ಕರಾವಳಿ

ಡ್ರಗ್ಸ್ ದಂಧೆಗಿಳಿಯಲು ಏನು ಕಾರಣ : ವಿಚಾರಣೆ ವೇಳೆ ಬಾಯ್ಬಿಟ್ಟ ಬಂಧಿತ ಆರೋಪಿ ಕಿಶೋರ್

Pinterest LinkedIn Tumblr

ಮಂಗಳೂರು, ಸೆಪ್ಟಂಬರ್.21 :ಸಾರ್ವಜನಿಕರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಹಾಗೂ ಸೇವನೆ ಆರೋಪದ ಮೇಲೆ ಮಂಗಳೂರು ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಡ್ಯಾನ್ಸರ್ ಕಿಶೋರ್ ಅಮಾನ್‌ (30) ಹಾಗೂ ಅಕೀಲ್ ನೌಶೀಲ್ (28) ನನ್ನು ಹೆಚ್ಚಿನ ವಿಚಾರಣೆಗೆ ನ್ಯಾಯಾಲಯ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

ಡ್ರಗ್ಸ್ ಮಾರಾಟ ಮಾಡುತ್ತಿದ್ದ ಹಾಗೂ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ನಗರ ಅಪರಾಧ ಪತ್ತೆ ದಳ ಮತ್ತು ನಾರ್ಕೊಟಿಕ್ ಪೊಲೀಸರು ಈ ಇಬ್ಬರು ಆರೋಪಿಗಳನ್ನು ಶನಿವಾರ ಬೆಳಗ್ಗೆ ಬಂಧಿಸಿದ್ದರು. ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು ,ಬಳಿಕ ಪೊಲೀಸರು ಕಸ್ಟಡಿಗೆ ಪಡೆದುಕೊಂಡರು.

ಆರೋಪಿಗಳನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದ್ದು, ಇಂದು ವರದಿ ದೊರೆಯಲಿದೆ.ಪರೀಕ್ಷೆಯ ವರದಿ ನೆಗೆಟಿವ್‌ ಬಂದಲ್ಲಿ ಇಬ್ಬರ ವಿಚಾರಣೆಯನ್ನು ಪೊಲೀಸರು ಆರಂಭಿಸಲಿದ್ದು ಪಾಸಿಟಿವ್‌ ಆದ್ದಲ್ಲಿ ಅವರಿಗೆ ಕೊರೊನಾ ನಿಯಾಮಾವಳಿ ಪ್ರಕಾರವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಡ್ರಗ್ಸ್ ದಂಧೆಗಿಳಿಯಲು ಆರ್ಥಿಕ ಸಂಕಷ್ಟ ಕಾರಣ ಎಂದ ಆರೋಪಿ:

ಪೊಲೀಸರ ಪ್ರಾಥಮಿಕ ತನಿಖೆ ಸಂದರ್ಭದಲ್ಲಿ, ಕಿಶೋರ್‌ ತಾನು ಸ್ವತಃ ಮಾದಕ ವ್ಯಸನಿಯಾಗಿದ್ದು ಇತ್ತೀಚೆಗೆ ಮಾದಕವಸ್ತು ಸಾಗಾಟ ಆರಂಭಿಸಿರುವುದಾಗಿ ತಿಳಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಮೊದಮೊದಲು ಡ್ಯಾನ್ಸ್ ಪ್ರದರ್ಶನ ವೇಳೆ ಎನರ್ಜಿಗಾಗಿ ಮಾದಕ ಸೇವನೆ ಚಟ ಆರಂಭಿಸಿದ ಕಿಶೋರ್ ಬಳಿಕ ಆರು ತಿಂಗಳಿನಿಂದ ಆರ್ಥಿಕ ಸಂಕಷ್ಟಕ್ಕೊಳಗಾಗಿ ಮಾದಕ ವಸ್ತು ಮಾರಾಟ ದಂಧೆ ಆರಂಭಿಸಿರುವುದಾಗಿ ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಡ್ಯಾನ್ಸರ್‌ ಆಗಿರುವ ಕಿಶೋರ್‌ ಬಾಲಿವುಡ್‌ನ ABCD ಸಿನಿಮಾದಲ್ಲಿನಟಿಸಿದ್ದು, ಲಾಕ್‌ಡೌನ್‌ ಸಂದರ್ಭದಲ್ಲಿ ಮುಂಬೈನಿಂದ ನಗರಕ್ಕೆ ವಾಪಾಸ್‌ ಬಂದಿದ್ದ. ಅವರ ಕುಟುಂಬವು ಕುಳಾಯಿಗುಡ್ಡೆಯಲ್ಲಿ ಸಣ್ಣ ಹೆಂಚಿನ ಮನೆಯಲ್ಲಿ ವಾಸಿಸುತ್ತಿದ್ದು ಕೊರೊನಾ ಲಾಕ್‌ಡೌನ್‌ ಸಂದರ್ಭ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದು ಈ ಕಾರಣದಿಂದಾಗಿ ಡ್ರಗ್ಸ್‌ ದಂಧೆಯಲ್ಲಿ ತೊಡಗಿಸಿಕೊಂಡರುವುದಾಗಿ ಕಿಶೋರ್ ಹೇಳಿರುವ ಬಗ್ಗೆ ವರದಿಯಾಗಿದೆ.

ಮುಂಬೈಯಲ್ಲಿರುವ ತಮ್ಮ ಸ್ನೇಹಿತರಿಂದ ಮುಂಬೈಯಿಂದ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ ಬಗ್ಗೆ ಕೂಡ ಕಿಶೋರ್ ತಿಳಿಸಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಕಿಶೋರ್ ಅಮನ್ ಕಲಿತದ್ದು ಕೇವಲ 10ನೇ ತರಗತಿ. ಆದರೆ ಡ್ಯಾನ್ಸಿಂಗ್‌ನಲ್ಲಿ ರಾಜ್ಯದ ಗಮನ ಸೆಳೆದು ಭರವಸೆಯ ಕಲಾವಿದನಾಗಿ ಹೊರಹೊಮ್ಮಿದ್ದ.

ಕಿಶೋರ್ ಕೊಕೇನ್ ಮಾತ್ರ ಸೇವನೆ ಮಾಡುತ್ತಿದ್ದ, ಆದರೆ ಅಪಾಯಕಾರಿ ಎಂಡಿಎಂಎ ಸೇವನೆ ಮಾಡುತ್ತಿರಲಿಲ್ಲ ಎಂದು ತಿಳಿಸಿದ್ದಾನೆ. ಆದರೆ ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಡ್ರಗ್ಸ್ ಪಾರ್ಟಿ ಮಾಡುವ ಉದ್ದೇಶ ಹೊಂದಿದ್ದ. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ ಎಂಬ ಮಾಹಿತಿ ಪೊಲೀಸರಿಗೆ ನೀಡಿದ್ದಾನೆ ಎಂದು ಹೇಳಲಾಗಿದೆ.

ಆರೋಪಿಗಳು ನಗರದಲ್ಲಿ ಯುವತಿಯರು, ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿರುವುದು ತಿಳಿದುಬಂದಿದೆ. ಈ ವಿಚಾರದಲ್ಲಿ ಪೊಲೀಸರು ಮತ್ತಷ್ಟು ವಿಚಾರಣೆ ನಡೆಸುವ ಸಾಧ್ಯತೆ ಇದ್ದು, ತನಿಖೆಯಿಂದ ಇನ್ನೂ ಹೆಚ್ಚಿನ ಮಾಹಿತಿ ಲಭಿಸುವ ಸಾಧ್ಯತೆ ಇದೆ.

Comments are closed.