ಕರಾವಳಿ

ಭಾರಿ ಮಳೆಗೆ ಕರಾವಳಿಯ ಹಲವೆಡೆ ಕೃತಕ ನೆರೆ ಸೃಷ್ಟಿ -ದೇವಸ್ಥಾನಗಳು ಸೇರಿದಂತೆ ತಗ್ಗು ಪ್ರದೇಶಗಳು ಜಲಾವೃತ -ಜನಜೀವನ ಅಸ್ಥವ್ಯಸ್ಥ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್.21 : ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ತಗ್ಗು ಪ್ರದೇಶಗಳು ಮುಳುಗಡೆಯಾಗಿದೆ. ಕರಾವಳಿಯ ಹಲವೆಡೆ ಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಭಾರೀ ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ಥವ್ಯಸ್ಥವಾಗಿದೆ.

ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ವರ್ಷಧಾರೆಗೆ ವಿವಿಧೆಡೆ ಗುಡ್ಡ, ತಡೆಗೋಡೆ ಕುಸಿದು ಮನೆಗಳಿಗೆ ಹಾನಿಯಾಗಿದೆ. ತಗ್ಗು ಪ್ರದೇಶದಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತಡೆಯುಂಟಾಗಿದೆ. ಹಲವೆಡೆಗಳಲ್ಲಿ ಬೆಳೆ ಹಾನಿ ಸಂಭವಿಸಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ.

ನಗರದಲ್ಲಿ ಶನಿವಾರ ದಿನವಿಡೀ ಉತ್ತಮ ಮಳೆಯಾಗಿದೆ. ಶುಕ್ರವಾರ ತಡರಾತ್ರಿ ಆರಂಭಗೊಂಡ ಮಳೆ ಶನಿವಾರ – ಬಾನುವಾರ ಸೇರಿದಂತೆ ಇಂದು (ಸೋಮವಾರ) ಕೂಡ ಮುಂದುವರೆದಿತ್ತು. ಬಿಟ್ಟು ಬಿಡದೆ ಸುರಿದ ಮಳೆಗೆ ನಗರದ ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗಿತ್ತು. ಕೊಟ್ಟಾರ, ಕೊಟ್ಟಾರ ಚೌಕಿ, ಜಪ್ಪಿನಮೊಗರು, ಪಡೀಲ್‌, ಸುರತ್ಕಲ್, ಕಟಿಲು, ಕಿನ್ನಿಗೋಳಿ ಸಹಿತ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ.

ಭಾರೀ ಮಳೆಯ ಪರಿಣಾಮ ನಗರದ ಹೊರವಲಯದ ನೀರುಮಾರ್ಗದಲ್ಲಿ ಕಟಿಂಜಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕುಸಿತವಾಗಿದೆ. ರಸ್ತೆ ಸಂಪೂರ್ಣವಾಗಿ ಎರಡು ಭಾಗವಾಗಿದ್ದು, ಸಂಚಾರ ಸ್ಥಗಿತವಾಗಿದೆ. ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮೂಲಕ ಹಳೆಯಂಗಡಿ ಲೈಟ್‌ಹೌಸ್‌ಗೆ ತೆರಳುವ ರಸ್ತೆಯಲ್ಲಿಯೂ ನೀರು ಹರಿದು, ಸಂಚಾರವೂ ಸಂಪೂರ್ಣವಾಗಿ ಬಂದ್‌ ಆಗಿತ್ತು.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಳೆಯಂಗಡಿ, ಪಡುಪಣಂಬೂರಿನ ಕೆಲವೊಂದು ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹಗೊಂಡು ಕೃತಕ ನೆರೆ ಉಂಟಾಗಿದೆ. ರಸ್ತೆ ಸಂಚಾರವೇ ಬಂದ್‌ ಆದ ಘಟನೆ ಸಂಭವಿಸಿದೆ. ಪಡುಪಣಂಬೂರು ತೋಕೂರಿನ ಮಾಗಂದಡಿಯ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಕೃತಕ ನೆರೆ ಸೃಷ್ಟಿಯಾಯಿತು.

ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಪಡುಪಣಂಬೂರು ಮೇಗಿನ ನೆಲೆ ಅನಂತನಾಥ ಸ್ವಾಮಿ ಬಸದಿ ಆವರಣೆ ಗೋಡೆ ಕುಸಿದಿದ್ದು, ಬಸದಿಗೆ ಅಪಾರ ನಷ್ಟ ಉಂಟಾಗಿದೆ. ಬಜಪೆ ಸಮೀಪದ ಅದ್ಯಪಾಡಿ ಸಮೀಪದಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ರಸ್ತೆಯ ಮೇಲೆ ಮಣ್ಣು ರಾಶಿ ಬಿದ್ದಿದೆ. ಸಂಚಾರ ಅಸ್ತವ್ಯಸ್ತವಾಗಿದೆ.

ದಕ್ಷಿಣ ಕನ್ನಡ, ಮಂಗಳೂರು ಗಡಿಭಾಗದಲ್ಲಿ ಮಳೆಯ ಆರ್ಭಟಕ್ಕೆ ನಂದಿ, ಶಾಂಭವಿ ನದಿ ಉಕ್ಕಿ ಹರಿಯುತ್ತಿದ್ದು, ಕಿನ್ನಿಗೋಳಿ ಸಮೀಪದ ತಗ್ಗುಪ್ರದೇಶ ಜಲಾವೃತಗೊಂಡಿದೆ. ಪರಿಣಾಮ ಕಿನ್ನಿಗೊಳಿ, ಕಿಲೆಂಜೂರು, ಪಂಜ, ಬಳ್ಕುಂಜೆಯಲ್ಲಿ ನೂರಾರು ಎಕರೆ ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಂಡಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.

ನಗರದ ರಥಬೀದಿ, ಪಿ.ವಿ.ಎಸ್‌. ವೃತ್ತ ಸಹಿತ ಕೆಲವು ಕಡೆಗಳಲ್ಲಿ ಫುಟ್‌ಪಾತ್‌ ತೆರೆದಿಡಲಾಗಿದೆ. ಇದರಿಂದ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗಲಿಲ್ಲ. ಇನ್ನು, ನಗರದ ಅನೇಕ ಕಡೆಗಳಲ್ಲಿ ಫುಟ್‌ಪಾತ್‌ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ ಕಾರಣ, ನೀರು ರಸ್ತೆಯಲ್ಲೇ ಹರಿಯಿತು.

ಎಂ.ಜಿ. ರಸ್ತೆ, ಪಂಪ್‌ವೆಲ್‌, ನಂತೂರು, ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್‌ ಸಹಿತ ಕೆಲವೆಡೆ ವಾಹನ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು. ಬಹುತೇಕ ಕಡೆ ಒಳಚರಂಡಿ, ರಸ್ತೆ ಅಗೆಯುವ ಕೆಲಸ ನಡೆಯುತ್ತಿದ್ದು, ಮಳೆಯಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಯಿತು.

ಅಳಪೆಯಲ್ಲಿ ಎರಡು ಮನೆಗಳಿಗೆ ಹಾನಿಯಾಗಿದ್ದು, ಇಬ್ಬರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಮನೆಯ ಕಂಪೌಂಡ್ ಗೋಡೆಗಳು ಕುಸಿದಿದ್ದು, ಗಾಯಗೊಂಡಿರುವ ಇಬ್ಬರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಇಲ್ಲಿನ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನಕ್ಕೆ ಮಳೆ ನೀರು ನುಗ್ಗಿದ್ದು, ಅಂಗಣದ ಸುತ್ತಮುತ್ತ ಹರಡಿದೆ.

ನಗರದ ಹೊರವಲಯದ ಹೊಸಬೆಟ್ಟು ಸಮೀಪ ಬೈಲಾರೆ ಪ್ರದೇಶವು ಇದೇ ಮಳೆಗಾಲದಲ್ಲಿ 2ನೇ ಬಾರಿ ಮುಳುಗಡೆ ಯಾಗಿದೆ. ಇಲ್ಲಿ ಬೃಹತ್ ಕಾಲುವೆಗೆ ನೀರು ಹರಿಯುವ ಜಾಗ ಅಗಲ ಕಿರಿದಾಗಿದ್ದು, ಇದನ್ನು ಸರಿ ಪಡಿಸಿಕೊಡಬೇಕು ಎನ್ನುವುದು ಸ್ಥಳೀಯರು ಆಗ್ರಹವಾಗಿದೆ. ಮುಂಚೂರಿನಲ್ಲಿ ಬೃಹತ್ ಕಾಲುವೆ ಉಕ್ಕಿ ಹರಿದ ಪರಿಣಾಮ ಸುರತ್ಕಲ್ ಚೇಳಾರು ರಸ್ತೆಯಲ್ಲಿ ವಾಹನ ಓಡಾಟಕ್ಕೆ ತಡೆಯಾಯಿತು. ಮುಂಚೂರು ಗ್ರಾಮದ ಈ ರಸ್ತೆ ಕೂಡ 2ನೇ ಬಾರಿಗೆ ಮುಳುಗಡೆಯಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ಹವಾಮಾನ ಇಲಾಖೆಯು ‘ರೆಡ್ ಅಲರ್ಟ್’ ಘೋಷಿಸಿದೆ.

ಈ ದಿನಗಳಲ್ಲಿ ಕಡಲಿನ ಅಬ್ಬರ ಹೆಚ್ಚಾಗಿ ಪ್ರಕ್ಷುಬ್ಧವಾಗುವ ಸಾಧ್ಯತೆ ಇದೆ. ರಾಜ್ಯದ ಕರಾವಳಿಯಲ್ಲಿ 45-55 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಗಾಳಿಯಿಂದ ಕೂಡಿದ ಬಿರುಗಾಳಿಯ ವಾತಾವರಣ ಇರಲಿದೆ. ಇದರಿಂದ ಮೀನುಗಾರರು ಮೀನುಗಾರಿಕೆಗಾಗಿ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಸೆ. 23ರಿಂದ ‘ಆರೆಂಜ್ ಅಲರ್ಟ್’ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Comments are closed.