ಮಂಗಳೂರು, ಜುಲೈ.30: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಬೆಳಗಾವಿಯ ಜಿಲ್ಲಾ ಪಂಚಾಯತ್ ಸಿ.ಇ.ಓ ಆಗಿದ್ದ ಡಾ.ರಾಜೇಂದ್ರ ಕೆ.ವಿ ಅವರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು,ಡಾ. ಕೆ.ವಿ. ರಾಜೇಂದ್ರ ಅವರು ಇಂದು ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು.
ನಿರ್ಗಮಿತ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರು (ಪ್ರಭಾರ) ನೂತನ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಡಾ. ಕೆ.ವಿ. ರಾಜೇಂದ್ರ ಅವರು ದ.ಕ. ಜಿಲ್ಲೆಯ 130ನೇ ಜಿಲ್ಲಾಧಿಕಾರಿಯಾಗಿದ್ದಾರೆ. ಮೂಲತಃ ಶಿವಮೊಗ್ಗದ ತೀರ್ಥಹಳ್ಳಿಯವರಾಗಿರುವ ಇವರು ಸಿ.ಇ.ಎಸ್ ಹೈ ಸ್ಕೂಲ್ ಚಳಗೇರಿ ಹಾವೇರಿ ಯಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿದ್ದರು. ಜಗದ್ಗುರು ಜಯದೇವ ಮುರುಘರಾಜೇಂದ್ರ ವೈದ್ಯಕೀಯ ಮಹಾವಿದ್ಯಾಲಯ ದಾವಣಗೆರೆಯಲ್ಲಿ ತಮ್ಮ ವೈದ್ಯಕೀಯ ಶಿಕ್ಷಣ ಪೂರೈಸಿದ್ದರು.
ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಇವರು ನಂತರ ನಾಗರಿಕ ಸೇವೆ ಆಸಕ್ತಿಯಿಂದ ಐಎಎಸ್ ಪರೀಕ್ಷೆ ಬರೆದು ದೇಶದಲ್ಲಿ 32 ನೇ ರ್ಯಾಂಕ್ ಮತ್ತು ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದ್ದರು.ಅವರು 2013 ಕರ್ನಾಟಕ ಕೆಡೆರ್ ನ ಐಎಸ್ ಅಧಿಕಾರಿಯಾಗಿದ್ದಾರೆ. ಡಾ. ರಾಜೇಂದ್ರ ಕೆ.ವಿ ಅವರು ಈ ಹಿಂದೆ ಪುತ್ತೂರಿನಲ್ಲಿ ಸಹಾಯಕ ಕಮೀಷನರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.
ಸುಧಾರಣೆ ಅಗತ್ಯವಿರುವಲ್ಲಿ ಸುಧಾರಣೆ – ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ
ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ನೂತನ ಜಿಲ್ಲಾಧಿಕಾರಿಗಳು, ಸದ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಉತ್ತಮ ಕೆಲಸ ಕಾರ್ಯಗಳನ್ನುಮುಂದುವರಿಸುತ್ತೇನೆ. ಎಲ್ಲೆಲ್ಲಿ ಸುಧಾರಣೆ ಅಗತ್ಯವಿದೆ ಈ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈಗಷ್ಟೇ ಅಧಿಕಾರ ಸ್ವೀಕರಿಸಿದ್ದೇನೆ. ಮೊದಲು ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಇಲ್ಲಿನ ಸಮಸ್ಯೆ, ಸವಾಲುಗಳ ಕುರಿತು ತಿಳಿದುಕೊಂಡು ಬಳಿಕ ಮುಂದಿನ ಯೋಜನೆಗಳ ಬಗ್ಗೆ ಚಿಂತಿಸಲಾಗುವುದು. ದ.ಕ ಜಿಲ್ಲೆಯಲ್ಲಿ ಈ ಹಿಂದೆ ಕೂಡಾ ಕೆಲಸ ಮಾಡಿ ಅನುಭವವಿದೆ. ಸದ್ಯದ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಅಗತ್ಯವಿರುವಲ್ಲಿ ಸುಧಾರಣೆ ತರುತ್ತೇನೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ದಿಢೀರ್ ವರ್ಗಾವಣೆ:
ಜಿಲ್ಲೆಯಲ್ಲಿ ನಡೆಯುತ್ತಿರುವ ಗೋವು ಸಾಗಾಟಗಾರರ ಮೇಲಿನ ಹಲ್ಲೆ, ದರೋಡೆ ಕೃತ್ಯಗಳ ಬಗ್ಗೆ ಧ್ವನಿ ಎತ್ತಿದ್ದ ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರನ್ನು ದಿಢೀರ್ ಆಗಿ ವರ್ಗಾವಣೆ ಮಾಡಲಾಗಿದೆ.
ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಅದೇಶ ಹೊರಡಿಸಿತ್ತು. ಸಿಂಧೂ ರೂಪೇಶ್ ಅವರನ್ನು ಸರ್ಕಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಇ -ಆಡಳಿತ ವಿಭಾಗದ ನಿರ್ದೆಶಕಿಯನ್ನಾಗಿ ನಿಯೋಜಿಸಿ ಬೆಂಗಳೂರಿಗೆ ವರ್ಗಾವಣೆ ಮಾಡಿದೆ.
Comments are closed.