವಿದ್ಯಾರ್ಥಿ ಗಳು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಊರಿನ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಸುರೇಶ್ ಕಾಂಚನ್ ಅವರ ಸೇವೆ ಇತರರಿಗೂ ಮಾದರಿ ಆಗಲಿ ಎಂದರು.

ಈ ಸಂದರ್ಭ ಅಂಗನವಾಡಿಯ ಶಿಕ್ಷಕಿ ನಳಿನಿ ಅವರು ಸುರೇಶ್ ಕಾಂಚನ್ ದಂಪತಿ ಅವರಿಗೆ ಶಾಲು, ಸ್ಮರಣಿಕೆ, ನಯೇನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಈ ಬಾರಿಯ ಎಸ್.ಎಸ್.ಎಲ್.ಸಿ. ಯಲ್ಲಿ ಅಧಿಕ ಅಂಕ ಗಳಿಸಿ ಶಾಲೆಗೆ ಕೀರ್ತಿ ತಂಡ ಕಾರ್ತಿಕ್ ಐತಾಳ ಮತ್ತು ರಚನಾ ಅವರನ್ನು ಸುರೇಶ್ ಕಾಂಚನ್ ಹಾಗೂ ವೇದಿಕೆಯ ಗಣ್ಯರು ಸನ್ಮಾನಿಸಿದರು. ವೇದಿಕೆಯ ಗಣ್ಯರು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿದರಲ್ಲದೆ, ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ 10ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದರು.

ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಮಾಧವ್, ಯುವಕ ಮಂಡಲದ ಅಧ್ಯಕ್ಷ ಚಂದ್ರ ಕುಂದರ್ ಉಪಸ್ಥಿತರಿದ್ದರು. ಮಧು ಸೂಧನ್ ಶೇರಿಗಾರ ಮತ್ತು ರಾಜೇಂದ್ರ ಪೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮವನ್ನು ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ದೀಪ ಬೆಳಗಿಸಿ ಸ್ವಾಗತಿಸಿದರು. ಶಾಸಕರನ್ನು ಸುರೇಶ್ ಕಾಂಚನ್ ಸನ್ಮಾನಿಸುತ್ತ ಉಪ್ಪಿನಕುದ್ರು ವಿನ ಅಭಿವೃದ್ಧಿಗಾಗಿ ಮನವಿ ಪತ್ರ ನೀಡಿದರು.

ಸುರೇಶ್ ಕಾಂಚನ್ ಅವರ ಧರ್ಮ ಪತ್ನಿ ಯಶೋಧ ಎಸ್. ಕಾಂಚನ್, ಸುಪುತ್ರಿಯರಾದ ನಿಕಿತಾ, ನಿವೇದಿತಾ ಹಾಗೂ ಊರ ಗಣ್ಯರು, ಪೋಷಕರು ಉಪಸ್ಥಿತರಿದ್ದರು.

ಯುವಕ ಮಂಡಲದ ಸಂಚಾಲಕರಾದ ಕೃಷ್ಣಮೂರ್ತಿ, ಅಧ್ಯಕ್ಷ ಚಂದ್ರ ಕುಂದರ್, ಶ್ರೀಧರ್ ಆಚಾರ್ಯ, ಕ್ರೀಡಾ ಕಾರ್ಯದರ್ಶಿ ಮಂಜುನಾಥ ಪಿ. ಮತ್ತು ಸರ್ವ ಸದಸ್ಯರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪುರೋಹಿತರು, ಅರ್ಚಕ ವೃಂದ ಸಹಕರಿಸಿದರು. ಸೇರಿದ್ದ ಎಲ್ಲರಿಗೂ ಸುರೇಶ್ ಕಾಂಚನ್ ವತಿಯಿಂದ ಉತ್ತಮ ಗುಣಮಟ್ಟದ ಮಾಸ್ಕ್ ಹಾಗೂ ಸ್ಯಾನಿಟೈಝೆರ್ ನೀಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಸೇವಾ ಕಾರ್ಯಗಳಿಂದಲೇ ಸುರೇಶ್ ಕಾಂಚನ್ ರವರಿಗೆ ಯಶಸ್ಸು- ಶಾಸಕ ಸುಕುಮಾರ್ ಶೆಟ್ಟಿ

ಕಾರ್ಯಕ್ರಮವನ್ನು ಉದ್ಘಾಟಿಸಿ ದೀಪ ಬೆಳಗಿಸಿದ ಬೈಂದೂರು ಕ್ಷೇತ್ರದ ಶಾಸಕ ಸುಕುಮಾರ್ ಶೆಟ್ಟಿ ಅವರು ಮಾತನಾಡುತ್ತ, ದೇಶದ ಉನ್ನತಿಗಾಗಿ ಸಮಾಜದ ಮಕ್ಕಳು ಶಿಕ್ಷಿತರಾಗಬೇಕು. ಬೈಂದೂರು ವಿಧಾನ ಸಭಾ ಕ್ಷೇತ್ರ ಅತ್ಯಂತ ಹಿಂದುಳಿದ ಕ್ಷೇತ್ರ . ಕ್ಷೇತ್ರದ ಅಭ್ಯುದಯಕ್ಕೆ ಈ ಪರಿಸರದ ಜನರು ಸಾಕಷ್ಟು ಸಹಕಾರ ನೀಡುತ್ತಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಸುರೇಶ್ ಕಾಂಚನ್ ಮಕ್ಕಳ ಶಿಕ್ಷಣಕ್ಕೆ ತನ್ನ ಸಂಪಾದನೆಯ ಭಾಗವನ್ನು ವಿನಿಯೋಗಿಸುತ್ತಿದ್ದರೆ. ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ತೊಂದರೆಯಾಗಕೂಡದು ಎಂಬ ದೃಷ್ಠಿಯಲ್ಲಿ ಒಂದು ಉತ್ತಮ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಸುರೇಶ್ ಕಾಂಚನ್ ಅವರಿಗೆ ಅವರು ಮಾಡುತ್ತಿರುವ ಸೇವಾ ಕಾರ್ಯಗಳಿಂದಲೇ ಶ್ರೇಯಸ್ಸು ಲಭಿಸುತ್ತಿದೆ. ಅವರಿಂದ ಈ ಗ್ರಾಮದ ಜನರಿಗೆ, ವಿದ್ಯಾರ್ಥಿಗಳಿಗೆ ಮತ್ತಷ್ಟು ಪ್ರಯೋಜನವಾಗುವಂತಾಗಲಿ ಎಂದರು.

ವರದಿ : ಈಶ್ವರ್ ಎಐಎಲ್

Comments are closed.