ಕುಂದಾಪುರ: ಸರ್ಕಾರ ನೀಡುತ್ತಿರುವ ಉಚಿತ ಅಕ್ಕಿ ಸಂಗ್ರಹಿಸಿ, ಗೋಡನ್ನಲ್ಲಿ ಸ್ಟಾಕ್ ಮಾಡಿ ಬೇರೆ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದ ಎರಡು ಗೋಡನ್ ಮೇಲೆ ಪೊಲೀಸರು ದಾಳಿ ನಡೆಸಿ, 8 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ಕಿ, ಎರಡು ಲಾರಿ, ಕಾರ್,ಬೈಕ್, ಮೊಬೈಲ್ ಹಾಗೂ ನಗದು ವಶಕ್ಕೆ ಪಡೆದಿದ್ದು, 8 ಜನರನ್ನು ಬಂಧಿಸಿದ್ದಾರೆ.

ಈ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಕ್ವಾಡಿ ಬಳಿ ಕುಂಭಾಶಿ ರಸ್ತೆ ವಕ್ವಾಡಿ ಗಣೇಶ ನಗರ ನಿವಾಸಿಗಳಾದ ಅಬ್ದುಲ್ ಸತ್ತಾರ್ (28), ಅಬ್ದುಲ್ ಅಜೀಜ್ (25) ಹಾಗೂ ಕೋಟೇಶ್ವರ ಗ್ರಾಮ ಮೇಪು ಮನೆಯಲ್ಲಿ ಮೂಡುಗೋಪಾಡಿ ಗ್ರಾಮ ನಿವಾಸಿ ಇಸ್ಮಾಯಿಲ್ ಬ್ಯಾರಿ (35), ಕೋಟೇಶ್ವರ ಗ್ರಾಮ ಹಳೇ ಅಳಿವೆ ಬೀಚ್ ರಸ್ತೆ ನಿವಾಸಿ ಮುಸ್ತಾಫ್ (32), ಕೋಡಿ ನಿವಾಸಿ ತೌಫೀಕ್ (34), ಹಂಗಳೂರು ನಿವಾಸಿ ಉಬೇದುಲ್ಲಾ (20), ಕೇರಳ ರಾಜ್ಯ ಕಣ್ಣೂರು ಜಿಲ್ಲೆ ಕುರುವ ನಿವಾಸಿ ಮಹಮ್ಮದ್ (50), ಬೆಳ್ತಂಗಡಿ ತಾಲೂಕು ಸೊಣಂದೂರು ಗ್ರಾಮ ನಿವಾಸಿ ನಿಯಾಜ್ ಬ್ಯಾರಿ (30) ಬಂಧಿತರು.
ವಕ್ವಾಡಿ ಬ್ಯಾರಿ ಬ್ರದರ್ಸ್ ಹೋಲೋ ಬ್ಲಾಕ್ ಶೆಡ್ ಬಳಿ 3,79,500 ಮೌಲ್ಯದ 25,300 ಕೇಜಿ ಅಕ್ಕಿ ಲಾರಿ, ಕಾರ್, ಇಲೆಕ್ಟ್ರಾನಿಕ್ ತೂಕಮಾಪಕ, ಲ್ಯಾಪ್ಟಾಪ್, 2,57,850 ರೂ. ನಗದು ಹಾಗೂ ಎರಡು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಮೇಪು ಮನೆಯಿಂದ 4 ಲಕ್ಷ 62 ಸಾವಿರದ ಒಟ್ಟು 30,800 ಕೇಜಿ ಅಕ್ಕಿ, ಲಾರಿ, ಮೋಟಾರು ಸೈಕಲ್, ಇಲೆಕ್ಟ್ರಾನಿಕ್ ಮೆಷಿನ್, 16940 ರೂ. ನಗದು 7 ಮೊಬೈಲ್ ಪೋನ್ ವಶಕ್ಕೆ ಪಡೆಯಲಾಗಿದೆ.
ಅಕ್ಕಿಯನ್ನು ಕೇರಳ ಸೇರಿದಂತೆ ಅನ್ಯ ರಾಜ್ಯಗಳಿಗೆ ಕಳುಹಿಸಲಾಗುತ್ತಿತ್ತು ಎನ್ನಲಾಗಿದೆ. ಉಡುಪಿ ಜಿಲ್ಲೆಯಲ್ಲಿಯೇ ಇದು ಬೆಳಕಿಗೆ ಬಂದ ಅತೀ ದೊಡ್ಡ ಪ್ರಕರಣ ಎನ್ನಲಾಗುತ್ತಿದೆ.
ಡಿಸಿಐಬಿ ಮಂಜಪ್ಪ ನೇತೃತ್ವದಲ್ಲಿ ಆಹಾರ ಮತ್ತು ನಾಗರಿಕ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.