ಕರಾವಳಿ

ದ.ಕ.ಜಿಲ್ಲೆಯಲ್ಲಿ ನಾಳೆಯಿಂದ ಲಾಕ್‌ಡೌನ್ ತೆರವು : ಎಲ್ಲಾ ವಾಣಿಜ್ಯ ವ್ಯವಹಾರಕ್ಕೆ ಗ್ರೀನ್ ಸಿಗ್ನಲ್

Pinterest LinkedIn Tumblr

ಮಂಗಳೂರು, ಜುಲೈ 22 : ಕೊರೋನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಕಳೆದ ಒಂದು ವಾರಗಳಿಂದ ದ.ಕ.ಜಿಲ್ಲೆಯಲ್ಲಿ ಜಾರಿಯಲ್ಲಿದ್ದ ಲಾಕ್ ಡೌನ್ ನಾಳೆ ಕೊನೆಗೊಳ್ಳಲಿದೆ. ದ.ಕ. ಜಿಲ್ಲೆಯಲ್ಲಿ ನಾಳೆ (ಗುರುವಾರ) ಬೆಳಗ್ಗೆ 5 ಗಂಟೆಯ ಬಳಿಕ ಲಾಕ್ ಡೌನ್ ತೆರವುಗೊಳ್ಳಲಿದೆ. ಬಳಿಕ ಜಿಲ್ಲೆಯಲ್ಲಿ ಯಾವುದೇ ಲಾಕ್ ಡೌನ್ ಇರುವುದಿಲ್ಲ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಈಗಾಗಲೇ ಲಾಕ್ ಡಾನ್ ಜಾರಿಯಲ್ಲಿದ್ದು, ಜುಲೈ 22ರ ಬುಧವಾರ ಸಂಜೆ ಲಾಕ್ ಡೌನ್ ಅವಧಿ ಮುಗಿಯಲಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವ ಕಾರಣ ಒಂದು ವಾರಗಳ ಕಾಲ ವಿಧಿಸಲಾಗಿರುವ ಲಾಕ್ ಡೌನ್ ಅನ್ನು ಮತ್ತೊಂದು ವಾರಗಳ ಕಾಲ ವಿಸ್ತರಣೆ ಮಾಡಲು ಜಿಲ್ಲೆಯ ಜನಪ್ರತಿನಿಧಿಗಳು, ಸಾರ್ವಜನಿಕರು ಒಲವು ತೋರಿದ್ದರು.

ಆದರೆ ಸೋಮವಾರ ಫೇಸ್ ಬುಕ್ ಲೈವ್ ನಲ್ಲಿ ರಾಜ್ಯದ ಜನತೆಯೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಕೋವಿಡ್ ತಡೆಯಲು ಲಾಕ್‌ಡೌನ್ ಒಂದೇ ಪರಿಹಾರವಲ್ಲ. ಹೀಗಾಗಿ ಇನ್ನು ಮುಂದೆ ಬೆಂಗಳೂರು ಸಹಿತವಾಗಿ ರಾಜ್ಯದ ಯಾವುದೇ ಭಾಗದಲ್ಲಿ ಲಾಕ್‌ಡೌನ್ ಇರುವುದಿಲ್ಲ. ಸರ್ಕಾರಕ್ಕೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣವೂ ಮುಖ್ಯ. ಹಾಗಾಗಿ ಇನ್ನು ಮುಂದೆ ಯಾವುದೇ ಲಾಕ್ ಡೌನ್ ಇರುವುದಿಲ್ಲ. ಲಾಕ್ ಡೌನ್ ಹೊರತು ಪಡಿಸಿ ಬೇರೆ ಕ್ರಮಗಳನ್ನು ಕೈಗೊಳ್ಳಿ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಸೋಂಕು ತಡೆಗಟ್ಟಬೇಕು ಎಂದು ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಹಿಲ್ಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಜತೆ ಲಾಕ್ ಡೌನ್ ಬಗ್ಗೆ ಚರ್ಚೆ ನಡೆಸಿದ್ದೇನೆ. ಮುಖ್ಯಮಂತ್ರಿಗಳು ಲಾಕ್ ಡೌನ್ ಮುಂದುವರೆಸದಂತೆ ಸೂಚನೆ ನೀಡಿದ್ದಾರೆ. ಅವರ ಸಲಹೆಯಂತೆ ಲಾಕ್ ಡೌನ್ ಮುಂದುವರೆಸದಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ರಾತ್ರಿ 8 ಗಂಟೆಯ ನಂತರದ ಕರ್ಫ್ಯೂ ಮತ್ತು ಭಾನುವಾರದ ಲಾಕ್‌ಡೌನ್ ಮುಂದುವರಿಕೆ :

ಆದರೆ, ದ.ಕ.ಜಿಲ್ಲೆಯಲ್ಲಿ ಈಗಾಗಲೇ ಜಾರಿಯಲ್ಲಿರುವ ರಾತ್ರಿ 8 ಗಂಟೆಯಿಂದ ಮರುದಿನ ಬೆಳಗ್ಗಿನವರೆಗಿನ ಕರ್ಫ್ಯೂ ಹಾಗೂ ಭಾನುವಾರದ ಲಾಕ್ ಡೌನ್ ಮುಂದೆಯೂ ಜಾರಿಯಲ್ಲಿರುತ್ತದೆ. ಇನ್ನು ಈ ಬಗ್ಗೆ ಅಧಿಕೃತ ಆದೇಶ ಹಾಗೂ ಮಾರ್ಗಸೂಚಿಗಳನ್ನು ಜಿಲ್ಲಾಧಿಕಾರಿಗಳು ಹೊರಡಿಸಲಿ್ದ್ದಾರೆ ಎಂದು ಸಚಿವ ಕೋಟ ತಿಳಿಸಿದ್ದಾರೆ.

Comments are closed.