ಕರಾವಳಿ

ಹಲವು ವರ್ಷಗಳಿಂದ ವಿವಾದದಲ್ಲಿದ್ದ ಮಂಗಳೂರಿನ ಈ ರಸ್ತೆಗೆ ಕೊನೆಗೂ ಮುಕ್ತಿ : ಬಗೆ ಹರಿದ ವಿವಾದ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್. 23 : ನಗರದ ಜ್ಯೋತಿ ವೃತ್ತ (ಅಂಬೇಡ್ಕರ್ ಸರ್ಕಲ್‌) ದಿಂದ ಬಾವುಟಗುಡ್ಡೆ- ಕೆ.ಎಂ.ಸಿ ಕಾಲೇಜು ಸಂಪರ್ಕಿಸುವ ರಸ್ತೆ ವಿವಾದ ಹಲವು ವರ್ಷಗಳಿಂದ ವಿವಾದವಾಗಿಯೇ ಉಳಿದಿದ್ದು, ಇದೀಗ ಈ ವಿವಾದ ಸುಖಾಂತ್ಯ ಖಂಡಿದೆ ಎಂದು ಹೇಳ ಬಹುದು.

ಈ ರಸ್ತೆಗೆ ವಿಜಯ ಬ್ಯಾಂಕ್‌ನ ಮಾರ್ಗದರ್ಶಕರು ಜಿಲ್ಲೆಯ ಸಾವಿರಾರು ಯುವಕರಿಗೆ ಉದ್ಯೋಗವನ್ನು ಒದಗಿಸಿದ ‘ಮುಲ್ಕಿ ಸುಂದರ್ ರಾಮ್ ಶೆಟ್ಟಿ ಅವರ ಹೆಸರಿಡಬೇಕೆಂಬ ಬೇಡಿಕೆ ಹಲವಾರು ವರ್ಷಗಳಿಂದ ಕೇಳಿ ಬಂದಿತ್ತು. ಆದರೆ ಈ ರಸ್ತೆಯಲ್ಲಿ ಕೆಥೋಲಿಕ್ ಸಮುದಾಯಕ್ಕೆ ಸೇರಿದ್ದ ನಗರದ ಪ್ರಸಿದ್ಧ ಕಾಲೇಜೊಂದು ಇರುವುದರಿಂದ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡು ಬಹಳಷ್ಟು ಆತಂಕ ಸೃಷ್ಟಿಸಿತ್ತು.

ಈ ಬಗ್ಗೆ ಪರ ವಿರೋಧ ಪ್ರತಿಭಟನೆಗಳು ನಡೆದಿತ್ತು. ಆದರೇ.. ಬಹು ಜನರ ಬೇಡಿಕೆ ಹಾಗೂ ಪ್ರತಿಭಟನೆಯ ನಂತರ ಇದೀಗ ಬಾವುಟಗುಡ್ಡೆ ರಸ್ತೆಯೆಂದು ಸ್ಥಳೀಯರಿಂದ ಕರೆಯಲ್ಪಡುತ್ತಿದ್ದ ನಗರದ ಲೈಟ್ ಹೌಸ್ ಹಿಲ್ ರಸ್ತೆಯನ್ನು ಇಂದು (ಸೆಪ್ಟೆಂಬರ್ 23) ಸರ್ಕಾರ ಅಧಿಕೃತವಾಗಿ ‘ಮುಲ್ಕಿ ಸುಂದರ್ ರಾಮ್ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ ಮಾಡಿದೆ.

ಬುಧವಾರ ಬೆಳಿಗ್ಗೆ 9 ಗಂಟೆಗೆ ಬಾವುಟ ಗುಡ್ಡೆಯ ಸಿಂಡಿಕೇಟ್ ಬ್ಯಾಂಕಿನ ಸಮೀಪದಲ್ಲಿ ನಡೆದ ಮರುನಾಮಕರಣ ಸಮಾರಂಭದಲ್ಲಿ ಮಂಗಳೂರು ಮೇಯರ್ ದಿವಾಕರ್ ಪಾಂಡೇಶ್ವರ ಅವರು ಈ ರಸ್ತೆಯನ್ನು ಅಧಿಕೃತವಾಗಿ ಪ್ರಸಿದ್ಧ ಬ್ಯಾಂಕರ್ ‘ಮುಲ್ಕಿ ಸುಂದರ್ ರಾಮ್ ಶೆಟ್ಟಿ ಹೆಸರಿನಲ್ಲಿ ಮರು ನಾಮಕರಣ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಶಾಸಕರು, ಜನಪ್ರತಿನಿಧಿಗಳು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. ಸರ್ಕಾರದ ಈ ನಿರ್ಧಾರದಿಂದ ಇನ್ನು ಮುಂದೆ ಈ ರಸ್ತೆ ‘ಮುಲ್ಕಿ ಸುಂದರ್ ರಾಮ್ ಶೆಟ್ಟಿ ರಸ್ತೆ’ ಎಂದು ಕರೆಯಲ್ಪಡುತ್ತದೆ.

ಈ ರಸ್ತೆಯನ್ನು ಮರುನಾಮಕರಣ ಮಾಡುವ ಪ್ರಸ್ತಾಪವನ್ನು ಇಲ್ಲಿನ ನಗರ ಪಾಲಿಕೆಯು ಅಂಗೀಕರಿಸಿದ್ದು ಆಕ್ಷೇಪಣೆಗಳು ವ್ಯಕ್ತವಾದ ಕಾರಣ ಹೈಕೋರ್ಟ್ ಮೇ 24, 2017 ರಂದು ತಡೆಯಾಜ್ಞೆ ನೀಡಿತ್ತು. ಪರ ವಿರೋಧಗಳ ವಾದಗಳು ಮತ್ತು ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ರಾಜ್ಯ ಸರ್ಕಾರ ತನ್ನ ಹಿಂದಿನ ನಿರ್ಧಾರವನ್ನು ಪರಿಶೀಲಿಸಲು ಮತ್ತು ಈ ವಿಷಯದಲ್ಲಿ ಸೂಕ್ತ ನಿಲುವನ್ನು ತೆಗೆದುಕೊಳ್ಳಲು ಆದೇಶಿಸಿತ್ತು.

ನಗರ ಪಾಲಿಕೆ ಆಯುಕ್ತರಿಗೆ ಈ ಹಿಂದಿನ ತೀರ್ಮಾನದ ಬಗ್ಗೆ ಜನರಿಂದ ಬಂದಿರುವ ಆಕ್ಷೇಪ ಮೇಲ್ಮನವಿ ಅರ್ಜಿಗಳನ್ನು ಪರಿಶೀಲಿಸಲು ಸೂಚಿಸಲಾಗಿತ್ತು. ಇದನ್ನು ಪರಿಶೀಲಿಸಿದ ಆಯುಕ್ತರು ರಸ್ತೆಗೆ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಹೆಸರಿಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಸರ್ಕಾರವು ಇತ್ತೀಚೆಗೆ ತಡೆಯಾಜ್ಞೆಯನ್ನು ಹಿಂಪಡೆದಿದ್ದು ರಸ್ತೆಗೆ ‘ಮುಲ್ಕಿ ಸುಂದರ್ ರಾಮ್ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ ಮಾಡಲು ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಈ ರಸ್ತೆಗೆ ‘ಮುಲ್ಕಿ ಸುಂದರ್ ರಾಮ್ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ ಮಾಡಲಾಯಿತು.

Comments are closed.