ಕರಾವಳಿ

ತುಳು ನಿಘಂಟು ರಚನೆಕಾರ ಡಾ.ಯು.ಪಿ ಉಪಾಧ್ಯಾಯರ ಸಾಧನೆ ಅಗ್ರಮಾನ್ಯ : ಡಾ.ಕೆ.ಪದ್ಮನಾಭ ಕೇಕುಣ್ಣಾಯ

Pinterest LinkedIn Tumblr

ತುಳು ನಿಘಂಟು ರಚನೆಯಲ್ಲಿ ಡಾ.ಯು.ಪಿ ಉಪಾಧ್ಯಾಯರು ಬೇರೆ ಭಾಷೆಯ ನಿಘಂಟಿಗೆ ಮಾದರಿಯಾಗಿ ಕೆಲಸ ಮಾಡಿದರು – ಡಾ.ಕೆ.ಪದ್ಮನಾಭ ಕೇಕುಣ್ಣಾಯ

ಮಂಗಳೂರು : ‘ಬಹುಭಾಷಾ ವಿದ್ವಾಂಸ , ಸಂಶೋಧಕ, ತುಳು ನಿಘಂಟು ರಚನೆಕಾರ ಡಾ.ಉಳಿಯಾರು ಪದ್ಮನಾಭ ಉಪಾಧ್ಯಾಯ ಇವರು ಮಾಡಿದ ಸಾಧನೆ ಅಗ್ರಮಾನ್ಯ.

ತಮ್ಮ ಭಾಷಾನುಭವ, ಅಧ್ಯಯನದ ಅನುಭವಗಳಿಂದಾಗಿ ಭಾರತೀಯ ಭಾಷೆಗಳಲ್ಲೂ ಇದುವರೆಗೂ ಬಂದಿರದ ವೈಶಿಷ್ಟ್ಯ ಪೂರ್ಣ, ವಿದ್ವತ್‌ಪೂರ್ಣ ತುಳು ನಿಘಂಟನ್ನು ತಯಾರಿಸಿಕೊಟ್ಟ ಡಾ.ಯು.ಪಿ ಉಪಾಧ್ಯಾಯರ ತಾಳ್ಮೆ,ಶಕ್ತಿ ಅದ್ಭುತವಾದುದು’ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ತುಳು ನಿಘಂಟು ಯೋಜನೆಯಲ್ಲಿ ಸಂಶೋಧಕರಾಗಿ ಕೆಲಸ ಮಾಡಿದ ಡಾ.ಕೆ. ಡಾ.ಕೆ.ಪದ್ಮನಾಭ ಕೇಕುಣ್ಣಾಯ ನುಡಿದರು.

ಸಂಶೋಧಕ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ.ಆಶೋಕ ಆಳ್ವ ಮಾತನಾಡಿ, ಡಾ. ಯು.ಪಿ.ಉಪಾಧ್ಯಾಯರು ಎರಡು ದಶಕಗಳ ನಿಘಂಟು ರಚನೆಗೆ ಹಗಲು ರಾತ್ರಿ ಶ್ರಮಿಸಿದ್ದಾರೆ ‘ಎಂದು ನುಡಿದರು.

ಹಿರಿಯ ಯಕ್ಷಗಾನ ವಿದ್ವಾಂಸ ಮತ್ತು ನಿವೃತ್ತ ಪ್ರಾಚಾರ್ಯ ಡಾ. ಎಂ.ಪ್ರಭಾಕರ ಜೋಶಿ ಮಾತನಾಡಿ, ಪ್ರತಿ ವರ್ಷ ತುಳು ಭಾಷೆಗೆ ಸಂಬಂಧ ಪಟ್ಟ ಕೆಲಸವನ್ನು ಮಾಡುವುದರ ಮೂಲಕ ನಾವು ಡಾ.ಯು.ಪಿ.ಉಪಾಧ್ಯಾಯರನ್ನು ನೆನಪಿಸಬೇಕು’ ಎಂದರು.

ತುಳು ಸಾಹಿತ್ಯ ಅಕಾಡೆಮಿಯ ಸಿರಿಚಾವಡಿಯಲ್ಲಿ ಡಾ.ಯು.ಪಿ ಉಪಾಧ್ಯಾಯರಿಗೆ ಸಂತಾಪ ಸಭೆಯನ್ನು  ಆಯೋಜಿಸಲಾಗಿತ್ತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ದಯಾನಂದ ಜಿ.ಕತ್ತಲ್‌ಸಾರ್ ಅಧ್ಯಕ್ಷತೆಯನ್ನು ವಹಿಸಿ ಡಾ. ಯು.ಪಿ ಉಪಾಧ್ಯಾಯ ಮತ್ತು ಸುಶೀಲಾ ಉಪಾಧ್ಯಾಯ ದಂಪತಿಗಳು ಈ ನೆಲಕ್ಕೆ ತೌಳವ ಮಾತೆ ಇತ್ತ ಪ್ರಸಾದ. ಅಹರ್ನಿಶಿ ತುಳು ನಿಘಂಟಿಗಾಗಿ ದುಡಿದು ಆರು ಸಂಪುಟವನ್ನು ಈ ನೆಲಕ್ಕಿತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪರಿಷ್ಕ್ರತ ತುಳು ನಿಘಂಟನ್ನು ಮುಂದುವರಿಸಲು ಸರಕಾರಕ್ಕೆ ಅನುದಾನಕ್ಕಾಗಿ ಮನವಿಯನ್ನು ನೀಡಲಾಗುವುದು,ಇವರ ಸಂಸ್ಮರಣೆ ಮಾಡುವುದು ಸರ್ವ ತುಳುವರ ಕರ್ತವ್ಯ ಎಂದರು.

ಉದ್ಯಮಿ ಮತ್ತು ಯಕ್ಷಗಾನ ಸಂಘಟಕ ಶ್ರೀ ರಘುರಾಂ ಶೆಟ್ಟಿ ಭಾಗವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ರಾಜೇಶ್.ಜಿ. ಅಕಾಡೆಮಿಯ ಸದಸ್ಯರಾದ ಚೇತಕ್ ಪೂಜಾರಿ, ನಿಟ್ಟೆ ಶಶಿಧರ್ ಶೆಟಿ ಉಪಸ್ಥಿತರಿದ್ದರು. ಅಕಾಡೆಮಿಯ ಸದಸ್ಯ ನಾಗೇಶ್ ಕುಲಾಲ್ ಕಾರ್‍ಯಕ್ರಮವನ್ನು ನಿರೂಪಿಸಿದರು.

Comments are closed.