ಕರಾವಳಿ

ವಿದ್ಯಾರ್ಥಿಗಳ ಪೋಷಕರಿಗೆ ಸಿಹಿ ಸುದ್ಧಿ : ಯಾವುದೇ ಶಾಲೆಗಳು ಈ ಬಾರಿ ಶಾಲಾ ಶುಲ್ಕ ಹೆಚ್ಚಿಸದಂತೆ ಶಿಕ್ಷಣ ಇಲಾಖೆ ಆದೇಶ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಬೆಂಗಳೂರು / ಮಂಗಳೂರು : ರಾಜ್ಯದ ಯಾವುದೇ ಶಾಲೆಗಳು ಈ ಬಾರಿ ಶಾಲಾ ಶುಲ್ಕ ಹೆಚ್ಚಿಸುವಂತಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಖಡಕ್ ಆದೇಶ ಹೊರಡಿಸುವ ಮೂಲಕ ಶಾಲಾ ಮಕ್ಕಳ ಪೋಷಕರಿಗೆ ರಾಜ್ಯ ಶಿಕ್ಷಣ ಇಲಾಖೆಯು ಸಿಹಿ ಸುದ್ಧಿ ನೀಡಿದೆ.

ರಾಜ್ಯದ ಖಾಸಗಿ ಶಾಲೆಗಳಿಗೆ ಪ್ರವೇಶದ ಕುರಿತಂತೆ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಮಹತ್ವದ ಮಾಹಿತಿ ನೀಡಿದ್ದು, ಪೋಷಕರು ಪ್ರಥಮ ಕಂತಿನ ಶುಲ್ಕ ಸಂಗ್ರಹಿಸಿ 2020-21 ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭಿಸುವಂತೆ ಸೂಚಿಸಿದೆ. ಜೊತೆಗೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಹೆಚ್ಚಿನ ಶುಲ್ಕವನ್ನು ಪಡೆಯದೇ ಕಂತುಗಳ ರೂಪದಲ್ಲಿ ಶುಲ್ಕ ಪಾವತಿಸಲು ಅವಕಾಶ ನೀಡುವಂತೆಯೂ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ದಿನಾಂಕ 12,03,2020 ರಿಂದ ಶಾಲೆಗಳಿಗೆ ರಜೆಯನ್ನು ಘೋಷಿಸಿದ್ದರಿಂದ ವಿದ್ಯಾರ್ಥಿಗಳು ಸುಮಾರು 5 ತಿಂಗಳುಗಳಿಗೂ ಹೆಚ್ಚಿನ ಕಾಲ ಶೈಕ್ಷಣಿಕ ಚಟುವಟಿಕೆಗಳಿಂದ ದೂರವಾಗಿದ್ದಾರೆ. ಅಲ್ಲದೇ ಕೋರೊನಾ ಹಿನ್ನೆಲೆಯಲ್ಲಿ ಭೌತಿಕ ಶಾಲೆಗಳ ಪುನರಾರಂಭದ ಕುರಿತು ಅನಿಶ್ಚಿತತೆ ಮುಂದುವರೆದಿರುವುದರಿಂದ ಮಕ್ಕಳನ್ನು ಪರ್ಯಾಯವಾಗಿ ಸಂಪರ್ಕಿಸಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿದೇ ಇದ್ದಲ್ಲಿ, ಅವರು ಕಲಿಕೆಯಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುವ ಸಂಭವವಿರುತ್ತದೆ.

ಹಲವು ಮಕ್ಕಳು ಶಾಲೆಯು ಪ್ರಾರಂಭವಾದ ನಂತರವೂ ಸಹ ಶಾಲೆಯಿಂದ ಹೊರಗುಳಿಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಶಾಲೆಗಳು ಭೌತಿಕವಾಗಿ ಪ್ರಾರಂಭವಾಗುವವರೆಗೂ ಮಕ್ಕಳನ್ನು ಯುಕ್ತ ಪರ್ಯಾಯ ಮಾರ್ಗಗಳ ಮೂಲಕ ಸಂಪರ್ಕಿಸಿ ಅವರ ಮನೋಸ್ಥೈರ್ಯವನ್ನು ಹೆಚ್ಚಿಸುವ ಹಾಗೂ ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಅವಶ್ಯಕವಾಗಿದೆ.

ಈ ನಿಟ್ಟಿನಲ್ಲಿ ಪ್ರಥಮ ಹಂತವಾಗಿ ಎಲ್ಲಾ ವಿದ್ಯಾರ್ಥಿಗಳು ಸರ್ಕಾರಿ, ಅನುದಾನಿತ ಅಥವಾ ಮಾನ್ಯತೆ ಪಡೆದ ಅನುದಾನ ರಹಿತ ಶಾಲೆಗಳಲ್ಲಿ ದಾಖಲಾಗಿರುವುದನ್ನು ಖಚಿತಪಡಿಸಬೇಕಾಗಿದೆ. ಆದ್ದರಿಂದ 2020-21 ನೇ ಸಾಲಿನಲ್ಲಿ ವಿದ್ಯಾರ್ಥಿಗಳ ದಾಖಲಾತಿಯನ್ನು ದಿನಾಂಕ 30-09-2020 ರೊಳಗೆ ಪೂರ್ಣಗೊಳಿಸಲು ಎಲ್ಲಾ ಶಾಲೆಗಳಿಗೆ ಹಾಗೂ ಪೋಷಕರಿಗೆ ತಿಳಿಸಲಾಗಿದೆ ಎಂದು ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.

Comments are closed.