ಕುಂದಾಪುರ: ಭಾನುವಾರದಂದು ಕೊಡೇರಿ ದೋಣಿ ದುರಂತ ಪ್ರಕರಣ ನಡೆದ ಕೊಡೇರಿ ಬಂದರು ಸಮೀಪದ ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮೀನುಗಾರರ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ ಸೋಮವಾರ ಮಧ್ಯಾಹ್ನ ಭೇಟಿ ನೀಡಿ ಸ್ಥಳೀಯ ಮೀನುಗಾರರು ಮತ್ತು ಮೀನುಗಾರ ಮುಖಂಡರಿಂದ ಮಾಹಿತಿ ಪಡೆದರು.
ಈ ಸಂದರ್ಭ ಮಾತನಾಡಿದ ಅವರು, ಕೊರೋನಾ ಮಹಾಮಾರಿಯ ಪಿಡುಗಿನ ವೇಳೆಯಿಂದ ಬಾರೀ ಸಂಕಷ್ಟದಲ್ಲಿರುವ ಮೀನುಗಾರರಿಗೆ ನಿನ್ನೆ ನಡೆದ ಘಟನೆ ಮತ್ತೊಂದು ಹೊಡೆತ ನೀಡಿದೆ. ಜೀವದ ಹಂಗು ತೊರೆದು ಮೀನುಗಾರಿಕೆಗೆ ತೆರಳಿದ ವೇಳೆ ಕೊಡೇರಿಯಲ್ಲಿ ನಡೆದ ಈ ಘಟನೆ ನೋವುಂಟು ಮಾಡಿದ್ದು ಶಾಸಕರು ಹಾಗೂ ಸಚಿವರ ಬಳಿ ಮಾತನಾಡಿ ಮೃತ ಮೀನುಗಾರರ ಕುಟುಂಬಕ್ಕೆ ಸರಕಾರದಿಂದ ಗರಿಷ್ಟ ಪ್ರಮಾಣದ ಪರಿಹಾರ ನೀಡಲು ಮನವಿ ಮಾಡಲಾಗುತ್ತದೆ. ಕರಾವಳಿ ಭಾಗದ ಅಷ್ಟೂ ಜೆಟ್ಟಿಗಳನ್ನು ಅಭಿವೃದ್ದಿಗೊಳಿಸಿ ಸರ್ವ ಋತು ಬಂದರು ನಿರ್ಮಾಣಗೊಳಿಸಿದಲ್ಲಿ ಇಂತಹ ಅವಘಡಗಳನ್ನು ತಪ್ಪಿಸಿ ಮೀನುಗಾರರು ನೆಮ್ಮದಿಯಿಂದಿರಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದರು.
ಪ್ರವಾಸದಲ್ಲಿರುವ ಮೀನುಗಾರಿಕಾ ಸಚಿವರು ಒಂದೆರಡು ದಿನದಲ್ಲಿ ಇಲ್ಲಿನ ಜೆಟ್ಟಿ ಹಾಗೂ ಮೃತ ಮೀನುಗಾರರ ಮನೆಗಳಿಗೆ ಭೇಟಿ ನೀಡಲಿದ್ದು ಈ ವೇಳೆ ಮೀನುಗಾರ ಮುಖಂಡರು ಹಾಗೂ ಇಲಾಖಾಧಿಕಾರಿಗಳ ಸಭೆ ನಡೆಸಿ ಶಾಶ್ವತ ಕ್ರಮದ ಬಗ್ಗೆ ಚರ್ಚಿಸಲಾಗುವುದು. ಗಂಗೊಳ್ಳಿ ಹಾಗೂ ಬೈಂದೂರು ವಲಯದಲ್ಲಿ ಶೇಖಡಾ 80 ರಷ್ಟು ಮಂದಿ ದೋಣಿಗಳ ಮೂಲಕ ಮೀನುಗಾರಿಕೆ ನಡೆಸುತ್ತಿದ್ದು ಅವರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಗರಿಷ್ಟ ಅನುದಾನ ತರುವಲ್ಲಿ ಸ್ಥಳೀಯ ಸಂಸದ ಬಿ.ವೈ ರಾಘವೇಂದ್ರ ಅವರು ಮುತುವರ್ಜಿ ವಹಿಸುತ್ತಿದ್ದಾರೆ. ಕೊರೋನದಿಂದಾಗಿ ಬಹಳಷ್ಟು ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದು ಮೀನುಗಾರಿಕೆಯಲ್ಲಿ ವಿಫುಲ ಅವಕಾಶಗಳಿರುವ ಹಿನ್ನೆಲೆ ಅನುದಾನ ಹೆಚ್ಚಿಸಿದಲ್ಲಿ ಸಹಕಾರಿಯಾಗಲಿದೆ ಎಂದ ಅವರು ಕೊಡೇರಿ ದೋಣಿ ದುರಂತ ಪ್ರಕರಣದಲ್ಲಿ ನೊಂದ ಮೀನುಗಾರರ ಕುಟುಂಬಕ್ಕೆ ಸರಕಾರದ ಜೊತೆ ವೈಯಕ್ತಿಕವಾಗಿ ಹಾಗೂ ಸಂಘಸಂಸ್ಥೆಗಳು ಜೊತೆಯಾಗಿರಲಿದೆ ಎಂದರು.
ಈ ಸಂದರ್ಭ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ನಿಯಮಿತ ಮಂಗಳೂರು ಇದರ ನಾಮನಿರ್ದೇಶಕ ಸದಾನಂದ ಬಳ್ಕೂರು, ನಾಡ ದೋಣಿ ಸಂಘ ಬೈಂದೂರು ವಲಯದ ಅಧ್ಯಕ್ಷ ಆನಂದ ಖಾರ್ವಿ, ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟದ ಅಧ್ಯಕ್ಷ ವೆಂಕಟರಮಣ ಖಾರ್ವಿ ಮೊದಲಾದವರಿದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.