ಕರಾವಳಿ

ಕೊಲ್ಲೂರು ಮೂಕಾಂಬಿಕ ಕ್ಷೇತ್ರದಿಂದ ಕೊಡಚಾದ್ರಿಗೆ ರೋಪ್ ವೇ: ಸರ್ವೆ ಕಾರ್ಯಕ್ಕೆ ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಚಾಲನೆ

Pinterest LinkedIn Tumblr

ಕುಂದಾಪುರ: ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕೆ ಕ್ಷೇತ್ರದಿಂದ ಕೊಡಚಾದ್ರಿಗೆ ಪ್ರವಾಸಿಗರು ತೆರಳಲು ಅತ್ಯಾಧುನಿಕ ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ರೋಪ್ ವೇ ಕಾಮಗಾರಿಯ ಡಿ.ಪಿ.ಆರ್. ಸರ್ವೇ ಕಾರ್ಯಕ್ಕೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಂಗಳವಾರದಂದು ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಚಾಲನೆ ನೀಡಿದ್ದಾರೆ.

ದೇಶದಲ್ಲಿಯೇ ಅತೀ ಉದ್ದದ ರೋಪ್ ವೇ ಇದಾಗಿದ್ದು ಯುರೋಪ್ ಮಾದರಿಯಲ್ಲಿ ನಿರ್ಮಿಸಲಾಗುತ್ತದೆ. ಇ.ಪಿ.ಐ.ಎಲ್ ಕಂಪೆನಿ ಈ ಸರ್ವೇ ಕಾರ್ಯ ನಡೆಸಲಿದೆ.

ಇದೇ ಸಂದರ್ಭ ಮಾತನಾಡಿದ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ, ಕೊಲ್ಲೂರು- ಕೊಡಚಾದ್ರಿ ರೋಪ್ ವೇ ಬಹುವರ್ಷಗಳ ಕನಸಾಗಿದ್ದು ಇದರಿಂದ ಪ್ರವಾಸೋದ್ಯಮ ಇನ್ನಷ್ಟು ವೃದ್ಧಿಸುತ್ತದೆ. ಯಾವುದೇ ಪರಿಸರ, ಅರಣ್ಯ ಹಾನಿಯಾಗದಂತೆ ವೈಜ್ಞಾ‌ನಿಕ ರೀತಿಯ ಕಾಮಗಾರಿ‌ ನಡೆಸಲಾಗುತ್ತದೆ. ರೋಪ್ ವೇ ನಿರ್ಮಾಣದಿಂದ ಕೊಲ್ಲೂರು ಭಾಗದ ಬಾಡಿಗೆ ಜೀಪು ಚಾಲಕರಿಗೆ ಸಮಸ್ಯೆಯಾಗುವುದಿಲ್ಲ. ಬದಲಾಗಿ ರೋಪ್ ವೇ ಆರಂಭವು ನಿರ್ದಿಷ್ಟ ಪ್ರದೇಶದಲ್ಲಿ ಆಗುವುದರಿಂದ ಜೀಪುಗಳ ಅವಶ್ಯಕತೆ ಮುಂದೆಯೂ ಇರಲಿದ್ದು ಇನ್ನು ಹೆಚ್ಚಿನ ಜೀಪುಗಳ ಅಗತ್ಯವಿದ್ದು ವ್ಯವಹಾರದ ಬಗ್ಗೆ ಜೀಪು ಚಾಲಕರಿಗೆ ಆತಂಕ ಬೇಡ ಎಂದರು.

ಈ ಸಂದರ್ಭದಲ್ಲಿ ಬೈಂದೂರು ಬಿಜೆಪಿ ಕ್ಷೇತ್ರಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿಲ್ಲಾಪಂಚಾಯತ್ ಸದಸ್ಯ ಶಂಕರ್ ಪೂಜಾರಿ, ಉದ್ಯಮಿ ವೆಂಕಟೇಶ್ ಕಿಣಿ,   ಮುಖಂಡರಾದ ಅತುಲ್ ಕುಮಾರ್ ಶೆಟ್ಟಿ, ಪ್ರಕಾಶ್ ಪೂಜಾರಿ ಜಡ್ಡು, ಸಂತೋಷ್ ಭಟ್, ಚಂದ್ರಯ್ಯ ಆಚಾರ್ ಕಳಿ ಮೊದಲಾದವರಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.