ಮಂಗಳೂರು : ರೈಲ್ವೇ ಖಾಸಗೀಕರಣ ವಿರೋಧಿಸಿ ಹಾಗೂ ಸಾರ್ವಜನಿಕ ಉದ್ದಿಮೆಗಳ ಸರ್ವನಾಶಕ್ಕೆ ಪಣ ತೊಟ್ಟಿರುವ ಕೇಂದ್ರದ ನರೇಂದ್ರ ಮೋದಿ ಸರಕಾರದ ವಿರುದ್ದ ಸಿಐಟಿಯು ನೇತ್ರತ್ವದಲ್ಲಿ ಮಂಗಳೂರು ನಗರದಲ್ಲಿ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಿಐಟಿಯುಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿಯವರು, ದೇಶದ ಅಭಿವೃದ್ಧಿಗೆ ಮಾರಕವಾದ ಕೇಂದ್ರದ ನರೇಂದ್ರ ಮೋದಿ ಸರಕಾರವು ದೇಶದ ಅಮೂಲ್ಯ ಸಂಪತ್ತುಗಳಾದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ದೇಶದ ಆರ್ಥಿಕತೆಯನ್ನು ಕೊಳ್ಳೆ ಹೊಡೆಯುತ್ತಿದೆ.
ಕಲ್ಲಿದ್ದಲು, ವಿಮೆ,ರಕ್ಷಣೆ,ಬ್ಯಾಂಕ್,ಬಂದರು,ವಿಮಾನ ನಿಲ್ದಾಣ,ಸಾರಿಗೆ ಸೇರಿದಂತೆ ಎಲ್ಲವನ್ನೂ ಖಾಸಗೀಕರಣಗೊಳಿಸಿದ ಮೋದಿ ಸರಕಾರ ಇದೀಗ ಅತ್ಯಂತ ಲಾಭದಾಯಕ ಸಂಸ್ಥೆಯಾದ ರೈಲ್ವೇಯನ್ನು ಖಾಸಗೀಕರಣಗೊಳಿಸಲು ಹೊರಟಿರುವುದು ತೀರಾ ಖಂಡನೀಯವಾಗಿದೆ.
ಜನಸಾಮಾನ್ಯರು ಅತ್ಯಲ್ಪ ವೆಚ್ಚದಲ್ಲಿ ಇಡೀ ದೇಶವನ್ನು ಸುತ್ತಾಡಲು ಇರುವ ಏಕೈಕ ವ್ಯವಸ್ಥೆಯಾದ ರೈಲ್ವೇಯು ಸ್ವಾತಂತ್ರ್ಯ ಪೂರ್ವದಲ್ಲಿದ್ದು, ದೇಶವನ್ನು ಒಂದಾಗಿಸಲು ಅಪಾರ ಕೊಡುಗೆ ನೀಡಿದೆ.ಅತ್ಯಂತ ಲಾಭದಾಯಕವಾದ ರೈಲ್ವೇಯನ್ನು ಸರ್ವನಾಶಗೈಯ್ಯಲು ಹೊರಟಿರುವ ಮೋದಿ ಸರಕಾರವು ನಿಜಕ್ಕೂ ದೇಶದ್ರೋಹಿ ಸರಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ, ಕೋರೋನಾ ಸಂಧರ್ಭದಲ್ಲಿ ಪ್ರಧಾನಿಯವರು ಪ್ರಸ್ತಾಪಿಸಿದ ಆತ್ಮನಿರ್ಭರದ ಅರ್ಥ ಸ್ವಾವಲಂಬನೆಯಾಗಿ ದ್ದು, ಆ ಮೂಲಕ ದೇಶದ ಸಾರ್ವಜನಿಕ ಸಂಸ್ಥೆಗಳನ್ನು ಉಳಿಸಿ ಬೆಳೆಸಬೇಕಾಗಿದೆ.ಆದರೆ ಮೋದಿ ಸರಕಾರವು ಅದಕ್ಕೆ ವ್ಯತಿರಿಕ್ತವಾಗಿ ವರ್ತಿಸುತ್ತಿದ್ದು, ಆತ್ಮನಿರ್ಭರದ ಹೆಸರಿನಲ್ಲಿ ಇಡೀ ದೇಶವನ್ನೇ ಲೂಟಿಗೈಯ್ಯುತ್ತಿದೆ. ಅಪಾರ ಭೂ ಸಂಪತ್ತನ್ನು ಹೊಂದಿರುವ ರೈಲ್ವೇ ಸಂಪೂರ್ಣ ಖಾಸಗೀಕರಣ ಗೊಂಡರೆ ಮುಂದಿನ ಅಪಾಯವನ್ನು ದೇಶದ ಜನತೆ ಅರ್ಥೈಸಬೇಕಾಗಿದೆ* ಎಂದು ಹೇಳಿದರು.
ಸಿಐಟಿಯು ದ.ಕ.ಜಿಲ್ಲಾಧ್ಯಕ್ಷರಾದ ಜೆ.ಬಾಲಕ್ರಷ್ಣ ಶೆಟ್ಟಿಯವರು ಮಾತನಾಡುತ್ತಾ, ಈ ಮೊದಲೇ ದೇಶದ ಆರ್ಥಿಕತೆಯನ್ನು ಸರ್ವನಾಶಗೈದ ನರೇಂದ್ರ ಮೋದಿ ಸರಕಾರವು ಕೋರೋನಾ ಸಂಧರ್ಭದಲ್ಲೂ ಮತ್ತಷ್ಟು ಜನರನ್ನು ಸಂಕಷ್ಟಕ್ಕೆ ದೂಡುವ ಮೂಲಕ ಅರ್ಥ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಮುಖಂಡರಾದ ಜಯಂತಿ ಬಿ.ಶೆಟ್ಟಿ, ಭಾರತಿ ಬೋಳಾರ, ಜಯಲಕ್ಷ್ಮಿ, ಬಾಬು ದೇವಾಡಿಗ ಸಿಐಟಿಯು ಮಂಗಳೂರು ನಗರ ನಾಯಕರಾದ ಸುರೇಶ್ ಬಜಾಲ್, ಅಶೋಕ್ ಸಾಲ್ಯಾನ್, ಕ್ರಷ್ಣಪ್ಪ ಗೌಡ, ನಾಗೇಶ್ ಕೋಟ್ಯಾನ್, ಹರೀಶ್ ಪೂಜಾರಿ,ದಯಾನಂದ ಕೊಪ್ಪಲಕಾಡು,ಮುಝಾಫರ್, ತಿಮ್ಮಯ್ಯ ಕೊಂಚಾಡಿ ಮುಂತಾದವರು ಭಾಗವಹಿಸಿದ್ದರು.
Comments are closed.