ಕರಾವಳಿ

ಆಯುಷ್ಮಾನ್ ಭಾರತ್ ಯೋಜನೆಯಡಿ ಎಲ್ಲಾ ಆಸ್ಪತ್ರೆಗಳು ಪ್ರತಿಯೊಬ್ಬರಿಗೂ ಉಚಿತ ಚಿಕಿತ್ಸೆ ನೀಡಬೇಕು

Pinterest LinkedIn Tumblr

ಮಂಗಳೂರು  : ಸಮಾಜದ ಕಟ್ಟಕಡೆಯ ಜನರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಆಸ್ಪತ್ರೆಗಳು ಉಚಿತ ಚಿಕಿತ್ಸೆ ನೀಡಬೇಕು, ಈ ಮೂಲಕ ಜನರಲ್ಲಿ ಆತ್ಮಸ್ಥೆರ್ಯ ಮೂಡಿಸುವಂತಹ ಕಾರ್ಯ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವೆನ್‍ಲಾಕ್ ಆಸ್ಪತ್ರೆ, ಮಂಗಳೂರು ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಕೋವಿಡ್-19, ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ವಿಶೇಷ ಜನ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಆಯುಷ್ಮಾನ್ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಬೇಕು, ಈ ಮೂಲಕ ಹೊಸ ಭರವಸೆ ಹಾಗೂ ಆತ್ಮಸ್ಥೆರ್ಯ ಮೂಡಿಸಬೇಕು. ಇದರಲ್ಲಿ ಏನಾದರೂ ಲೋಪವಾಗಿ ಸಾರ್ವಜನಿಕರಿಂದ ದೂರು ಬಂದರೆ ತಕ್ಷಣ ದಾಖಲೆಗಳನ್ನು ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಆಯುಷ್ಮಾನ್ ಭಾರತ್ ಯೋಜನೆಯಡಿ ಕೊರೊನಾ ರೋಗಕ್ಕೆ ಉಚಿತ ಚಿಕಿತ್ಸೆ ನೀಡುವ ಬಗ್ಗೆ ಜಿಲ್ಲೆಯ ಸಾಕಷ್ಟು ಜನರಲ್ಲಿ ಗೊಂದಲಗಳಿದ್ದು, ಇದನ್ನು ನಿವಾರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ವತಿಯಿಂದ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಪ್ರತೀ ವಾರ್ಡ್ ಮಟ್ಟದಲ್ಲಿ ಆಶಾ ಕಾರ್ಯಕರ್ತೆ, ಜನಪ್ರತಿನಿಧಿಗಳು, ಸದಸ್ಯರು ಹಾಗೂ ವಿವಿಧ ಅಧಿಕಾರಿಗಳನ್ನು ಒಳಗೊಂಡ ತಂಡಗಳನ್ನು ರಚಿಸಿದ್ದು, ಈ ತಂಡ ಜನರಿಗೆ ಸೂಕ್ತ ಮಾಹಿತಿ ನೀಡುವ ಕಾರ್ಯ ಮಾಡುತ್ತಿದೆ ಎಂದರು.

ಯಾವುದೇ ರೀತಿಯ ಮಾಹಿತಿಯ ಅವಶ್ಯಕತೆ ಇದ್ದರೆ ಆರೋಗ್ಯ ಮಿತ್ರ ಸಹಾಯವಾಣಿಯನ್ನು ಸಂಪರ್ಕಿಸಬೇಕು. ಜೊತೆಗೆ ಈಗಾಗಲೇ ಜಿಲ್ಲಾಡಳಿತ ಎಲ್ಲಾ ನೋಡಲ್ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಪ್ರಕಟಿಸಿದ್ದು, ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಕೊರೊನಾ ವಿರುದ್ಧ ಹೋರಾಡಲು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ವೈದ್ಯಾಧಿಕಾರಿಗಳು ಶಕ್ತಿಮೀರಿ ಪ್ರಯತ್ನ ಪಡುತ್ತಿದ್ದು ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಮಾತನಾಡಿ, ಜಿಲ್ಲೆಯ ಆಸ್ಪತ್ರೆಗಳಲ್ಲಿ ಈಗಾಗಲೇ ಅಧಿಕ ಬೆಡ್ ಲಭ್ಯವಿದ್ದು, ಐ.ಸಿ.ಯು, ವೆಂಟಿಲೇಟರ್‍ಗಳಿಗೆ ಯಾವುದೇ ಕೊರತೆ ಇಲ್ಲ. ಇನ್ನು ಮುಂಬರುವ ದಿನಗಳಲ್ಲಿ ವೆನ್‍ಲಾಕ್ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ 30 ವೆಂಟಿಲೀಟರ್ ಐಸಿಯು ಆಗಲಿದೆ. ಜನರು ಗಾಬರಿಪಡದೆ ಕೊರೊನಾ ರೋಗಕ್ಕೆ ಚಿಕಿತ್ಸೆ ಪಡೆಯಬೇಕು. ಶೀಘ್ರದಲ್ಲಿ ವೆನ್‍ಲಾಕ್ ಆಸ್ಪತ್ರೆಯಲ್ಲಿ ಪ್ಲಾಸ್ಮಾ ದಾನ ಸೆಂಟರ್ ತೆರೆಯಲಾಗುವುದು ಎಂದು ಹೇಳಿದರು.

ಮಂಗಳೂರಿನಲ್ಲಿ 11,267, ಬಂಟ್ವಾಳ ತಾಲೂಕಿನಲ್ಲಿ 2,390, ಬೆಳ್ತಂಗಡಿ ತಾಲೂಕಿನಲ್ಲಿ 1058, ಪುತ್ತೂರು ತಲೂಕಿನಲ್ಲಿ 1305, ಸುಳ್ಯ ತಾಲೂಕಿನಲ್ಲಿ 666, ಇತರ ಜಿಲ್ಲೆಗಳಲ್ಲಿ 1,090 ಜಿಲ್ಲೆಯಲ್ಲಿ ಒಟ್ಟು 17,776 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದೆ. 4,403 ಸಕ್ರೀಯ ಪ್ರಕರಣಗಳ ಸಂಖ್ಯೆಯಾಗಿದ್ದು, ಇದುವರೆಗೆ 13,286 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಒಟ್ಟು 447 ಸಾವು ಸಂಭವಿಸಿದೆ.

ಈಗಾಗಲೇ ಜಿಲ್ಲೆಯಲ್ಲಿ 49,905 ಜನರ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಆಗಿದ್ದು, ಇದರಲ್ಲಿ 3,174 ಪಾಸಿಟಿವ್ ಪ್ರಕರಣಗಳಾಗಿವೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್‍ಗೆ ಸಂಬಂಧಿಸಿದಂತೆ ಅಧಿಕ ಪ್ರಕರಣಗಳು ದಾಖಲಾಗಿದ್ದು, ಈ ನಿಟ್ಟಿನಲ್ಲಿ ಪ್ರತೀ ವಾರ್ಡ್‍ಗಳಲ್ಲಿ ಜನಪ್ರನಿಧಿಗಳನ್ನು ಒಳಗೊಂಡ ತಂಡ ರಚಿಸಿದ್ದು, ಈ ತಂಡಗಳು ಪ್ರಾಥಮಿಕ ಮತ್ತು ದ್ವಿತೀಯ ಸಂಬಂಧ ಹೊಂದಿದ ವ್ಯಕ್ತಿಗಳನ್ನು ಪತ್ತೆ ಹಚ್ಚುವುದು, ಕಂಟೈನ್ ಝೋನ್‍ಗಳ ಮೇಲೆ ನಿಗಾವಹಿಸಲಾಗುವುದು ಎಂದರು.

ತಳಮಟ್ಟದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಮಾಹಿತಿ ನೀಡುವ ಕಾರ್ಯವನ್ನು ಈ ತಂಡ ಮಾಡುತ್ತಿದೆ ಎಂದರು. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 10 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಆರೋಗ್ಯ ಮೇಲ್ವಿಚಾರಕರ ಸಹಕಾರದೊಂದಿಗೆ ಉಚಿತವಾಗಿ ನಡೆಸಲಾಗುತ್ತಿದೆ.

ಜಿಲ್ಲೆಯಲ್ಲಿ ಅನೇಕರಿಗೆ ಆಯುಷ್ಮಾನ್ ಯೋಜನೆಯಡಿ ಉಚಿತ ಚಿಕಿತ್ಸೆಯನ್ನು ಯಾವ ರೀತಿ ಪಡೆದುಕೊಳ್ಳಬೇಕು ಎನ್ನುವುದರ ಕುರಿತು ಮಾಹಿತಿಯ ಕೊರತೆ ಇದೆ. ಹಾಗಾಗಿ ಸ್ಥಳೀಯ ಮಟ್ಟದಲ್ಲಿ ಜನಪ್ರತಿನಿಧಿಗಳು ಜನರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಮಾಡಬೇಕು ಎಂದರು.

ಆನ್‍ಲೈನ್ ಮೂಲಕ ವೈದ್ಯರಿಂದ ಸೂಕ್ತ ಸಲಹೆ ಪಡೆದು ಜನರು ಚಿಕಿತ್ಸೆ ಪಡೆದುಕೊಳ್ಳುವಲ್ಲಿ ಮಂಗಳೂರು ಪ್ರಥಮ ಸ್ಥಾನದಲ್ಲಿದ್ದು, ಮೊಬೈಲ್ ಜಿ.ಪಿ.ಎಸ್ ಮುಖಾಂತರ ಪ್ರಾಥಮಿಕ ಸಂಪರ್ಕ ಹೊಂದಿದ ವ್ಯಕ್ತಿಯನ್ನು ಈಗಾಗಲೇ ಪತ್ತೆ ಹಚ್ಚಲಾಗುತ್ತಿದ್ದು, ಇದರ ಜೊತೆಗೆ ಆ ರೂಟ್ ಮ್ಯಾಪ್ ಅಳವಡಿಸಿ ವೃದ್ಧರ, ಜನಸಾಮಾನ್ಯರ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಯನ್ನು ವೈದ್ಯಕೀಯ ತಂಡ ಖುದ್ದು ಮನೆಗೆ ಭೇಟಿ ನೀಡಿ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ದಕ್ಷಿಣ ಶಾಸಕ ಡಿ ವೇದವ್ಯಾಸ್ ಕಾಮತ್, ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸಿ.ಇ.ಓ. ಸೆಲ್ವಮಣಿ ಆರ್, ಡಿ.ಸಿ.ಪಿ., ಅರುಣಾಂಶಗಿರಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ, ಮೇಯರ್ ದಿವಾಕರ್ ಪಾಂಡೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.

Comments are closed.