ಕರಾವಳಿ

ವಿವಾದದ ಕೇಂದ್ರ ಬಿಂದುವಾದ ಮಂಗಳೂರಿನ ಲೇಡಿಹಿಲ್ ವೃತ್ತ : ಹೆಸರು ಬದಲಾವಣೆಗೆ ಹೆಚ್ಚಿದ ಆಗ್ರಹ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್.23: ಮಂಗಳೂರಿನ ಲೇಡಿಹಿಲ್ ವೃತ್ತ ಮತ್ತೊಮ್ಮೆ ವಿವಾದದ ಸುಳಿಗೆ ಸಿಲುಕಿಕೊಂಡಿದೆ. ಕೆಲವೊಂದು ಸಂಘಟನೆಗಳು ಹಲವಾರು ಬಾರಿ ಲೇಡಿಹಿಲ್ ವೃತ್ತದ ಹೆಸರು ಬದಲಾಯಿಸುವಂತೆ ಪ್ರಸ್ತಾಪ ಮಾಡಿತ್ತು. ಆದರೆ ಪ್ರಸ್ತಾಪ ಪುಸ್ತಕದಲ್ಲೇ ಉಳಿದು ಕೆಲವು ಸಮಯದಿಂದ ಈ ಬಗ್ಗೆ ಯಾವ ಧ್ವನಿಯೂ ಕೇಳಿ ಬಂದಿರಲಿಲ್ಲ.

ಆದರೆ ಈಗ ಲೈಟ್ ಹೌಸ್ ಹಿಲ್ ರಸ್ತೆಯ ವಿವಾದ ಬಗೆ ಹರಿದ ಬೆನ್ನಲ್ಲೇ ಮತ್ತೆ ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡ ಬೇಕೆನ್ನುವ ಕೂಗು ಕೇಳಿ ಬಂದಿದೆ. ಈಗಾಗಲೇ ನಗರದ ಬಿರುವೆರೆ ಕುಡ್ಲ ಸಂಘಟನೆಯು ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡಲು ಆಗ್ರಹಿಸಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮಾತ್ ಅವರಿಗೆ ಮನವಿ ಸಲ್ಲಿಸಿದೆ.

ಇದೀಗ ವಿಶ್ವಹಿಂದೂ ಪರಿಷದ್ ಕೂಡ ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡುವಂತೆ ಆಗ್ರಹ ಮಾಡಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿನ ಜಾತಿಪದ್ಧತಿಯನ್ನು ತೊಡೆದು ಸಾಮರಸ್ಯ ತರಲು ಶ್ರಮಿಸಿದ ಮಹಾ ಸಂತರು ಅವರ ಹೆಸರನ್ನು ಲೇಡಿಹಿಲ್ ವೃತ್ತಕ್ಕೆ ನಾಮಕರಣ ಮಾಡುವ ಮೂಲಕ ಅವರಿಗೆ ಗೌರವಾರ್ಪಣೆ ಸಲ್ಲಿಸಬೇಕು.

ಶೀಘ್ರವಾಗಿ ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡಲು ನಾವು ಆಗ್ರಹಿಸುತ್ತಿರುವುದಾಗಿ ವಿಶ್ವಹಿಂದೂ ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮೂಲಕ ಹೆಸರು ಬದಲಾವಣೆ ವಿವಾದದ ಚೆಂಡು ಸರ್ಕಾರದ ಅಂಗಳ ತಲುಪುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದು, ಸರ್ಕಾರ ಈ ಬಗ್ಗೆ ಯಾವ ತೀರ್ಮಾನ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.

ಲೇಡಿಹಿಲ್ ವೃತ್ತದ ಹೆಸರು ಬದಲಾವಣೆಗೆ ಆಕ್ಷೇಪ – ಮನವಿ

ಇದೇ ವೇಳೆ ಲೇಡಿಹಿಲ್ ವೃತ್ತದ ಹೆಸರು ಬದಲಾವಣೆ ಮಾಡದಂತೆ ಆಗ್ರಹಿಸಿ ಕಥೊಲಿಕ್ ಸಭಾ ಮಂಗಳೂರು, ಇದರ ಪದಾಧಿಕಾರಿಗಳು ದ.ಕ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಪ್ರಸ್ತುತ ಇರುವ ಲೇಡಿಹಿಲ್ ಜಂಕ್ಷನ್/ಲೇಡಿಹಿಲ್ ಸರ್ಕಲ್ ಗೆ ನೂರಾರು ವರ್ಷಗಳ ಇತಿಹಾಸ ಇರುವುದರಿಂದ ಹಾಗೂ ವಿದ್ಯಾಭ್ಯಾಸದ ಮೂಲಕ ಸ್ತ್ರೀಯರ ಸಬಲೀಕರಣದ ಧ್ಯೋತಕವಾಗಿರು (ಸಂಕೇತವಾಗಿರುವ)ವುದರಿಂದ ಹಾಗೂ ಕ್ರೈಸ್ತರ ಧಾರ್ಮಿಕ ಭಾವನೆಗಳಿರುವ ಲೇಡಿಹಿಲ್ ಹೆಸರನ್ನು ಬದಲಾಯಿಸುವುದಕ್ಕೆ ತೀವ್ರ ಆಕ್ಷೇಪಣೆ ಇದೆ.

ಮಂಗಳೂರಿನ ಲೇಡಿಹಿಲ್ ವೃತ್ತ ಅಂದರೆ ಲೇಡಿಹಿಲ್ ಜಂಕ್ಷನ್‌ಗೆ ಚಾರಿತ್ರಿಕ ಮಹತ್ವ ಇರುತ್ತದೆ. ಅಪೋಸ್ತಲಿಕ್ ಕಾರ್ಮೆಲ್ ಸಿಸ್ಟರ‍್ಸ್ ಫ್ರಾನ್ಸಿನಿಂದ ಮಂಗಳೂರಿಗೆ 1885ನೇ ಇಸವಿಯಲ್ಲಿ ಅಂದಿನ ಮದರ್ ಜನರಲ್ ಮಾರಿ ದೇಸ್ ಆಂಜ್ ಮಂಗಳೂರಿಗೆ ಬಂದಾಗ ಲೇಡಿಹಿಲ್ ಪ್ರದೇಶದಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಶಾಲೆ ತೆರೆಯಬೇಕೆಂದು ಸ್ಥಳೀಯ ಸಾರ್ವಜನಿಕರು ಒತ್ತಾಯಪಡಿಸಿದ್ದರು.

ಆ ಸಂದರ್ಭದಲ್ಲಿ ಅದೊಂದು ಗುಡ್ಡ ಸ್ಥಳವಾಗಿತ್ತು. ಅಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅವಕಾಶ ಇರಲಿಲ್ಲ. ಆದುದರಿಂದ ಸ್ಥಳೀಯ ಜನರ ಒತ್ತಾಯದ ಮೇರೆಗೆ, ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಹೆಣ್ಣು ಮಕ್ಕಳ ಶಾಲೆಯನ್ನು ತೆರೆಯಲಾಗಿತ್ತು.

ಈ ಶಾಲೆಯ ಮುಖಾಂತರ ಸಾವಿರಾರು ಹೆಣ್ಮಕ್ಕಳು ವಿದ್ಯಾಭ್ಯಾಸ ಹೊಂದಿ ಜೀವನದಲ್ಲಿ ಸಾಧನೆಯನ್ನು ಮಾಡಿದ್ದರು. ಸ್ಥಳೀಯ ಜನರು ಹೆಣ್ಮಕ್ಕಳ ಮೇಲಿನ ಅಭಿಮಾನದಿಂದ ಮತ್ತು ಗೌರವ ತೋರಿಸಲು ಸದ್ರಿ ಸ್ಥಳಕ್ಕೆ “ಲೇಡಿಹಿಲ್ ಎಂದು ನೂರಾರು ವರ್ಷಗಳಿಂದ ಕರೆಯುತ್ತಿದ್ದಾರೆ. ಹೆಣ್ಮಕ್ಕಳ ವಿದ್ಯಾಭ್ಯಾಸದ ಪ್ರತೀಕವಾಗಿ ಹಾಗೂ ಹೆಸರು ವಾಸಿಯಾದ ಈ ಸ್ಥಳದ ಹೆಸರನ್ನು ಬದಲಾಯಿಸುವುದು ಸಮಂಜಸವಲ್ಲ. ಇತಿಹಾಸವನ್ನು ಬದಲಾಯಿಸುವುದು ಸಮಂಜಸವಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ವೃತ್ತದ ಹೆಸರನ್ನು ಬದಲಾಯಿಸುವ ಪ್ರಸ್ತಾಪ ಇದ್ದಲ್ಲಿ ಅದನ್ನು ಕೈ ಬಿಡಬೇಕು ಎಂದು ಒತ್ತಾಯಿಸಿ ಕಥೊಲಿಕ್ ಸಭಾ ಮಂಗಳೂರು ಪ್ರದೇಶ ಇದರ ಅಧ್ಯಕ್ಷರಾದ ಶ್ರೀಮಾನ್ ಪಾವ್ಲ್ ರೊ ಎಐಸಿಯು ಅಧ್ಯಕ್ಷರಾದ ಶ್ರೀಮಾನ್ ಲ್ಯಾನ್ಸಿ ಡಿ’ಕುನ್ಹಾ ಲೇಡಿಹಿಲ್ ಶಿಕ್ಷಣ ಸಂಸ್ಥೆಯ ಸಹ ಕಾರ್ಯದರ್ಶಿ ಭಗಿನಿ ರೊಸಿಲ್ಡಾ ಎ.ಸಿ ಪ್ರಾಂಶುಪಾಲರಾದ ಭಗಿನಿ ಉಜ್ವಲ ಎ.ಸಿ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ರಾಜೇಶ್ ಶೆಟ್ಟಿ ಸದಸ್ಯರಾದ ವಿಜೇಂದ್ರ ಶೆಟ್ಟಿ ಮುಂತಾದವರು ದ.ಕ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

Comments are closed.