ಕರ್ನಾಟಕ

ಕೇಂದ್ರ ಸಚಿವ ಸುರೇಶ ಅಂಗಡಿ ಇನ್ನಿಲ್ಲ !

Pinterest LinkedIn Tumblr

ನವದೆಹಲಿ: ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ (65) ಬುಧವಾರ ನಿಧನರಾಗಿದ್ದಾರೆ. ಕಳೆದ ವಾರ ಸುರೇಶ್ ಅಂಗಡಿ ಅವರಿಗೆ ಕೊರೊನಾ ಸೋಂಕು ತಗುಲಿತ್ತು.

ನಿಧನದ ವಿಚಾರವನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸುದ್ದಿ ವಾಹಿನಿಗಳಿಗೆ ದೃಢಪಡಿಸಿದ್ದಾರೆ.

ಅವರಿಗೆ ಸೆ.11ರಂದು ಶುಕ್ರವಾರ ಕೋವಿಡ್–19 ದೃಢ‍ಪಟ್ಟಿತ್ತು. ಫೇಸ್‌ಬುಕ್‌ ಹಾಗೂ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದರು.

ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ ನಿಧನರಾಗಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಸುರೇಶ್ ಅಂಗಡಿ ಪ್ರತಿನಿಧಿಸುತ್ತಿದ್ದರು. ಮುಂಬೈ ಕರ್ನಾಟಕ ಭಾಗದಲ್ಲಿ ಬಿಜೆಪಿಯ ಪ್ರಬಲ ಮುಖಂಡರಾಗಿದ್ದರು.

ಕೇಂದ್ರ ಸಚಿವ ಸಂಪುಟದ ರಾಜ್ಯ ರೈಲ್ವೇ ಸಚಿವರಾಗಿ ಕೆಲಸ ಮಾಡುತ್ತಿದ್ದರು. ಅಧಿವೇಶನ ಆರಂಭವಾದಾಗ ಎಲ್ಲ ಸಂಸದರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಅಂಗಡಿ ಅವರಿಗೆ ಸೋಂಕು ತಗುಲಿರೋದು ದೃಢಪಟ್ಟಿತ್ತು.

ಬಿಕಾಂ, ಎಲ್ಎಲ್‌ಬಿ ಓದಿದ್ದ ಸುರೇಶ ಅಂಗಡಿ ಅವರು 2004ರಿಂದ ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಲಿಂಗಾಯತ– ಬಣಜಿಗ ಸಮುದಾಯಕ್ಕೆ ಸೇರಿದ್ದರು. ಯುವಕರಾಗಿದ್ದಾಗಲೇ ಬಿಜೆಪಿಗೆ ಸೇರ್ಪಡೆಯಾಗಿ, ಜಿಲ್ಲಾ ಘಟಕದ ಅಧ್ಯಕ್ಷ ಸೇರಿದಂತೆ ವಿವಿಧ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದ್ದರು. ಜತೆಗೆ ಸಿಮೆಂಟ್‌ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು.

ಪತ್ನಿ ಮಂಗಳಾ, ಪುತ್ರಿಯರಾದ ಸ್ಫೂರ್ತಿ ಹಾಗೂ ಶ್ರದ್ಧಾ ಇದ್ದಾರೆ. ಮಗಳು ಶ್ರದ್ಧಾ ಅವರ ವಿವಾಹವನ್ನು ಶಾಸಕ, ಜಗದೀಶ ಶೆಟ್ಟರ್‌ ಅವರ ಪುತ್ರನೊಂದಿಗೆ ನೆರವೇರಿಸಿದ್ದರು.

Comments are closed.