ಕರಾವಳಿ

ಕಾರ್‌ಸ್ಟ್ರೀಟ್ ಕಾಲೇಜು ವಿದ್ಯಾರ್ಥಿಗಳಿಂದ ಭತ್ತದ ಕೃಷಿ ಹಾಗೂ ನಾಟಿ ಕಾರ್ಯಕ್ರಮ

Pinterest LinkedIn Tumblr

ಮಂಗಳೂರು ಜುಲೈ 19 : ಡಾ.ಪಿ. ದಯಾನಂದ ಪೈ. ಪಿ. ಸತೀಶ್‌ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥ ಬೀದಿ ಮಂಗಳೂರು ಇದರ ವಿದ್ಯಾರ್ಥಿಗಳು, ಪ್ರಾಂಶುಪಾಲರು ಮತ್ತು ರಾಷ್ಟ್ರೀಯ ಸೇವಾ ಯೋಜನೆ ಪ್ರಾಧ್ಯಪಕರಿಂದ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಕೃಷಿ ಇಲಾಖೆ ಮಂಗಳೂರು ಇವರ ವತಿಯಿಂದ ‌ಕೋಟೆಕಾರು, ಮಡ್ಯಾರಿನ “ಜನನಿ” ಪ್ರೇಮಾ ಫಾರ್ಮ ಹೌಸ್‌ ಬಗಂಬಿಲಾ ಗುತ್ತು ಹೌಸ್‌ ಜಗದೀಶ್‌ ಕೋಟ್ಯಾನ್‌ ರವರ ಗದ್ದೆಯಲ್ಲಿ ಕರಾವಳಿ ಭತ್ತದ ಕೃಷಿ ಹಾಗೂ ನಾಟಿ ಕಾರ್ಯಕ್ರಮ ಮಾಡಲಾಯಿತು.

ಭತ್ತದಲ್ಲಿ ತಳಿಗಳ ಆಯ್ಕೆ, ಭೂಮಿ ಸಿದ್ದತೆ, ಸಸಿ ಮಾಡಿ ತಯಾರಿಕೆ, ನಾಟಿ ಮಾಡುವ ವಿಧಾನ ಹಾಗೂ ನಾಟಿ ಮಾಡಲು ಅನುಸರಿಸುವ ಕ್ರಮಗಳು/ತಾಂತ್ರಿಕತೆಗಳ ಕುರಿತು ಹಾಗೂ ನೇರ ಬಿತ್ತನೆ ಮತ್ತು ನಾಟಿ ಮಾಡುವ ಪದ್ದತಿಯ ವ್ಯತ್ಯಾಸ ಕುರಿತು ನೆರೆದಿದ್ದ ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ಮಾಹಿತಿ ನೀಡಲಾಯಿತು.

ಮುಖ್ಯವಾಗಿ ನೇರ ಬಿತ್ತನೆಯಲ್ಲಿ ಹೆಚ್ಚು ಪ್ರಮಾಣದ ಬೀಜಗಳ ಅವಶ್ಯಕತೆ ಇದ್ದು, ನೇರ ಬಿತ್ತನೆಯಲ್ಲಿ ಸಸಿಗಳ ಏಕರೂಪತೆ ಕಂಡು ಬರುವುದಿಲ್ಲ ಹಾಗೂ ನೇರ ಬಿತ್ತನೆಯಲ್ಲಿ ಹೆಚ್ಚಿನ ಕಳೆಗಳ ತೊಂದರೆ ಉಂಟಾಗುವುದೆಂದು ತಿಳಿಸಲಾಯಿತು.

ಆದರೆ ನಾಟಿ ಪದ್ದತಿಯಲ್ಲಿ ಮೊದಲು ನೇಜಿಗಳನ್ನು ತಯಾರಿಸಿ 18-21 ದಿವಸದ ಸಸಿಗಳನ್ನು ಆಯ್ಕೆ ಮಾಡಿಕೊಂಡು ಮುಖ್ಯ ಗದ್ದೆಗಳಲ್ಲಿ ನಾಟಿ ಮಾಡಲಾಗುವುದು. ಈ ಸಮಯದಲ್ಲಿ ಸಸಿಗಳನ್ನು ಹೆಚ್ಚು ಆಳವಾಗಿ ನಾಟಿ ಮಾಡದೆ 3-4 ಸೆಂ.ಮೀ ಆಳಕ್ಕೆ ನಾಟಿ ಮಾಡುವುದರಿಂದ ಬಹಳ ಬೇಗ ಸಸಿಗಳ ನಾಟಿಯ ಆಘಾತದಿಂದ ಚೇತರಿಸಿಕೊಳ್ಳುತ್ತವೆ ಹಾಗೂ ಇದಕ್ಕಿಂತ ಆಳ ಮಾಡಿದಲ್ಲಿ ಸಸಿಗಳು ನಾಟಿ ಆಘಾತದಿಂದ ಮತ್ತು ಕಡಿಮೆ ಆಳ ನಾಟಿ ಮಾಡಿದಲ್ಲಿ ನೀರಿನ ರಭಸಕ್ಕೆ ಕೊಚ್ಚಿ ಹೋಗುವ ಸಾಧ್ಯತೆಗಳಿರುತ್ತವೆ. ಕೈ ನಾಟಿಗಿಂತಲೂ ಯಾಂತ್ರೀಕೃತ ನಾಟಿ ಮಾಡಿಸುವುದರಿಂದ ಹೆಚ್ಚಿನ ಏಕರೂಪತೆ ಹಾಗೂ ಉತ್ತಮ ಇಳುವರಿ ಪಡೆಯಬಹುದಾಗಿದೆ ಎಂದು ತಿಳಿಸಲಾಯಿತು.

Comments are closed.