ಕರಾವಳಿ

ಉತ್ತಮ ಆರೋಗ್ಯ ಮತ್ತು ಫಿಟ್‍ನೆಸ್‌ಗಾಗಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿ : ವಿವಿ ಕುಲಪತಿ ಕರೆ 

Pinterest LinkedIn Tumblr

ಮಂಗಳೂರು ಸೆಪ್ಟೆಂಬರ್ 19: ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಇದ್ದು ಅವರು ಆರೋಗ್ಯ ಪೂರ್ಣವಾಗಿದ್ದಲ್ಲಿ ದೇಶದ ಸುಧಾರಣೆಯಲ್ಲಿ ಬದಲಾವಣೆಯನ್ನು ಮಾಡುವ ಶಕ್ತಿಯನ್ನು ಹೊಂದಿದ್ದಾರೆ. ಯುವಕರು ಯಾವುದೇ ದುಷ್ಚಟಕ್ಕೆ ಬಲಿಯಾಗದೆ ಆರೋಗ್ಯವಾಗಿರಬೇಕು. ವಿದ್ಯಾರ್ಥಿಗಳು ಪ್ರತಿಯೊಬ್ಬರು ಒಂದೊಂದು ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ಆರೋಗ್ಯ ಮತ್ತು ದೇಹ ಫಿಟ್‍ವಾಗಿರುವಂತೆ ನೋಡಿ ಕೊಳ್ಳಬೇಕು. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪಿ.ಎಸ್. ಯಡಪಡಿತ್ತಾಯ ಹೇಳಿದರು.

ಅವರು ನಗರದ ವಿಶ್ವವಿದ್ಯಾಯಲ ಕಾಲೇಜಿನಲ್ಲಿ ಫಿಟ್ ಇಂಡಿಯಾ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಲಿಕೆ ಎಂಬುದು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದ್ದು, ಕಲಿಕೆ ಕೇವಲ ನಾಲ್ಕು ಗೋಡೆಯ ಮಧ್ಯೆ ಮೀಸಲಾಗದೆ ಕ್ರೀಡೆಯಲ್ಲಿ ಭಾಗಹಿಸಿ ಕಲಿಯುವುದು ತುಂಬಾನೇ ಅವಶ್ಯವಾಗಿದೆ. ವಿದ್ಯಾರ್ಥಿಗಳು ಮತ್ತು ಯುವಕರು ಒಂದು ಶಕ್ತಿಯಿದ್ದಂತೆ, ಅವರ ಶಕ್ತಿಯನ್ನು ಯಾವ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂಬುದು ತಿಳಿದಿರಬೇಕು. ಯುವ ಸಮುದಾಯಕ್ಕೆ ಸರಿಯಾದ ಮಾರ್ಗದರ್ಶನ ಸಿಕ್ಕಿದಲ್ಲಿ ಅವರು ರಾಷ್ಟ್ರದ ಬಹುದೊಡ್ಡ ಶಕ್ತಿಯಾಗಿ ಬೆಳೆದು ರಾಷ್ಟ್ರಕ್ಕೆ ಉತ್ತಮ ಪ್ರಗತಿ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಲ್ಲಿದ್ದಾರೆ ಎಂದರು.

ಇಂದಿನ ದಿನಮಾನದಲ್ಲಿ ಯುವ ಸಮೂಹವು ಮಾದಕ ಜಾಲದಲ್ಲಿ ಬಿದ್ದು ತಮ್ಮ ಅಮೂಲ್ಯವಾದ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ. ಕಾಲೇಜು ಮತ್ತು ವಿಶ್ವವಿದ್ಯಾನಿಲಯದಲ್ಲಿ ಇರುವ ಆ್ಯಂಟಿ ಡ್ರಗ್ ಸೇಲ್ ಗಳು ಕಾರ್ಯ ರೂಪಕ್ಕೆ ಬಂದು ಸಂಚಾಲನ ಮೂಡಿಸಬೇಕು. ಯಾವುದೇ ಕಾರಣಕ್ಕೂ ಕಾಲೇಜು ಆವರಣದಲ್ಲಿ ಡ್ರಗ್ಸ್ ಪ್ರವೇಶಿಸಲು ಅವಕಾಶ ನೀಡಬಾರದು. ವಿದ್ಯಾರ್ಥಿಗಳು ಇಂತಹ ಚಟುವಟಿಕೆಯಲ್ಲಿ ತೊಡಗಬಾರದು ಅವುಗಳಿಂದ ದೊರವಿದ್ದು ತಮ್ಮ ಆರೋಗ್ಯ ಮತ್ತು ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಫಿಟ್ ಆಗಲು ಮೊದಲು ನಾವು ಶರೀರಿಕವಾಗಿ, ಮಾನಸಿಕವಾಗಿ, ಬೌದ್ದಿಕವಾಗಿ, ಸಾಮಾಜಿಕವಾಗಿ ಮತ್ತು ಆಧ್ಯಾತ್ಮಕವಾಗಿ ಇರುವ ಪಂಚ ಸೂತ್ರವನ್ನು ಹೊಂದಿ ಸಿದ್ಧವಾಗಿರಬೇಕು. ಫಿಟ್ ಹೊಂದಲು ಈ ಪಂಚ ಸೂತ್ರವನ್ನು ಅನುಸರಿಸಿದರೆ ವ್ಯಕ್ತಿ ಫಿಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು. ವಿದಾರ್ಥಿಗಳು ಏನಾದರು ಸಾಧನೆ ಮಾಡಬೇಕು ಎಂದರೆ ಮೊದಲು ನಮ್ಮ ಮನಸ್ಸಿನಲ್ಲಿ ಸಾಧನೆ ಮಾಡುವ ಗುರಿ ಸ್ಪಷ್ಟವಾಗಿರಬೇಕು. ಮನಸ್ಸು ಇದ್ದರೆ ಸಾಧನೆ ಮಾಡುವುದು ತುಂಬಾ ಸುಲಭ ಎಂದು ಉಪಕುಲಪತಿಗಳು ಹೇಳಿದರು.

ಕಾರ್ಯಕ್ರಮದಲ್ಲಿ ಎನ್,ಎಸ್.ಎಸ್. ಅಧಿಕಾರಿ ಗಣನಾಥ ಶೆಟ್ಟಿ, ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ, ವಿಶ್ವವಿದ್ಯಾನಿಯ ಕಾಲೇಜು ಪ್ರಾಂಶುಪಾಲ ಉದಯ ಕುಮಾರ್, ಕಾರ್‍ಸ್ಟ್ರೀಟ್ ಸರಕಾರಿ ಕಾಲೇಜು ಪ್ರಾಂಶುಪಾಲ ರಾಜಶೇಖರ್ ಹೆಬ್ಬಾರ್, ವಿವಿ ಕಾಲೇಜು ಎನ್,ಎಸ್.ಎಸ್ ಸಹ ಸಂಯೋಜಕರಾದ ನಾಗರತ್ನ ಮತ್ತಿತರರು ಉಪಸ್ಥಿತರಿದ್ದರು.

Comments are closed.