ಕುಂದಾಪುರ: ಎರಡು ವಾರಗಳ ಅಂತರದಲ್ಲಿ ಹಾಡಿಯೊಂದರ ಒಂದೇ ಸ್ಥಳದಲ್ಲಿ ಎರಡು ಕೋಣಗಳ ಮೃತದೇಹ ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಆಲೂರು ಸಮೀಪದ ನಾರ್ಕಳಿ ಹರ್ಕೂರು ಮೂರುಕೈ ಎಂಬಲ್ಲಿ ಈ ಘಟನೆ ನಡೆದಿದೆ.






ಕಳೆದರೆಡು ವಾರಗಳ ಹಿಂದೆ ಇಲ್ಲಿನ ಹಾಡಿಯ ಒಂದು ಕಡೆ ಕೋಣವೊಂದರ ಶವ ಪತ್ತೆಯಾಗಿದ್ದು ಸ್ಥಳೀಯರ ಗಮನಕ್ಕೆ ಬಂದಾಗ ಅದನ್ನು ಹೂತುಹಾಕಿದ್ದರು. ಆದರೆ ಭಾನುವಾರವೂ ಅದೇ ಸ್ಥಳದಲ್ಲಿ ಮತ್ತೊಂದು ಕೋಣದ ಮೃತದೇಹ ಪತ್ತೆಯಾಗಿದ್ದು ಸ್ಥಳೀಯರಿಗೆ ತಿಳಿದುಬಂದಿದ್ದು ಗಂಗೊಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಗಂಗೊಳ್ಳಿ ಪಿಎಸ್ಐ ಭೀಮಾಶಂಕರ್ ಹಾಗೂ ಸಿಬ್ಬಂದಿಗಳು ಹಾಗೂ ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕೋಣದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ. ಯಾರೋ ಉದ್ದೇಶಪೂರ್ವಕ ತಂದೆಸಿದಿದ್ದಾರೆಂಬ ಗುಮಾನಿಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಒಂದು ತಿಂಗಳ ಹಿಂದೆಯೂ ಕೂಡ ಇಲ್ಲಿಗೆ ಸಮೀಪದ ಸ್ಥಳವೊಂದರಲ್ಲಿ ಎರಡು ಜಾನುವಾರುಗಳ ಮೃತದೇಹ ಪತ್ತೆಯಾಗಿತ್ತು.
ಸ್ಥಳಕ್ಕೆ ಭೇಟಿ ನೀಡಿದ ಪಿಎಸ್ಐ ಭೀಮಾಶಂಕರ್ ಅವರು ಮಾತನಾಡಿ, ಈ ಭಾಗದಲ್ಲಿ ಗಸ್ತು ವ್ಯವಸ್ಥೆ ಇನ್ನಷ್ಟು ಹೆಚ್ಚಿಸಲಾಗುತ್ತದೆ. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಟಿವಿ ಅಳವಡಿಕೆಗೂ ಗ್ರಾಮಪಂಚಾಯತಿಗೆ ಸೂಚಿಸಲಾಗುತ್ತದೆ ಎಂದಿದ್ದಾರೆ.
ಸ್ಥಳೀಯರ ಮಾನವೀಯ ಕಾರ್ಯ…
ಮಳೆಯ ನಡುವೆಯೂ ಜೆಸಿಬಿ ವಾಹನದ ಮೂಲಕ ಹೊಂಡ ತೆಗೆಸಿ ಕೋಣದ ಶವವನ್ನು ಹೂಳುವ ಮಾನವೀಯ ಕಾರ್ಯವನ್ನು ಮಾಡಲಾಯಿತು. ಬಿಜೆಪಿ ವಂಡ್ಸೆ ಮಹಾಶಕ್ತಿಕೇಂದ್ರದ ಅಧ್ಯಕ್ಷ ನಾಗರಾಜ ಶೆಟ್ಟಿ ನಾರ್ಕಳಿ, ಸ್ಥಳೀಯರಾದ ಪ್ರದೀಪ್ ಶೆಟ್ಟಿ, ಸಂತೋಷ್ ಪೂಜಾರಿ, ಸುನೀಲ್ ಪೂಜಾರಿ ಮೊದಲಾದವರು ಈ ಸಂದರ್ಭ ಇದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.