ಅಂತರಾಷ್ಟ್ರೀಯ

ಗಡಿ ಭಾಗದಲ್ಲಿ ಸುರಂಗ ಕೊರೆದು ಭಾರತಕ್ಕೆ ಶಸ್ತ್ರಾಸ್ತ್ರ ಸಹಿತಾ ಉಗ್ರರ ರವಾನೆ :ಪಾಕಿಸ್ತಾನದ ದುಷ್ಕೃತ್ಯ ಬಯಲು

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ನವದೆಹಲಿ : ತನ್ನ ದುಷ್ಕೃತ್ಯಗಳ ಮೂಲಕ ಕುಖ್ಯಾತಿ ಹೊಂದಿರುವ ಪಾಕಿಸ್ತಾನ ಇದೀಗ ಸುರಂಗ ಮಾರ್ಗಗಳ ಮೂಲಕ ಭಾರತಕ್ಕೆ ಭಯೋತ್ಪಾದಕರನ್ನು ಕಳುಹಿಸುತ್ತಿದೆ ಎಂಬ ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದೆ.

ಗಡಿ ಭಾಗದಲ್ಲಿ 20-25 ಅಡಿ ಆಳದ ಸುರಂಗ ಪಾಕಿಸ್ತಾನದಿಂದ ಬಂದಿರುವುದು ಕಂಡುಬಂದಿದೆ ಎಂದು ವರದಿಯಾಗಿದ್ದು, ಪಾಕಿಸ್ಥಾನ ಗಡಿಯಲ್ಲಿ ಸುರಂಗ ಕೊರೆದು, ಅದರ ಮೂಲಕ ಉಗ್ರರನ್ನು ಒಳಕ್ಕೆ ನುಗ್ಗಿಸಿ ಡ್ರೋಣ್ ಗಳ ಮೂಲಕ ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಲಾಗುತ್ತಿದೆ ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.

ಈ ಮೂಲಕ ಉಗ್ರರನ್ನು ದೇಶದೊಳಗೆ ಕಳುಹಿಸಿ ಈ ಭಾಗದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ಹೆಚ್ಚಿಸುವ ಪ್ರಯತ್ನವನ್ನು ಪಾಕಿಸ್ತಾನ ಮಾಡುತ್ತಿದೆ ಎಂದು ಜಮ್ಮು ಕಾಶ್ಮೀರ ಡಿಜಿಪಿ ದಿಲ್‌ಬಾಗ್‌ ಸಿಂಗ್‌ ಹೇಳಿದ್ದಾರೆ.

ಇತ್ತೀಚೆಗೆ ಗಲಾರ್‌ ಗ್ರಾಮದಲ್ಲಿ ಪತ್ತೆಯಾದ ಗಡಿಯುದ್ದಕ್ಕೂ ವಿಸ್ತಾರವಾಗಿರುವ 170 ಮೀಟರ್‌ ಉದ್ದದ ಸುರಂಗ ಪರಿಶೀಲಿಸಿದ ನಂತರ ಮಾತನಾಡಿದ ಅವರು ಪಾಕಿಸ್ತಾನದ ದುಷ್ಕೃತ್ಯವನ್ನು ಮಾಧ್ಯಮಗಳಿಗೆ ತಿಳಿಸಿದ್ದು, ಈ ಮೂಲಕ ಪಾಕಿಸ್ತಾನದ ಕಳ್ಳಾಟ ಬಯಲಾಗಿದೆ ಎಂದು ತಿಳಿಸಿದ್ದಾರೆ.

ಪತ್ತೆಯಾದ ಸುರಂಗವು 20 ರಿಂದ 25 ಅಡಿ ಆಳವಿದ್ದು, ಪಾಕಿಸ್ತಾನದ ಸಂಪರ್ಕ ಹೊಂದಿದೆ. ಆಗಸ್ಟ್‌ 28ರಂದು ಗಡಿ ಭದ್ರತಾ ಪಡೆ ಗಡಿ-ಫೆನ್ಸಿಂಗ್ ಬಳಿ ಸುರಂಗವನ್ನು ಕಂಡುಹಿಡಿದಿತ್ತು. 2013-14ರಲ್ಲಿ ಚನ್ಯಾರಿಯಲ್ಲಿ ಪತ್ತೆಯಾದಂತ ಬೃಹತ್‌ ಸುರಂಗದ ರೀತಿ ಈ ಸುರಂಗವೂ ಇದೆ. ನಾಗ್ರೋಟಾ ಎನ್‌ಕೌಂಟರ್ ನಂತರ, ಸುರಂಗದ ಮೂಲಕ ಒಳನುಸುಳುವಿಕೆ ನಡೆದಿದೆ ಎಂಬ ಮಾಹಿತಿಯನ್ನು ಡಿಜಿಪಿ ನೀಡಿದ್ದಾರೆ ಎಂದು ವರದಿಯಾಗಿದೆ.

ಭಾರತ-ಪಾಕ್ ಗಡಿ ಭಾಗದಲ್ಲಿ ಪಾಕಿಸ್ತಾನದ ದುಷ್ಕೃತ್ಯಗಳನ್ನು ತಡೆಗಟ್ಟಲು ಅಗತ್ಯವಿರುವ ಸುರಂಗ ಕೊರೆಯುವುದನ್ನು ತಡೆಯುವ ಕಾರ್ಯಾಚರಣೆಗಳು ನಡೆಯುತ್ತಿವೆ. ಅಕ್ರಮ ಒಳನುಸುಳುವಿಕೆ ವಿರೋಧಿ ಗ್ರಿಡ್ ಸಕ್ರಿಯವಾಗಿದೆ ಮತ್ತು ದುರುದ್ದೇಶಪೂರಿತ ಸುರಂಗಗಳನ್ನು ನಾಶಪಡಿಸಲು ಸುರಂಗ ನಿಗ್ರಹ ಕಾರ್ಯಾಚರಣೆಗಳು ನಡೆಯುತ್ತಿವೆ ಎಂಬ ಮಾಹಿತಿಯನ್ನು ಜಮ್ಮು-ಕಾಶ್ಮೀರದ ಡಿಜಿಪಿ ನೀಡಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

Comments are closed.