ಕರಾವಳಿ

38 ವರ್ಷಗಳ ಬಳಿಕ ಸುರಿದ ರಣಭೀಕರ ಮಳೆಗೆ ತತ್ತರಿಸಿದ ಉಡುಪಿ..!

Pinterest LinkedIn Tumblr

ಉಡುಪಿ: ಬರೋಬ್ಬರಿ 38 ವರ್ಷಗಳ ಬಳಿಕ ಸೆ.20 ಭಾನುವಾರ ಉಡುಪಿ ನಗರ ಬಾರೀ ಮಳೆಯಿಂದಾಗಿ ಸಂಪೂರ್ಣ ಜಲಾವೃತಗೊಂಡಿದೆ.

ಮಣಿಪಾಲ ಹೆದ್ದಾರಿಗೆ ಹೊಂದಿಕೊಂಡಿರುವ ಕೃಷ್ಣ ಮಠಕ್ಕೆ ಹೋಗುವ ರಸ್ತೆಗಳಲ್ಲಿ ನೆರೆ ನೀರು ಹರಿದು ರಸ್ತೆತಡೆ ಉಂಟಾಯಿತು. ಭಾನುವಾರವಾದ್ದರಿಂದ ಸಂಚಾರ ವಿರಳವಾಗಿತ್ತು. ಜಿಲ್ಲೆಯಲ್ಲಿ ಶನಿವಾರ ರಾತ್ರಿ ದಾಖಲೆಯ 315 ಮಿ.ಮೀ.ಗಳಷ್ಟು ಮಳೆಯಾಗಿದೆ. ಜಿಲ್ಲೆಯ ನದಿಗಳೆಲ್ಲವೂ ಅಪಾಯದ ಮಟ್ಟಮೀರಿ ಹರಿದು, ಅಕ್ಕಪಕ್ಕದ ತಗ್ಗುಪ್ರದೇಶಗಳು ಜಲಾವೃತಗೊಂಡಿದ್ದವು. ಮಂಗಳೂರು ಮತ್ತು ಮೈಸೂರಿನಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು ಕರೆಸಲಾಗಿದ್ದು, ಅಪಾಯಕ್ಕೆ ಸಿಲುಕಿದ್ದ 2500 ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಸ್ಥಳಾಂತರ ಮಾಡಲಾಯಿತು.

ಎಸ್.ಡಿ.ಆರ್.ಎಪ್ ತಂಡ ಹಾಗೂ ಉಡುಪಿ, ಕಾರ್ಕಳ, ಮೂಡುಬಿದಿರೆ, ಕುಂದಾಪುರ, ಭಟ್ಕಳ,ಪಾಂಡೇಶ್ವರ, ಮಲ್ಪೆ ಅಗ್ನಿಶಾಮಕ ದಳದವರು ಜೀವದ ಹಂಗು ತೊರೆದು ಜನರನ್ನು ಹಾಗೂ ಸಾಕು ಪ್ರಾಣಿಗಳನ್ನು ರಕ್ಷಸುವ ಮಹತ್ಕಾರ್ಯ ಮಾಡಿದರು.

ಗಾಳಿಮಳೆಗೆ ಮರಗಳು ಉರುಳಿ ಮೆಸ್ಕಾಂನ 50- 60 ವಿದ್ಯುತ್‌ ಕಂಬಗಳು ಉರುಳಿ ಬಿದ್ದಿವೆ. ಮಲ್ಪೆಯ ಸೈಂಟ್‌ ಮೇರೀಸ್‌ ದ್ವೀಪದಲ್ಲಿದ್ದ 10 ಮಂದಿ ಮೀನುಗಾರರನ್ನು ಮತ್ತು ಬಜೆ ಜಲಾಶಯದ ಖಾಸಗಿ ವಿದ್ಯುತ್‌ ಸ್ಥಾವರದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಮೂವರು ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ.

1982ರಲ್ಲಿ ಸುರಿದ ಭಾರಿ ಮಳೆಗೆ ಉಡುಪಿಗೆ ಉಡುಪಿಗೆಯೇ ತತ್ತರಿಸಿ ಹೋಗಿತ್ತು. ಮಾತ್ರವಲ್ಲದೆ ಸಾವುನೋವು ಸಂಭವಿಸಿದ್ದಲ್ಲದೆ ಲಕ್ಷಾಂತರ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿತ್ತು.

ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಭಾನುವಾರ ಜಿಲ್ಲಾದ್ಯಂತ ಪ್ರವಾಹ ಸಂಭವಿಸಿದೆ. ಭಾನುವಾರ ಮಧ್ಯಾಹ್ನ ಮಳೆ ಕಡಿಮೆಯಾಗಿ ಪ್ರವಾಹ ಇಳಿಮುಖವಾಯಿತಾದರೂ, ಪ್ರವಾಹದ ಭೀತಿ ಇನ್ನೂ ಕಡಿಮೆಯಾಗಿಲ್ಲ. ರಾಜ್ಯ ಹವಾಮಾನ ಇಲಾಖೆ ಕರಾವಳಿಯಾದ್ಯಂತ ಭಾನುವಾರ ಮತ್ತು ಸೋಮವಾರ ವಿಪರೀತ ಮಳೆಯಾಗುವ ಬಗ್ಗೆ ರೆಡ್‌ ಅಲರ್ಟ್‌ ಘೋಷಿಸಿತ್ತು. ಆದ್ದರಿಂದ ಇಂದು ಮತ್ತೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ, ಅಧಿಕಾರಿಗಳು ಕೇಂದ್ರಸ್ಥಾನವನ್ನು ಬಿಟ್ಟು ಹೋಗದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಸೋಮವಾರ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು ನೆರೆ ಇಳಿಮುಖಗೊಳ್ಳುತ್ತಿದೆ.

 

Comments are closed.